14 ದಿನ ನ್ಯಾಯಾಂಗ ಬಂಧನಕ್ಕೆ ಮನ್ಸೂರ್‌ ಖಾನ್

Update: 2019-08-01 14:09 GMT

ಬೆಂಗಳೂರು, ಆ.1: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಜಾರಿ ನಿರ್ದೇಶನಾಲಯ(ಈ.ಡಿ) ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆವರೆಗೆ ಮನ್ಸೂರ್‌ನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗುವುದು.

ಗುರುವಾರ ಈ.ಡಿ ಕಸ್ಟಡಿಯ ಕಾಲಾವಕಾಶ ಮುಗಿದ ಕಾರಣ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದಾಗ ಸಂಬಂಧಿಗಳು, ಸೇಹಿತರು ಭೇಟಿಯಾದರೆ ವಿಚಾರಣೆ ಅಡ್ಡಿಯಾಗುತ್ತದೆ. ಹೀಗಾಗಿ, ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಈ ಕೋರಿಕೆಗೆ ಕೂಡ ಕೋರ್ಟ್ ಒಪ್ಪಿಗೆ ಸೂಚಿಸಿದೆ.

ಮನ್ಸೂರ್ ಪರ ವಾದ ಮಂಡಿಸಿದ ವಕೀಲ ಸಿ.ಕೆ.ನಂದಕುಮಾರ್, ಮನ್ಸೂರ್ ಖಾನ್ ತೀವ್ರ ಎದೆನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ಅಕ್ಯೂಟ್ ಕೊರೊನರಿ ಸಿಂಡ್ರೋಮ್ ಕಾಯಿಲೆ ಇದೆ. ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಹೀಗಾಗಿ, ವಿಕ್ಟೋರಿಯಾದಲ್ಲಿ ಚಿಕಿತ್ಸೆ ಕೊಡಿಸಲು ಕೋರ್ಟ್ ಅನುಮತಿ ನೀಡಬೇಕೆಂದು ಹೇಳಿದ್ದಾರೆ. ಆದರೆ, ವಿಕ್ಟೋರಿಯಾದಲ್ಲಿ ಚಿಕಿತ್ಸೆ ಕೊಡಿಸಲು ಎಸ್‌ಐಟಿ, ಈ.ಡಿ ಅಧಿಕಾರಿಗಳು ಒಪ್ಪಿಗೆ ನೀಡದ ಕಾರಣ ಅಂತಿಮವಾಗಿ ಜಯದೇವ ಆಸ್ಪತ್ರೆಯಲ್ಲಿ ಮನ್ಸೂರ್‌ಗೆ ಚಿಕಿತ್ಸೆ ನೀಡಲು ನ್ಯಾಯಾಂಗ ಅನುಮತಿ ನೀಡಿದೆ. ಆದರೆ, ಆಸ್ಪತ್ರೆಯಲ್ಲಾಗಲೀ, ಜೈಲಿನಲ್ಲಾಗಲೀ ಆತ ಯಾರನ್ನೂ ಭೇಟಿಯಾಗಬಾರದು ಎಂದು ಸೂಚನೆ ನೀಡಿದೆ.

ಕಾರಾಗೃಹಕ್ಕೆ ಕರೆದುಕೊಂಡು ಹೋಗಲು ನಕಾರ: ಮನ್ಸೂರ್‌ಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದರೂ ಆತನನ್ನು ಜೈಲಿಗೆ ಕರೆದುಕೊಂಡು ಹೋಗಲು ಈ.ಡಿ ಅಧಿಕಾರಿಗಳು ಹಿಂದೆಮುಂದೆ ನೋಡಿದರು. ಆರೋಪಿಯನ್ನು ಕಾರಾಗೃಹ ಬಂಧನಕ್ಕೆ ನೀಡಿರುವುದರಿಂದ ಜೈಲು ಅಧಿಕಾರಿಗಳೇ ಯಾರಾದರೂ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿ ಎಂದು ಈ.ಡಿ ವಕೀಲರು ವಾದ ಮಂಡಿಸಿದರು.
ಅದಕ್ಕೆ ಪ್ರತಿಯಾಗಿ ಪ್ರಶ್ನೆ ಮಾಡಿದ ನ್ಯಾಯಾಧೀಶರು, ಅದೆಲ್ಲ ಹೇಗೆ ಸಾಧ್ಯವಾಗುತ್ತದೆ. ನಿಮ್ಮ ವಶದಲ್ಲಿರುವ ಆರೋಪಿಯನ್ನು ನೀವೇ ಕರೆದುಕೊಂಡು ಹೋಗಬೇಕು. ಅಲ್ಲಿಗೆ ನೀವು ಆತನನ್ನು ಸೇರಿಸಿದ ಬಳಿಕ ಕಾರಾಗೃಹ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು ಹೇಳಿದರು. ಆದರೂ ವಕೀಲರು, ಆರೋಪಿಗೆ ತೀವ್ರ ಜೀವಬೆದರಿಕೆ ಇದೆ. ಆತನಿಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಅಷ್ಟೆಲ್ಲ ವೆಪನ್‌ಗಳಿಲ್ಲ. ಅದಕ್ಕಾಗಿ ಜೈಲು ಅಧಿಕಾರಿಗಳೇ ಆತನನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿ ಎಂದು ಮತ್ತೆ ವಾದಿಸಿದರು. ಆದರೆ, ಕೊನೆಗೂ ನ್ಯಾಯಾಧೀಶರು ಒಪ್ಪದೆ, ಇಲ್ಲ ಆತನನ್ನು ನೀವೆ ಜೈಲಿಗೆ ಕರೆದುಕೊಂಡು ಹೋಗಬೇಕು ಎಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News