ಬೆಂಗಳೂರು: ಎಲ್ಲ ವಾರ್ಡ್‌ಗಳಲ್ಲಿಯೂ ದಾಸ್ತಾನು ಕೇಂದ್ರ ಆರಂಭಕ್ಕೆ ಚಿಂತನೆ; ಮೇಯರ್ ಗಂಗಾಂಬಿಕೆ
ಬೆಂಗಳೂರು, ಆ.1: ಬಡವರಿಗೆ ಅನುಕೂಲವಾಗುವಂತೆ ಬಿಬಿಎಂಪಿ ಸಹಯೋಗದೊಂದಿಗೆ ಎಲ್ಲ ವಾರ್ಡ್‌ಗಳಲ್ಲಿಯೂ ವಸ್ತುಗಳ ದಾಸ್ತಾನು ಕೇಂದ್ರ ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ.
ನಗರದಲ್ಲಿಂದು ಯುವ ಚಿಂತನಾ ಫೌಂಡೇಶನ್ ಸಹಯೋಗದೊಂದಿಗೆ ಆರಂಭ ಮಾಡಿರುವ ದಾಸ್ತಾನು ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಉಚಿತ ಸೌಲಭ್ಯ ನೀಡುವ ದಾಸ್ತಾನುಕೇಂದ್ರಗಳಿವೆ ಎಂದು ಕೇಳಲ್ಪಟ್ಟಿದ್ದೆ. ಇದೇ ಮೊದಲ ಬಾರಿಗೆ ನೋಡಿದ್ದೇನೆ. ಇದರಿಂದ ಜನರಿಗೆ ಉಪಯೋಗವಾಗಲಿದ್ದು, ಎಲ್ಲ ವಾರ್ಡ್‌ಗಳಲ್ಲಿಯೂ ಇಂತಹವುಗಳ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.
ದಾನ ಎನ್ನುವುದು ಅತ್ಯಂತ ಶ್ರೇಷ್ಠ. ಪ್ರತಿಯೊಬ್ಬರೂ ತಮ್ಮ ಬಳಿಯ ವಸ್ತುಗಳನ್ನು ದಾನ ಮಾಡಿದರೆ, ಬಡವರು ಸದುಪಯೋಗ ಪಡಿಸಿಕೊಳ್ಳುತ್ತಾರೆ. ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳು ಸರಕಾರಗಳ ಜೊತೆ ಕೈ ಜೋಡಿಸಬೇಕು ಎಂದು ಮೇಯರ್ ಗಂಗಾಂಬಿಕೆ ಸಲಹೆ ನೀಡಿದರು.
ಶಾಸಕ ಎನ್.ಎ.ಹಾರಿಸ್ ಮಾತನಾಡಿ, ಬಡವರಿಗೆ ದಾನ ಮಾಡಲು ಮುಂದಾಗಬೇಕು. ನಮ್ಮ ಬಳಿಯ ಅಗತ್ಯಕ್ಕಿಂತ ಅಧಿಕ ವಸ್ತುಗಳು ಇದ್ದರೆ, ಅದನ್ನು ಬೇರೆಯವರಿಗೆ ಹಂಚಿಕೆ ಮಾಡಬೇಕು. ಆಗ ಮಾತ್ರ, ನಮ್ಮ ಸುತ್ತಮುತ್ತಲಿನ ಸಮಾಜ ಬದಲಾವಣೆ ಆಗಲು ಸಾಧ್ಯ ಎಂದು ನುಡಿದರು.
ಫೌಂಡೇಶನ್ ಮುಖ್ಯಸ್ಥೆ ಅನುಪಮಾ ಮಾತನಾಡಿ, ಮುಂದಿನ ದಿನಗಳಲ್ಲಿ ಆಹಾರವನ್ನು ಬಿಸಿ ಮಾಡಿಕೊಡುವ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚಿಂತಿಸಲಾಗುವುದು. ಸಾಮಾಜಿಕ ಜಾಲತಾಣದ ಮೂಲಕ ಇದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಆಸಕ್ತರು ಕೈ ಜೋಡಿಸಿದರೆ ಇನ್ನೂ ಹೆಚ್ಚಿನ ಮಂದಿಗೆ ನೆರವಾಗಬಹುದು. ಮನೆಗಳಲ್ಲಿ ಬಳಸದೆ ಉಳಿದ ಆಹಾರ, ಬಟ್ಟೆ, ಪದಾರ್ಥಗಳನ್ನು ಇಲ್ಲಿ ತಂದಿಡಬಹುದು ಎಂದು ಮಾಹಿತಿ ನೀಡಿದರು.