15-20 ದಿನದೊಳಗೆ ಕಿಸಾನ್ ಯೋಜನೆ ಮೊದಲ ಕಂತು ಪಾವತಿಗೆ ಕ್ರಮ: ಮುಖ್ಯಮಂತ್ರಿ ಬಿಎಸ್‌ವೈ
ಬೆಂಗಳೂರು, ಆ. 2: ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಕೇಂದ್ರ ಸರಕಾರ ರೈತರಿಗೆ ವಾರ್ಷಿಕ 6 ಸಾವಿರ ರೂ.ನೀಡುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ 4 ಸಾವಿರ ರೂ.ಘೋಷಿಸಿದ್ದು ಯೋಜನೆ ಜಾರಿಗೆ ಇನ್ನೆರಡು ದಿನಗಳಲ್ಲಿ ಸರಕಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಕಂತಿನ 2 ಸಾವಿರ ರೂ.ಇನ್ನು 15-20 ದಿನದೊಳಗೆ ರೈತರಿಗೆ ಪಾವತಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ನೀರು ಪೂರೈಕೆ: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಇದ್ದು, ಜನವರಿಯಿಂದ ಮೇ 31ರ ವರೆಗೆ ಪೂರ್ವ ಮುಂಗಾರು ಸರಾಸರಿ ಶೇ.42ರಷ್ಟು ಕೊರತೆ ಇದೆ. ಮುಂಗಾರು ಪ್ರವೇಶ 2 ವಾರ ತಡವಾಗಿದ್ದಲ್ಲದೆ, ಈ ವರೆಗೆ ವಾಡಿಕೆ ಮಳೆಗಿಂತ ಶೇ. 18ರಷ್ಟು ಮಳೆ ಕೊರತೆ ಇದೆ.
ಜುಲೈ ತಿಂಗಳಲ್ಲಿಯೂ 3067ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ಇಲ್ಲವೆ ಖಾಸಗಿ ಬೋರ್‌ವೆಲ್ ಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಬರ ಸ್ಥಿತಿಯ ಗಂಭೀರತೆಗೆ ಸಾಕ್ಷಿ ಎಂದ ಅವರು, ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಮೇವು ಲಭ್ಯತೆ ಮತ್ತು ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವ ಮೂಲಕ ಜನ ವಲಸೆ ಹೋಗುವುದನ್ನು ತಡೆಗಟ್ಟಲು ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಬರ ಪರಿಹಾರ ಕಾರ್ಯಗಳಿಗಾಗಿ ಈ ವರೆಗೆ 618.1 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 422 ಕೋಟಿ ರೂ.ಅನುದಾನ ಲಭ್ಯವಿದೆ. ಬರ ಪರಿಹಾರ, ತುರ್ತು ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಗ್ರಾಮೀಣ ಪ್ರದೇಶಕ್ಕೆ ಟ್ಯಾಂಕರುಗಳಿಂದ, ಖಾಸಗಿ ಬೋರ್‌ವೆಲ್ ಗಳ ಮೂಲಕ ನೀರು ಪೂರೈಕೆ ಮಾಡುವಾಗ ಟ್ಯಾಂಕರು ಸ್ವಚ್ಛತೆ ಕಡೆಗೆ ನಿಗಾ ವಹಿಸುವಂತೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ಅವರು ಸೂಚಿಸಿದರು.
‘ಪ್ರವಾಹ’ ಮುನ್ನಚ್ಚರಿಕೆ ವಹಿಸಿ: ಜಾನುವಾರುಗಳಿಗೆ ನೀರು, ಮೇವಿನ ಲಭ್ಯತೆ, ಅಗತ್ಯವಿದ್ದಲ್ಲಿ ಮೇವು ಬ್ಯಾಂಕ್ ಸ್ಥಾಪನೆ, ಗೋಶಾಲೆಗಳನ್ನು ತೆರೆಯುವುದು ಮೊದಲಾದ ಕ್ರಮಗಳನ್ನು ಅಗತ್ಯವನ್ನಾಧರಿಸಿ ಕೈಗೊಳ್ಳಬೇಕು ಎಂದ ಅವರು, ಕೆಲ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಇರುವುದರಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆಂದು ನಿರ್ದೇಶನ ನೀಡಿದರು.
ಪ್ರಕೃತಿ ವಿಕೋಪ ನಿರ್ವಹಣೆಯೊಂದಿಗೆ ಸಾರ್ವಜನಿಕರ ಕುಂದು ಕೊರತೆ ನಿವಾರಣೆ, ಕಾಲಮಿತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ, ಸಕಾಲದಲ್ಲಿ ಅರ್ಜಿಗಳು, ಕಂದಾಯ ನ್ಯಾಯಾಲಯಗಳ ಪ್ರಕರಣಗಳ ಇತ್ಯರ್ಥ ಮಾಡಬೇಕು ಎಂದು ಯಡಿಯೂರಪ್ಪ ತಿಳಿಸಿದರು.
ಮುಖ್ಯ ಕಾರ್ಯದರ್ಶಿಗಳು ತಿಂಗಳಿಗೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಿಗೆ ಕನಿಷ್ಠ 2ಬಾರಿ ಜಿಲ್ಲೆಗಳಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು 15 ದಿನಗಳಿಗೊಮ್ಮೆ ಕ್ಷೇತ್ರ ಭೇಟಿ ಮಾಡಬೇಕು. ಈ ವೇಳೆ ಕೆಳಹಂತದಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಕ್ರಮ ವಹಿಸಬೇಕು. ಸರಕಾರ ನಡೆಸುವ ವಿದ್ಯಾರ್ಥಿ ನಿಲಯಗಳಿಗೆ ಭೇಟಿ, ಯೋಜನೆಗಳ ಅನುಷ್ಠಾನ, ಬರ, ಉದ್ಯೋಗ ಖಾತರಿ ಅನುಷ್ಠಾನಕ್ಕೆ ಆಸ್ಥೆ ವಹಿಸಬೇಕು ಎಂದು ಅವರು ತಿಳಿಸಿದರು.
ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸಿಎಂ ಸಲಹೆಗಾರ ಲಕ್ಷ್ಮಿ ನಾರಾಯಣ, ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
‘ರಾಜ್ಯದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇಂಧನ ಇಲಾಖೆ ಆಧಿಕಾರಿಗಳು ಸತಾಯಿಸಿದರೆ ಪರಿಸ್ಥಿತಿ ಸರಿ ಇರುವುದಿಲ್ಲ. ಅಧಿಕಾರಿಗಳು ಯಾವುದೇ ಒತ್ತಡಗಳಿಗೆ ಸೊಪ್ಪುಹಾಕದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು’
-ಯಡಿಯೂರಪ್ಪ, ಮುಖ್ಯಮಂತ್ರಿ
‘ಒಬ್ಬರಿದ್ದರೂ ಸರಕಾರವೇ, ಇಪ್ಪತ್ತೈದು ಮಂದಿ ಇದ್ದರೂ ಸರಕಾರವೇ. ಆ.6, 7, 8ರಂದು ಹೊಸದಿಲ್ಲಿಗೆ ತೆರಳಲಿದ್ದು, ಸಚಿವ ಸಂಪುಟ ರಚನೆ ಸಂಬಂಧ ವರಿಷ್ಠರೊಂದಿಗೆ ಚರ್ಚಿಸುವೆ. ಪ್ರತಿನಿತ್ಯದ ಕೆಲಸಗಳಿಗೆ, ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆ ಇಲ್ಲ. ವರ್ಗಾವಣೆ ಸರಕಾರದ ಸಹಜ ಪ್ರಕ್ರಿಯೆ’
-ಯಡಿಯೂರಪ್ಪ, ಮುಖ್ಯಮಂತ್ರಿ