ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಅಗತ್ಯ: ಆಂಧ್ರ ಪ್ರವಾಸೋದ್ಯಮ ಇಲಾಖೆ ಪ್ರ.ಕಾರ್ಯದರ್ಶಿ ಪ್ರವೀಣ್ ಕುಮಾರ್

Update: 2019-08-02 16:28 GMT

ಬೆಂಗಳೂರು, ಆ.2: ವಿಶ್ವದ ಅನೇಕ ರಾಷ್ಟ್ರಗಳು ಪ್ರವಾಸೋದ್ಯಮದಿಂದ ಬರುವ ಆದಾಯವನ್ನೆ ನಂಬಿಕೊಂಡಿವೆ. ನಮ್ಮ ದೇಶದಲ್ಲಿಯೂ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಆಕರ್ಷಣೀಯಗೊಳಿಸಲು ವಿಫುಲವಾದ ಅವಕಾಶಗಳು ಲಭ್ಯವಿದೆ ಎಂದು ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಹೇಳಿದರು.

ಶುಕ್ರವಾರ ಬೆಂಗಳೂರು ಅರಮನೆ ಆವರಣದಲ್ಲಿ ಆಯೋಜಿಸಲಾಗಿರುವ ಇಂಡಿಯಾ ಇಂಟರ್‌ನ್ಯಾಷನಲ್ ಟ್ರಾವೆಲ್ ಮಾರ್ಟ್‌ನ 114ನೇ ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. 20 ವರ್ಷಗಳ ಹಿಂದೆ ಭಾರತದಲ್ಲಿ ಇದ್ದಂತಹ ಪ್ರವಾಸೋದ್ಯಮದ ಕಲ್ಪನೆಗೂ ಇಂದಿಗೂ ಬಹಳ ವ್ಯತ್ಯಾಸವಿದೆ. ಪ್ರತಿಯೊಂದು ರಾಜ್ಯವು ಹೊಸ ಹೊಸ ಪ್ರವಾಸೋದ್ಯಮ ಕ್ಷೇತ್ರಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲು ಆದ್ಯತೆ ನೀಡುತ್ತಿವೆ. ಇವತ್ತು ಪ್ರವಾಸೋದ್ಯಮ ಕ್ಷೇತ್ರವು ಆದಾಯದ ಬಹುದೊಡ್ಡ ಮಾರ್ಗವಾಗಿದೆ ಎಂದು ಅವರು ಹೇಳಿದರು.

ದೇಶದ ಜಿಡಿಪಿ ಬೆಳವಣಿಗೆಗೆ ಪ್ರವಾಸೋದ್ಯಮ ಕ್ಷೇತ್ರವು ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಇವತ್ತು ಉದ್ಘಾಟನೆಗೊಂಡಿರುವ ಈ ಪ್ರದರ್ಶನ ಮೇಳ ಮೂರು ದಿನಗಳ ಕಾಲ ನಡೆಯಲಿದೆ. 15 ದೇಶಗಳು ಹಾಗೂ 20 ರಾಜ್ಯಗಳ ಸುಮಾರು 450 ಪ್ರತಿನಿಧಿಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರು ಹೇಳಿದರು.

ಸ್ಪೇರ್ ಟ್ರಾವೆಲ್ ಮಿಡಿಯಾ ಸಂಸ್ಥೆಯ ನಿರ್ದೇಶಕ ಸಂಜಯ್ ಹಾಕು ಮಾತನಾಡಿ, ನ್ಯೂಝಿಲ್ಯಾಂಡ್, ಕೊರಿಯಾ ಹಾಗೂ ಬಹ್ರೈನ್ ಈ ವರ್ಷದ ಇಂಡಿಯಾ ಇಂಟರ್‌ನ್ಯಾಷನಲ್ ಟ್ರಾವೆಲ್ ಮಾರ್ಟ್‌ನ ಪಾಲುದಾರ ರಾಷ್ಟ್ರಗಳಾಗಿವೆ ಎಂದರು.

ಕರ್ನಾಟಕವು ಈ ಮೇಳದ ಆತಿಥ್ಯವನ್ನು ವಹಿಸಿದ್ದು, ಗುಜರಾತ್, ಕೇರಳ, ರಾಜಸ್ಥಾನ ಪಾಲುದಾರ ರಾಜ್ಯಗಳಾಗಿವೆ. ಗೋವಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳು ಭವಿಷ್ಯದಲ್ಲಿ ಈ ಮೇಳಗಳ ಆತಿಥ್ಯವನ್ನು ವಹಿಸಲಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಆಂಧ್ರಪ್ರದೇಶ ಪ್ರವಾಸೋದ್ಯಮ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಕುಮಾರ್, ಅಂಡಮಾನ್ ಟೂರ್ ಆಪರೇಟರ್‌ಗಳ ಸಂಘದ ಅಧ್ಯಕ್ಷ ವಿನೋದ್, ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್ ನಿರ್ದೇಶಕ ರೋಹಿತ್ ಹಾನ್ಗಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News