ರಸ್ತೆ ಸುರಕ್ಷತೆಗಾಗಿ ಎಲ್ಲರೂ ಒಗ್ಗೂಡಬೇಕು: ಕೆಎರ್ಸ್ಸಾಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ

Update: 2019-08-03 14:55 GMT

ಬೆಂಗಳೂರು, ಆ.3: ರಸ್ತೆ ಸುರಕ್ಷತೆಯನ್ನು ಕಾಪಾಡುವ ಹಾಗೂ ಸುಧಾರಿಸುವ ನಿಟ್ಟಿನಲ್ಲಿ ಎಲ್ಲಾ ಪಾಲುದಾರರು ಒಗ್ಗೂಡಬೇಕಾದ ಅವಶ್ಯಕತೆ ಇದೆ ಎಂದು ಕೆಎರ್ಸ್ಸಾಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅಭಿಪ್ರಾಯಪಟ್ಟರು.

ಬಾಷ್ ಸಂಸ್ಥೆಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು ನಮಗೆ ಬಲವಾದ ರಾಜಕೀಯ ಇಚ್ಛಾಶಕ್ತಿ, ಸಮರ್ಥ ಆಡಳಿತಾತ್ಮಕ ಮತ್ತು ಜವಾಬ್ದಾರಿಯುತ ನಾಗರಿಕರ ಅವಶ್ಯಕತೆಯಿದೆ ಎಂದು ತಿಳಿಸಿದರು.

ಅತ್ಯಂತ ದುರ್ಬಲ ಬಳಕೆದಾರ, ಪಾದಚಾರಿಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯವನ್ನು ವಿನ್ಯಾಸಗೊಳಿಸಬೇಕು. ಅಭಿಯಾನಗಳಿಗಿಂತ ಹೆಚ್ಚಾಗಿ ವ್ಯವಸ್ಥೆಗಳು ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ರಸ್ತೆ ಸುರಕ್ಷತೆ ಒಂದು ಅಭಿಯಾನವಾಗಿ ಮಾತ್ರವಲ್ಲ ಅದರೊಂದಿಗೆ ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಶಿಕ್ಷಣವನ್ನು ಸಂಯೋಜನೆಯೊಂದಿಗೆ ವ್ಯವಸ್ಥೆಗಳನ್ನು ವಿನ್ಯಾಸ ಮಾಡುವುದು ಮತ್ತು ಮಾನವ ದೋಷವನ್ನು ಗಣನೆಗೆ ತೆಗೆದುಕೊಳ್ಳುವುದು ಅತೀ ಪ್ರಮುಖವಾದ ಅಂಶವಾಗಿರಬೇಕೆಂದು ಹೇಳಿದರು.

ಕೆರ್ಸ್ಸಾಟಿಸಿಯು ರಸ್ತೆ ಸುರಕ್ಷತೆಯಲ್ಲಿನ ನಿಯಮಗಳನ್ನು ಕಾಪಾಡುವ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಜಾರಿಗೊಳಿಸಿದ್ದು, ರಾಜ್ಯದಾದ್ಯಂತ ನಿಯಮಿತವಾಗಿ ಚಾಲಕರುಗಳಿಗೆ ತರಬೇತಿ, ಹೊಸ ತಂತ್ರಜ್ಞಾನಗಳನ್ನು ಅಳವಡಿಕೆ, ಕ್ರೋಡೀಕರಿಸಿರುವ ದತ್ತಾಂಶಗಳ ನಿರಂತರ ವಿಶ್ಲೇಷಣೆ, ಕೃತಕ ಬುದ್ಧಿವಂತಿಕೆಯನ್ನು ಉಪಯೋಗಿಸಿ ಚಾಲಕರನ್ನು ಜಾಗೃತಗೊಳಿಸುವ ಉಪಕ್ರಮಗಳಿಗೆ ಪ್ರಾಯೋಗಿಕ ಚಾಲನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಗರ್ರೋ ಸಾಫ್ಟ್‌ವೇರ್ ಕಂಪನಿಯ ಸಾರಿಕಾ ಪಾಂಡ ಮಾತನಾಡಿ, ಹರಿಯಾಣದಲ್ಲಿ ವಿಷನ್ ಝೀರೊ ಕಾರ್ಯಕ್ರಮವನ್ನು ರೂಪಿಸಿದ್ದು, ಕಳೆದ 2 ವರ್ಷಗಳಲ್ಲಿ 4,000ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ಅಧ್ಯಯನ ಮಾಡಲಾಗಿದೆ. ಇದರಿಂದ ಹರಿಯಾಣದ ಪ್ರತಿ ಜಿಲ್ಲೆಯ ರಸ್ತೆ ಸುರಕ್ಷತೆಯನ್ನು ಪರಿಹರಿಸಲು ಸುರಕ್ಷಿತ ವ್ಯವಸ್ಥೆಯ ವಿಧಾನವನ್ನು ಅಳವಡಿಸಿ, ಈಗಾಗಲೇ ಅಪಘಾತದಿಂದ ಉಂಟಾಗುವ ಸಾವು ನೋವುಗಳಲ್ಲಿನ ಪ್ರಮಾಣ ಕಡಿಮೆಯಾಗುವುದನ್ನು ನಾವು ನೋಡುತ್ತಿದ್ದೇವೆ. ರಾಜ್ಯದಲ್ಲಿಯೂ ಇದೇ ರೀತಿಯ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬಹುದೆಂದು ತಿಳಿಸಿದರು.

ಸಮ್ಮೇಳನದಲ್ಲಿ ಆರ್‌ಬಿಇಬಿಎಸ್‌ನ ಉಪಾಧ್ಯಕ್ಷ ಆರ್.ಕೆ.ಶಣೈ, ಹೆಲ್ಲಾ ಇಂಡಿಯಾ ಆಟೋಮೋಟಿವ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಮಶಂಕರ್ ಪಾಂಡೆ ಹಾಗೂ ಸುರಕ್ಷತೆ ಮತ್ತು ಪರಿಸರ ಸ್ಥಿರತೆ ಕಾರ್ಯಕ್ರಮದ ಸಂಯೋಜಕಿ ಸುಷ್ಮಾ ಮಹಾಬಲ ಉಪಸ್ಥಿತರಿದ್ದರು.

ಸೆನ್ಸಾರ್‌ಅನ್ನು ಬಸ್ಸಿಗೆ ಅಳವಡಿಸಿ ಮಾರ್ಗದಲ್ಲಿ ಬಸ್ಸು ಚಲಿಸುವಾಗ ಯಾವುದೇ ವಸ್ತು ಅಡ್ಡ ಬಂದಲ್ಲಿ ಅಪಘಾತ ಮುನ್ಸೂಚನೆ ನೀಡಿ ಚಾಲಕರನ್ನು ಜಾಗೃತಗೊಳಿಸುವ ಉಪಕ್ರಮಗಳಿಗೆ ಪ್ರಾಯೋಗಿಕ ಚಾಲನೆ ನೀಡಲಾಗಿದೆ.

-ಶಿವಯೋಗಿ ಸಿ.ಕಳಸದ, ಕೆರ್ಸ್ಸಾಟಿಸಿ ವ್ಯವಸ್ಥಾಪಕ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News