ನ್ಯಾಯಾಂಗದಲ್ಲಿ ರಾಜಕೀಯ ಸಿದ್ಧಾಂತಗಳನ್ನು ತರಬೇಡಿ: ನ್ಯಾ.ಎ.ಎಸ್.ಬೆಳ್ಳುಂಕೆ

Update: 2019-08-04 16:37 GMT

ಬೆಂಗಳೂರು, ಆ.4: ವಕೀಲ ವೃತ್ತಿಗೆ ನ್ಯಾಯ ಒದಗಿಸಬೇಕಾದರೆ, ರಾಜಕೀಯ ಸಿದ್ಧಾಂತಗಳನ್ನು ನ್ಯಾಯಾಂಗದಲ್ಲಿ ತರಬಾರದು ಎಂದು ನ್ಯಾಯಮೂರ್ತಿ ಎ.ಎಸ್.ಬೆಳ್ಳುಂಕೆ ಅಭಿಪ್ರಾಯಪಟ್ಟಿದ್ದಾರೆ.

ಹೈಕೋರ್ಟ್ ಸಭಾಂಗಣ-1ರಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀಳ್ಕೋಡುಗೆ ಸ್ವೀಕರಿಸಿ ಮಾತನಾಡಿದ ಅವರು, ವಕೀಲರು ತಮ್ಮ ರಾಜಕೀಯ ಸಿದ್ಧಾಂತಗಳನ್ನು ನ್ಯಾಯಾಂಗಕ್ಕೆ ತರಬಾರದು. ಕಕ್ಷಿದಾರರ ಪರ ವಾದ ಮಾಡುವಾಗ ರಾಜಕೀಯ ಆಲೋಚನೆಗಳ ಹಿನ್ನಲೆ ಇಟ್ಟುಕೊಳ್ಳಬಾರದು. ಇಲ್ಲದಿದ್ದರೆ ಕಕ್ಷಿದಾರರಿಗೆ ಹಾಗೂ ವಕೀಲ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮಾತನಾಡಿ, ನ್ಯಾ.ಬೆಳ್ಳುಂಕೆಯವರು ವಕೀಲ ವೃತ್ತಿ ಸೇರಿದಂತೆಯೇ ನ್ಯಾಯಾಂಗದ ವ್ಯವಸ್ಥೆಯಲ್ಲಿಯೆ ಎರಡ್ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಬಳಿಕ ಹೈಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ಬಂದವರು. ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವರಲ್ಲಿರುವ ತಾಳ್ಮೆ ಹಾಗೂ ಬದ್ಧತೆಯೆ ಕಾರಣ ಎಂದು ತಿಳಿಸಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ನ್ಯಾಯಮೂರ್ತಿ ಬೆಳ್ಳುಂಕೆ ಅವರು ಒಂಬತ್ತು ತಿಂಗಳು ಕಾಲ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದರೂ ಕೆಲವೇ ದಿನ ಮಾತ್ರ ಬೆಂಗಳೂರು ನ್ಯಾಯಪೀಠದಲ್ಲಿ ಕೆಲಸ ಮಾಡಿದರು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಬೆಳ್ಳುಂಕೆ, ನಾನು ಬೆಂಗಳೂರಿನ ನ್ಯಾಯಪೀಠದಲ್ಲಿ ಕೆಲಸ ಮಾಡದೇ ಇರುವುದಕ್ಕೆ ಮುಖ್ಯ ಕಾರಣ ಇಲ್ಲಿನ ಟ್ರಾಫಿಕ್. ನನ್ನ ಮನೆ ಇರುವುದು ಜೆ.ಪಿ.ನಗರದಲ್ಲಿ ಅಲ್ಲಿಂದ ಹೈಕೋರ್ಟ್‌ಗೆ ಬರಬೇಕೆಂದರೆ ಕನಿಷ್ಠ ಒಂದೂವರೆ ತಾಸು ಬೇಕು. ಟ್ರಾಫಿಕ್‌ನಲ್ಲಿ ಬಂದು ಫೈಲ್‌ಗಳನ್ನು ಓದಿ ವಿಚಾರಣೆ ನಡೆಸುವ ಉತ್ಸಾಹವಾದರೂ ಎಲ್ಲಿರುತ್ತದೆ. ಅಲ್ಲದೆ, ಧಾರವಾಡ ನನ್ನ ಸ್ವಂತ ಊರು. ಅಲ್ಲಿದ್ದರೆ ನನ್ನ ತಂದೆ-ತಾಯಿ ಜೊತೆ ಕಾಲ ಕಳೆಯಬಹುದು ಎಂಬ ಕಾರಣಕ್ಕೆ ಧಾರವಾಡ ನ್ಯಾಯಪೀಠದಲ್ಲೇ ಕಾರ್ಯನಿರ್ವಹಿಸಿದೆ. ಹಾಗೆಂದ ಮಾತ್ರಕ್ಕೆ ಬೆಂಗಳೂರು-ಧಾರವಾಡ ನಡುವೆ ಯಾವುದೇ ತಾರತಮ್ಯ ಮಾಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News