ಸಮರ್ಪಕ ಸೇವೆ ಸಲ್ಲಿಸುವುದು ಬಿಬಿಎಂಪಿ ಕರ್ತವ್ಯ: ಆಯುಕ್ತ ಮಂಜುನಾಥ್ ಪ್ರಸಾದ್

Update: 2019-08-04 17:55 GMT

ಬೆಂಗಳೂರು, ಆ.3: ನಾಗರಿಕರು ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿದ್ದು, ಸಮರ್ಪಕ ಸೇವೆ ಸಲ್ಲಿಸುವುದು ಪಾಲಿಕೆಯ ಕರ್ತವ್ಯ ಎಂಬ ಮನೋಭಾವದಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇರುತ್ತಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

ರವಿವಾರ ನಗರದ ಪುಟ್ಟಣ್ಣ ಚೆಟ್ಟಿಪುರ ಭವನದಲ್ಲಿ ವಂದೇ ಭಾರತಂ ಸಂಸ್ಥೆ ಹಾಗೂ ಬಿಬಿಎಂಪಿಯ ಹಮ್ಮಿಕೊಂಡಿದ್ದ ಸಿಟಿಜನ್ಸ್ ಗವರ್ನೆನ್ಸ್- ಜನಶಾಸನ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದಲ್ಲಿರುವ ಸಮಸ್ಯೆಗಳಿಗೆ ಬಿಬಿಎಂಪಿ ಅಧಿಕಾರಿಗಳು ನಾಗರಿಕರ ಮೇಲೆ, ನಾಗರಿಕರು ಬಿಬಿಎಂಪಿಯ ಮೇಲೆ ದೂಷಿಸುತ್ತಾ ಬರುತ್ತಿದ್ದೇವೆ. ಆ ಧೋರಣೆ ಬದಲಾಗಿ ಇಬ್ಬರೂ ಒಂದು ಕುಟುಂಬ ಎಂದು ನಗರವನ್ನು ಸುಂದರವಾಗಿಸಲು ಮುಂದಾಗಬೇಕು. ಇಲ್ಲದಿದ್ದರೆ ನಗರ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. 200 ಚದರ ಕಿ.ಮೀ ನಿಂದ 800 ಚದರ ಕಿ.ಮೀ ನಷ್ಟು ನಗರ ಬೆಳೆದಿದ್ದು, 1.30 ಕೋಟಿ ಜನಸಂಖ್ಯೆ ಇದೆ ಎಂದು ತಿಳಿಸಿದರು.

ನಾಗರಿಕರು ಜನನ ಪ್ರಮಾಣ ಪತ್ರ ಪಡೆಯುವುದರಿಂದ ಮರಣ ಪ್ರಮಾಣ ಪತ್ರ ಗಳನ್ನು ಪಡೆಯುವ ತನಕ ಪಾಲಿಕೆಯೊಂದಿಗೆ ಅವಿನಾಭಾವ ಸಂಬಂಧವಿರುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ 26 ಆಸ್ಪತ್ರೆಗಳು, 156 ಶಾಲಾ-ಕಾಲೇಜುಗಳು, 150 ಕೆರೆಗಳು, 1,250 ಉದ್ಯಾನಗಳು, 200 ಆಟದ ಮೈದಾನಗಳು, 14 ಸಾವಿರ ಕಿ.ಮೀ ಉದ್ದದ 92 ಸಾವಿರ ರಸ್ತೆಗಳು, 842 ಕಿ.ಮೀ ರಾಜಕಾಲುವೆಗಳಿವೆ. ಇವುಗಳ ನಿರಂತರ ಸಂಬಂಧ ಹೊಂದಿರುತ್ತಾರೆ ಎಂದರು.

ನಗರದಲ್ಲಿ 25 ಸಾವಿರ ಪೌರಕಾರ್ಮಿಕರಿದ್ದು, 1.30 ಕೋಟಿ ಜನಸಂಖ್ಯೆ ಇದೆ. ಪೌರಕಾರ್ಮಿಕರು ಕಸ ಗುಡುಸಿದ ಬಳಿಕ ನಾಗರಿಕರು ತ್ಯಾಜ್ಯವನ್ನು ರಸ್ತೆಗಳಲ್ಲಿ ಬಿಸಾಡಿದರೆ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಎಲ್ಲರಲ್ಲೂ ನಮ್ಮ ನಗರ, ನಮ್ಮ ಕಸ -ನಮ್ಮ ಜವಾಬ್ದಾರಿ ಎಂಬ ಅರಿವು ಮೂಡಿದಾಗ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದರು.

ಪಾಲಿಕೆಯನ್ನು ದೂಷಿಸುವ ಬದಲು ನಾಗರಿಕರು ಕಸವನ್ನು ಒಣ, ಹಸಿ, ಸ್ಯಾನಿಟರಿ ಹಾಗೂ ಇ-ತ್ಯಾಜ್ಯವನ್ನು ವಿಂಗಡಿಸಿ ಕೊಟ್ಟರೆ ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ದು, ಸಂಸ್ಕರಿಸಿ ಗೊಬ್ಬರವನ್ನಾಗಿ ತಯಾರಿಸಲಾಗುವುದು. ನಾಗರಿಕರು ಕಸವನ್ನು ಮಿಶ್ರಣ ಮಾಡದೆ ಕೊಟ್ಟರೆ, ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಕಸದ ಸಮಸ್ಯೆ ಆರು ತಿಂಗಳಲ್ಲಿ ನಿವಾರಣೆ ಮಾಡಬಹುದು ಎಂದರು.

ನಗರ ಅಭಿವೃದ್ಧಿ ಮಾಡುವ ಜವಾಬ್ದಾರಿ ನಮ್ಮ ಮೇಲೆಯೂ ಇದೆ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಶೇ.50ರಷ್ಟು ನಾಗರಿಕರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಸಸಿಗಳನ್ನು ನೆಟ್ಟು ಪೋಷಣೆ ಮಾಡಿದರೆ ವರ್ಷದಲ್ಲಿ 50 ಲಕ್ಷ ಸಸಿ ನೆಡಬಹುದು ಎಂದು ಹೇಳಿದರು.

ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಾತನಾಡಿ, ತಮ್ಮ ವಾರ್ಡ್ ಸಮಸ್ಯೆ ಕಂಡು ಬಂದರೆ ನಾಗರಿಕರು ಜನಪ್ರತಿನಿಧಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಸಮಸ್ಯೆ ತಿಳಿಸಿದರೆ ಕೂಡಲೆ ಸಮಸ್ಯೆ ಬಗೆಹರಿಸಲಾಗುವುದು, ಇಲ್ಲವೇ ಸಂದೇಶದ ಮೂಲಕವಾದರು ಮಾಹಿತಿ ತಿಳಿಸಿ. ಇಲ್ಲವಾದರೆ ಅಧಿಕಾರಿಗಳಿಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಇದೀಗ ವಾರ್ಡ್‌ಗಳ ಸಮಸ್ಯೆ ನಿವಾರಣೆಗೆ ಎಲ್ಲಾ 198 ವಾರ್ಡ್‌ಗಳಲ್ಲೂ ವಾರ್ಡ್ ಕಮಿಟಿಗಳನ್ನು ಮಾಡಲಾಗಿದೆ ಎಂದರು.

ಅಲ್ಲದೆ, ವಾರ್ಡ್‌ಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಿ ಕೊಳ್ಳಬಹುದು. ಇಲ್ಲವೇ ವಾರ್ಡ್ ಕಚೇರಿಗಳಲ್ಲಿ ದೂರು, ಸಮಸ್ಯೆ ದಾಖಲಿಸುವ ಪುಸ್ತಕದಲ್ಲಿ ನಿಮ್ಮ ಸಮಸ್ಯೆ ತಿಳಿಸಿದರೆ ನಿಗದಿತ ಸಮಯದಲ್ಲಿ ನಿವಾರಣೆ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ರಾಜಧಾನಿಯನ್ನು ಸುಂದರ ನಗರಿಯನ್ನಾಗಿಸಬೇಕಾದರೆ ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕರು ಕೈ ಜೋಡಿಸಿ ಕೆಲಸ ಮಾಡಬೇಕು.

- ಗಂಗಾಂಬಿಕೆ, ಬಿಬಿಎಂಪಿ ಮೇಯರ್

ಪಾಲಿಕೆಗೆ ಪ್ರತಿ ವರ್ಷ 2 ಸಾವಿರ ಕೊಟಿ ರೂ.ಗಳಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಆದರೆ, ಪಾಲಿಕೆ ವರ್ಷದ ಅಭಿವೃದ್ಧಿ ಕಾರ್ಯಗಳಿಗೆ 10 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ. ಪಾಲಿಕೆ ಕೈಗೆತ್ತಿಕೊಳ್ಳುವ ಎಲ್ಲಾ ಯೋಜನೆಗಳಿಗೂ ಸಾರ್ವಜನಿಕರ ಸಹಕಾರ ಬಹುಮುಖ್ಯವಾಗಿದೆ.

- ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News