ನೇಮಕಾತಿ ಆದೇಶಕ್ಕೆ ತಡೆ ಕೋರಿ ಅರ್ಜಿ: ರಾಜ್ಯ, ಕೇಂದ್ರ ಸರಕಾರ, ಭಾಸ್ಕರ್ ರಾವ್‌ಗೆ ಸಿಎಟಿ ನೋಟಿಸ್
ಬೆಂಗಳೂರು, ಆ.5: ನಗರ ಪೊಲೀಸ್ ಆಯುಕ್ತ ಸ್ಥಾನಕ್ಕೆ ಭಾಸ್ಕರ್‌ರಾವ್ ನೇಮಕ ಆದೇಶವನ್ನು ರದ್ದುಕೋರಿ ಅಲೋಕ್‌ಕುಮಾರ್ ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣ(ಸಿಎಟಿ) ನೇಮಕಾತಿ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ, ರಾಜ್ಯ, ಕೇಂದ್ರ ಸರಕಾರ, ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಬೆಂಗಳೂರಿನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಐಪಿಎಸ್ ಅಧಿಕಾರಿ ಅಲೋಕ್‌ಕುಮಾರ್ ಅವರನ್ನು ಕೆಎಸ್‌ಆರ್‌ಪಿಗೆ ವರ್ಗಾಯಿಸಲಾಯಿತು. ಅವರ ಜಾಗಕ್ಕೆ ಭಾಸ್ಕರ್‌ರಾವ್ ಅವರನ್ನು ನೇಮಕ ಮಾಡಲಾಯಿತು. ಅಲೋಕ್‌ಕುಮಾರ್ ಅವರು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬೆಂಗಳೂರಿನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದರು. ಆದರೆ, ಅವಧಿ ಮುಗಿಯುವ ಮೊದಲೇ ಸರಕಾರ ವರ್ಗಾವಣೆ ಮಾಡಿದ್ದರಿಂದ ಸರಕಾರದ ಆದೇಶಕ್ಕೆ ತಡೆ ಕೋರಿ ಸಿಎಟಿ ಮೆಟ್ಟಿಲೇರಿದ್ದಾರೆ. ಸಿಎಟಿ ವಕೀಲರ ವಾದ ಆಲಿಸಿ ವಿಚಾರಣೆಯನ್ನು ಆ.14ಕ್ಕೆ ಮುಂದೂಡಿತು.