370ನೇ ವಿಧಿ ರದ್ದತಿ ಖಂಡಿಸಿ ಎಡಪಕ್ಷಗಳ ಜಂಟಿ ಹೋರಾಟ ಸಮಿತಿ ಪ್ರತಿಭಟನೆ

Update: 2019-08-07 12:26 GMT

ಬೆಂಗಳೂರು, ಆ.7: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ಏಕಪಕ್ಷೀಯವಾಗಿ ರದ್ದುಗೊಳಿಸಿರುವ ಕ್ರಮ ಖಂಡಿಸಿ, ಕೇಂದ್ರ ಸರಕಾರದ ವಿರುದ್ಧ ಎಡಪಕ್ಷಗಳ ಜಂಟಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಬುಧವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಹಾಗೂ ಎಐಎಫ್‌ಬಿ ನೇತೃತ್ವದ ಎಡ ಪಕ್ಷಗಳ ಜಂಟಿ ಹೋರಾಟ ಸಮಿತಿ ಸದಸ್ಯರು, ಪ್ರಜಾಸತ್ತೆ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ ನಡೆಸಿರುವ ಕೇಂದ್ರ ಸರಕಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಭಗ್ನಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ದೇಶವು ಸ್ವಾತಂತ್ರ್ಯ ಗಳಿಸಿದ ಸಂದರ್ಭದಲ್ಲಿ ಪಾಕಿಸ್ತಾನದ ಆಕ್ರಮಣಕಾರರಿಂದ ಭೀತಿ ಎದುರಿಸುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಅರಸೊತ್ತಿಗೆ ಭಾರತದ ಜೊತೆ ವಿಲೀನಗೊಳ್ಳುವ ಒಡಂಬಡಿಕೆ ಮಾಡಿಕೊಂಡಾಗ ಅದಕ್ಕೆ ಅಲ್ಲಿನ ಮಹರಾಜ ಭಾರತ ಸರಕಾರದೊಂದಿಗೆ ಸಹಿ ಹಾಕಿದ. ಅಂದಿನಿಂದ ಭಾರತ ಸಂವಿಧಾನವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸವಲತ್ತುಗಳನ್ನು ಖಾತರಿಪಡಿಸಿತ್ತು. ಆದರೆ, ಇದೀಗ ಮೋದಿ ಸರಕಾರ ಇದನ್ನು ರದ್ದು ಪಡಿಸುವ ಮೂಲಕ ಒಕ್ಕೂಟ ವ್ಯವಸ್ಥೆ ಮೇಲೆ ದಾಳಿ ನಡೆಸಿದೆ ಎಂದು ದೂರಿದರು.

ಆರೆಸ್ಸೆಸ್ ಮತ್ತು ಬಿಜೆಪಿ ಯಾವುದೇ ಬಗೆಯ ವೈವಿಧ್ಯತೆಯನ್ನು ಸಹಿಸುವುದಿಲ್ಲ. ಹಾಗಾಗಿಯೇ ಅವರು, ಜಮ್ಮು ಕಾಶ್ಮೀರ, ಲಡಾಕ್ ಪ್ರದೇಶಗಳನ್ನು ವಿಭಜಿಸಿ, ಅವುಗಳನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿಸಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಬೆಂಗಳೂರು ಕಾರ್ಯದರ್ಶಿ ಶ್ರೀನಿವಾಸ್, ಅಪ್ಪಣ್ಣ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News