73ನೇ ಸ್ವಾತಂತ್ರೋತ್ಸವಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಸಿದ್ಧತೆ ಪೂರ್ಣ
ಬೆಂಗಳೂರು, ಆ.7: 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಸಂಭ್ರಮದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಬಾರಿ 12 ಸಾವಿರ ಆಸನಗಳ ಏರ್ಪಾಡು ಮಾಡಿರುವುದು ವಿಶೇಷವಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ, ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.
ಈ ವೇಳೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮುಖ್ಯಮಂತ್ರಿಗಳು ಸ್ವಾತಂತ್ರೋತ್ಸವದ ಸಂದೇಶ ನೀಡುತ್ತಾರೆ.
ಪಥ ಸಂಚಲನ: ಪಥಸಂಚಲನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳು ಸೇರಿದಂತೆ ಕವಾಯತು ಮತ್ತು ಬ್ಯಾಂಡ್‌ನ ಒಟ್ಟು 34 ತುಕಡಿಗಗಳು ಭಾಗವಹಿಸಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 1,200 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವೀಕ್ಷಣಾ ಗ್ಯಾಲರಿಯನ್ನು ಇನ್ನಷ್ಟು ವಿಸ್ತರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ರೀತಿಯ ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ತಕ್ಷಣ ಪ್ರತಿಕ್ರಿಯಿಸಲು ಅಗತ್ಯವಿರುವಷ್ಟು ಆ್ಯಂಬುಲೆನ್ಸ್‌ಗಳನ್ನು ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಶ್ರೀನಿವಾಸ ಹೇಳಿದರು.
ಆಸನ ವ್ಯವಸ್ಥೆ
* 1,200 -ಅತಿಗಣ್ಯರಿಗೆ
* 750 -ಗಣ್ಯರು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯ ಅಧಿಕಾರಿ ಹಾಗೂ ಮಾಧ್ಯಮದವರಿಗೆ
* 2,500 -ವಿವಿಧ ಇಲಾಖೆಯ ಅಧಿಕಾರಿ, ನಿವೃತ್ತ ಸೇನಾಧಿಕಾರಿ ಹಾಗೂ ಬಿಎಸ್‌ಎಫ್ ಅಧಿಕಾರಿಗಳಿಗೆ
* 7,000 -ಸಾರ್ವಜನಿಕರಿಗೆ
ಎಲ್ಲೆಲ್ಲಿ ಪ್ರವೇಶ ?
ಗೇಟ್-1: ಗಣ್ಯರು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆ ಅಧಿಕಾರಿ, ಪತ್ರಿಕಾ ಪ್ರತಿನಿಧಿಗಳಿಗೆ
ಗೇಟ್-2: ಅತಿ ಗಣ್ಯರಿಗೆ
ಗೇಟ್-3: ಇಲಾಖೆ ಅಧಿಕಾರಿ, ನಿವೃತ್ತ ಸೇನಾಧಿಕಾರಿ, ಬಿಎಸ್‌ಎಫ್ ಅಧಿಕಾರಿಗಳಿಗೆ
ಗೇಟ್-4: ಸಾರ್ವಜನಿಕರಿಗೆ
ಧ್ವಜಾರೋಹಣದ ಸಮಯ: ಬೆಳಗ್ಗೆ 9 ಗಂಟೆಗೆ ನಡೆಯಲಿದ್ದು, ಪಾಸ್ ಉಳ್ಳವರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಆಸಕ್ತರು, ಕೆಜಿ ರಸ್ತೆಯ ಕಂದಾಯ ಭವನದಲ್ಲಿರುವ ದಕ್ಷಿಣ ಉಪವಿಭಾಗಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆ ಸಲ್ಲಿಸಿ, ಪಾಸ್‌ಗಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.