ಆ.9 ರಿಂದ 18ರ ವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ

Update: 2019-08-07 17:00 GMT

ಬೆಂಗಳೂರು, ಆ.7: ಸ್ವಾತಂತ್ರೋತ್ಸವದ ಪ್ರಯುಕ್ತ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆ.9ರಿಂದ 18ರವರೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು, ಸುಮಾರು 92 ಬಗೆಯ 2.5ಲಕ್ಷ ಹೂಗಳಿಂದ ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್‌ಗೆ ಜನ್ಮಶತಮಾನೋತ್ಸವದ ಪ್ರಯುಕ್ತ ಹೂವಿನ ಪುತ್ಥಳಿ ನಿರ್ಮಿಸಿ, ಪುಷ್ಪನಮನ ಸಲ್ಲಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಬುಧವಾರ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜಯಚಾಮರಾಜ ಒಡೆಯರ್ ಜನ್ಮಶತಮಾನೋತ್ಸವದ ನೆನಪಿಗಾಗಿ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಕಲಾಸಂಘದಿಂದ ಒಡೆಯರ್ ಹೂವಿನ ಪುತ್ಥಳಿ ಹಾಗೂ ಅವರ ಸಾಧನೆಗಳು, ಕೊಡುಗೆಗಳನ್ನು ಪರಿಚಯಿಸಲಾಗುತ್ತಿದೆ. ಜಯಚಾಮರಾಜ ಒಡೆಯರ್‌ರವರ ಹೂವಿನ ಪುತ್ಥಳಿಯೇ ಈ ಬಾರಿಯ ಫಲಪುಷ್ಪ ಪ್ರದರ್ಶನದ ಆಕರ್ಷಣೀಯ ಕೇಂದ್ರವಾಗಿರುತ್ತದೆ ಎಂದು ತಿಳಿಸಿದರು.

ಆ.9ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಮೈಸೂರು ಸಂಸ್ಥಾನದ ರಾಜಮಾತೆ ಪ್ರಮೋದಾ ದೇವಿ, ಯುವರಾಜ ಯದುವೀರ ಒಡೆಯರ್, ಶಾಸಕ ಉದಯ ಬಿ.ಗರುಡಾಚಾರ್, ಮೇಯರ್ ಗಂಗಾಂಬಿಕೆ, ಸಂಸದ ತೇಜಸ್ವಿ ಸೂರ್ಯ, ವಿಧಾನಪರಿಷತ್ ಸದಸ್ಯ ಶರವಣ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯ ಭಾಗವಹಿಸಲಿದ್ದಾರೆ.

ಗಾಜಿನ ಮನೆಯ ಆಕರ್ಷಣೆಗಳು: ಜಯಚಾಮರಾಜ ಒಡೆಯರ್ ಪುತ್ಥಳಿ, ಮೈಸೂರು ಜಯಚಾಮರಾಜ ವೃತ್ತದ ಬೃಹದಾಕಾರದ ಪುಷ್ಪ ಮಾದರಿ, ಸಿಂಹಾಸನ ಮತ್ತು ಗಜಪಡೆಗಳು, ಸಂಗೀತ ವಾದ್ಯಗಳ ಮಾದರಿ ಪುಷ್ಪ ಪ್ರದರ್ಶನ ಹಾಗೂ ಮೈಸೂರು ಸಂಸ್ಥಾನದ ಅಭಿವೃದ್ಧಿಯ ಅನಾವರಣವನ್ನು ಪುಷ್ಪಗಳಲ್ಲಿ ಬಿಂಬಿಸಲಾಗಿದೆ ಎಂದು ಅವರು ಹೇಳಿದರು.

ಮೈಸೂರಿನಲ್ಲಿರುವ ಜಯಚಾಮರಾಜ ವೃತ್ತದಲ್ಲಿರುವ ಮಂಟಪದ ಯಥಾವತ್ ಪುಷ್ಪ ಮಂಟಪ ಅನಾವರಣಗೊಳ್ಳಲಿದ್ದು, 40*40 ಅಡಿ ಪ್ರದೇಶದಲ್ಲಿ 5ಡಿ ಎತ್ತರದ ಮೆಟ್ಟಿಲುಗಳು. 10 ಅಡಿ ಎತ್ತರದ ಕಂಬಗಳು, 3ಅಡಿ ಎತ್ತರದ ಮೇಲ್ಛಾವಣಿ, 5ಅಡಿ ಎತ್ತರದ ಸ್ವರ್ಣಮಯ ಗೋಪುರ, ಹಾಗೂ 2ಅಡಿ ಎತ್ತರದ ಕಳಸವನ್ನೊಳಗೊಂಡ 27ಅಡಿ ಎತ್ತರವಿರುವ ಬೃಹತ್ ಮಂಟಪದಲ್ಲಿ ಜಯಚಾಮರಾಜ ಒಡೆಯರ್‌ರವರ ಹೂವಿನ ಪುತ್ಥಳಿ ಎಲ್ಲರ ಆಕರ್ಷಣೀಯ ಕೇಂದ್ರವಾಗಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮೈಸೂರು ಉದ್ಯಾನಕಲಾ ಸಂಘದ ಉಪಾಧ್ಯಕ್ಷ ಡಿ.ಆರ್.ವಾಸುದೇವ್, ಲಾಲ್‌ಬಾಗ್ ಸಸ್ಯತೋಟ ಉಪ ನಿರ್ದೇಶಕ ಎಂ.ಆರ್.ಚಂದ್ರಶೇಖರ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಮತ್ತಿರರಿದ್ದರು.

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಶುಲ್ಕ ನಿಗದಿ ಪಡಿಸಲಾಗಿದ್ದು, ವಯಸ್ಕರಿಗೆ 70ರೂ., ಮಕ್ಕಳಿಗೆ 20ರೂ. ಹಾಗೂ ಶಾಲಾ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ, ದಿವ್ಯಾಂಗರಿಗೆ, ಸೈನಿಕರಿಗೆ, ಅವರ ಕುಟುಂಬಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News