ಬೆಂಗಳೂರು: 370ನೇ ವಿಧಿ ರದ್ದು ವಿರೋಧಿಸಿ ಎಸ್‌ಯುಸಿಐ ಧರಣಿ

Update: 2019-08-08 17:22 GMT

ಬೆಂಗಳೂರು, ಆ.8: ಕೇಂದ್ರದ ಬಿಜೆಪಿ ಸರಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿರುವುದು ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿರುವುದನ್ನು ವಿರೋಧಿಸಿ ಗುರುವಾರ ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷದ ಬೆಂಗಳೂರು ಜಿಲ್ಲಾ ಸಮಿತಿಯು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಎಸ್‌ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯ ಎನ್.ರಾಜಶೇಖರ್ ಮಾತನಾಡಿ, ದೇಶದ ಸ್ವಾತಂತ್ರದ ಸಂದರ್ಭದಲ್ಲಿ, ಅಲ್ಲಿಯವರೆಗೂ ರಾಜರ ಆಳ್ವಿಕೆಗೆ ಒಳಪಟ್ಟು ಒಂದು ಸ್ವತಂತ್ರ ರಾಜ್ಯವಾಗಿದ್ದ ಕಾಶ್ಮೀರಕ್ಕೆ, ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಲು ಅಥವಾ ಸ್ವತಂತ್ರವಾಗಿ ಉಳಿಯಲು ಅವಕಾಶವನ್ನು ನೀಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬೇಕು ಎಂದರು.

ಆಗ ಪಾಕಿಸ್ತಾನದ ಆಕ್ರಮಣಕಾರರು ಕಾಶ್ಮೀರದ ಮೇಲೆ ದುರಾಕ್ರಮಣ ಮಾಡಿ, ಅದರ ಒಂದು ಭಾಗದ ಮೇಲೆ ತಮ್ಮ ನಿಯಂತ್ರಣವನ್ನು ಸಾಧಿಸಿದರೆ, ಇನ್ನುಳಿದ ದೊಡ್ಡ ಕಾಶ್ಮೀರದ ಭಾಗದ ಕಾಶ್ಮೀರಿ ಜನರು ರಾಷ್ಟ್ರವಾದಿ ನಾಯಕ ಶೇಖ್ ಅಬ್ದುಲ್ಲಾ ನೇತೃತ್ವದಲ್ಲಿ ಸ್ವಯಂ ಪ್ರೇರಣೆಯಿಂದ ಭಾರತಕ್ಕೆ ಸೇರಿಕೊಂಡರು. ಈ ಸೇರ್ಪಡೆಯು ಜಮ್ಮು ಮತ್ತು ಕಾಶ್ಮೀರದ ಜನರ ಕೆಲವು ಹಕ್ಕುಗಳನ್ನು ಕಾಯುವಂತಹ ಭಾರತ ಸಂಧಾನದ 370ನೇ ವಿಧಿಯ ಕೆಲ ನಿಬಂಧನೆಗಳಿಗೆ ಒಳಪಟ್ಟಿತ್ತು. ಈ ರೀತಿಯಲ್ಲಿ ಕಾಶ್ಮೀರವು ದೇಶದ ಅವಿಭಾಜ್ಯ ಭಾಗವಾಯಿತು ಎಂದು ನೆನೆದರು.

ಕಾಶ್ಮೀರವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಪ್ರಜಾತಾಂತ್ರಿಕವಾಗಿ ಅಭಿವೃದ್ಧಿಪಡಿಸಿ ಕಾಶ್ಮೀರದ ಜನರ ಮನ ಗೆದ್ದುಕೊಂಡು ದೇಶದ ಇತರ ಭಾಗಗಳೊಂದಿಗೆ ಅವರ ಸಂಪೂರ್ಣ ಸಂಯೋಜನೆಗೆ ಪೂರಕವಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡುವ ಜವಾಬ್ದಾರಿಯು ಅಂದು ದೇಶವನ್ನು ಆಳುತ್ತಿದ್ದ ಕಾಂಗ್ರೆಸ್ ಸರಕಾರದ ಮೇಲಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ಕಾಶ್ಮೀರವನ್ನು ಅಧಿಕಾರಶಾಹಿ ಧೋರಣೆಯಿಂದ 370ನೇ ವಿಧಿಯನ್ನು ನಿರಂತರವಾಗಿ ಬಲಹೀನಗೊಳಿಸುತ್ತಾ ಕಾಶ್ಮೀರದ ಜನರ ಆಕ್ರೋಶಕ್ಕೆ ಕಾರಣವಾಯಿತು ಎಂದು ವಿಷಾದಿಸಿದರು.

ಇದರಿಂದಾಗಿ ಪಾಕಿಸ್ತಾನಕ್ಕೆ ಸದವಕಾಶವೊಂದು ಒದಗಿ ಬಂದು, ಅದು ಭಾರತದ ವಿರುದ್ಧ ಕಳ್ಳ ಯುದ್ಧವನ್ನು ಆರಂಭಿಸಿತು ಮತ್ತು ಜಮ್ಮು ಮತ್ತು ಕಾಶ್ಮೀರದ ಒಳಗಡೆ ಕೆಲಸ ಮಾಡುತ್ತಿದ್ದ ಸಶಸ್ತ್ರ ಪ್ರತ್ಯೇಕತಾವಾದಿಗಳಿಗೆ ಮತ್ತು ವಿಭಜಕ ಶಕ್ತಿಗಳಿಗೆ ಎಲ್ಲ ರೀತಿಯಲ್ಲೂ ಕುಮ್ಮಕ್ಕು ನೀಡಿತು. ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಬದಲು ಕಾಂಗ್ರೆಸ್‌ನ ಮುಂದಿನ ಎಲ್ಲ ಕೇಂದ್ರ ಸರಕಾರಗಳು ಕಾಶ್ಮೀರಿಗಳನ್ನು ಕ್ರೂರ ದಮನಕ್ಕೆ ಒಳಪಡಿಸಿದವು. ಇದರಿಂದಾಗಿ, ಕಾಶ್ಮೀರದ ಬಹುಪಾಲು ಜನರು ಭಾರತದಿಂದ ಮುಖವಾಗುವ ಸ್ಥಿತಿಯು ನಿರ್ಮಾಣವಾಯಿತು ಮತ್ತು ತತ್ಪರಿಣಾಮವಾಗಿ, ಪ್ರತ್ಯೇಕತಾವಾದಿ ಶಕ್ತಿಗಳ ಕೈ ಬಲವಾಯಿತು ಎಂದು ತಿಳಿಸಿದರು.

ಸಂಧಾನದ 370ನೇ ವಿಧಿಯನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದು ಪಾಕಿಸ್ತಾನ ಬೆಂಬಲಿತ ಪ್ರತ್ಯೇಕತಾವಾದಿ ಉಗ್ರ ಶಕ್ತಿಗಳನ್ನು ಮಟ್ಟ ಹಾಕಬೇಕಾಗಿರುವ ಇಂದಿನ ಸಮಯದಲ್ಲಿ, 370ನೇ ವಿಧಿಯನ್ನು ಏಕಪಕ್ಷೀಯವಾಗಿ ರದ್ದು ಮಾಡಿರುವ ಕ್ರಮವು ಕಾಶ್ಮೀರದ ಜನರನ್ನು ಇನ್ನಷ್ಟು ದೂರ ತಳ್ಳುವುದಷ್ಟೇ ಅಲ್ಲದೆ ಪ್ರತ್ಯೇಕತಾವಾದಿ ಉಗ್ರಶಕ್ತಿಗಳ ಬಲವರ್ಧನೆಗೂ ಕಾರಣವಾಗಲಿದೆ. ಸಶಸ್ತ್ರ ಪಡೆಗಳು ಪ್ರತಿಭಟನೆಯ ದನಿಯನ್ನು ಕೆಲಕಾಲ ತುಳಿದಿಡಬಹುದೇ ಹೊರತು ಅದು ಎಲ್ಲ ಕಾಲಕ್ಕೂ ಸಾಧ್ಯವಿಲ್ಲ. ತತ್‌ಕ್ಷಣವೇ ಸಂಧಾನದ 370ನೇ ವಿಧಿ ಹಾಗೂ ಇತರೆಲ್ಲಾ ಪ್ರಜಾತಂತ್ರಿಕ ಹಕ್ಕುಗಳನ್ನು ಸರಕಾರ ಪುನಃ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಕೇಂದ್ರದ ಬಿಜೆಪಿ ನೇತೃತ್ವದ ಈ ಎಲ್ಲ ಜನತಂತ್ರ ವಿರೋಧಿ ಕ್ರಮಗಳನ್ನು ಪ್ರತಿಭಟಿಸಲು ಎಲ್ಲ ಎಡ, ಪ್ರಜಾತಾಂತ್ರಿಕ ಹಾಗೂ ಸುಚಿಂತಕ ಜನರು ತಮ್ಮ ಒಕ್ಕೊರಲಿನ ದನಿಯನ್ನು ಮೊಳಗಿಸಬೇಕು ಎಂದು ಎಸ್‌ಯುಸಿಐ(ಸಿ) ಪರವಾಗಿ ಅವರು ಕರೆ ನೀಡಿದರು.

ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್‌ಯುಸಿಐ(ಸಿ) ಜಿಲ್ಲಾ ಸಮಿತಿ ಸದಸ್ಯ ಎನ್.ರವಿ, ದೇಶದಲ್ಲಿ ತಾಂಡವವಾಡುತ್ತಿರುವ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಕೃಷಿ ಬಿಕ್ಕಟ್ಟು, ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಲಾಗದೆ ಆಡಳಿತ ಪಕ್ಷದವರು ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕ್ರಮಗಳಿಗೆ ಮೊರೆ ಹೋಗುವುದು ಹೊಸತೇನಲ್ಲ. ಈ ಮಧ್ಯೆ ಜನರು ತಮ್ಮ ಒಗ್ಗಟ್ಟನ್ನು ಕಾಪಾಡಿಕೊಂಡು ಜನಾಂದೋಲನ ಕಟ್ಟಲು ಮುಂದಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News