ಕೇಂದ್ರ ಸರಕಾರ ರಾಜ್ಯಕ್ಕೆ 5 ಸಾವಿರ ಕೋಟಿ ರೂ. ಪರಿಹಾರ ನೀಡಲಿ: ಸಿದ್ದರಾಮಯ್ಯ
ಬೆಂಗಳೂರು, ಆ.11: ಈಗಾಗಲೇ ಕೇಂದ್ರ ಸರಕಾರ ರಾಜ್ಯದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕಾಗಿತ್ತು. ಆದರೆ, ಇಲ್ಲಿಯವರೆಗೆ ಕೇಂದ್ರ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಪ್ರಧಾನಿಗಳೇ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಕೇಂದ್ರದ ಮಂತ್ರಿ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದಾರೆ. ಇಂದು ಅಮಿತ್ ಶಾ ಬರುತ್ತಿದ್ದಾರೆ. ನಿರ್ಮಲಾ, ಅಮಿತ್ ಶಾ ಬಂದರೆ ಗಂಭೀರತೆ ಇರಲ್ಲ. ಕೇಂದ್ರಕ್ಕೆ ಗಂಭೀರತೆ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಡಬೇಕು. ರಾಜ್ಯಕ್ಕೆ ಕನಿಷ್ಠ 5 ಸಾವಿರ ಕೋ.ರೂ. ಪರಿಹಾರ ಮೊತ್ತ ಪ್ರಕಟಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಕೇವಲ 6,000 ಕೋಟಿ ರೂ.ನಷ್ಟವಾಗಿದೆ ಎಂದಿದ್ದಾರೆ. ಆದರೆ, ನನ್ನ ಪ್ರಕಾರ 1 ಲಕ್ಷ ಕೋ.ರೂ. ರಾಜ್ಯದಲ್ಲಿ ನಷ್ಟವಾಗಿದೆ. ಬೆಳೆ ನಾಶ ಹಾಗೂ ಸರಕಾರದ ಹಾಗೂ ಖಾಸಗಿ ಆಸ್ತಿಗೆ ಬಹಳ ನಷ್ಟವಾಗಿದೆ. 30ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಪ್ರವಾಹ ಸಂಭವಿಸಿದ್ದಾಗ ಆಗಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ 1600 ಕೋ.ರೂ.ಹಣ ನೀಡಿದ್ದರು. ಕೇಂದ್ರದಿಂದ ಕೊಟ್ಟಿರುವ 120 ಕೋ.ರೂ.ನಿಂದ ಪ್ರವಾಹ ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಾಗಲ್ಲ. ಕೇಂದ್ರದಲ್ಲಿ ಬಿಜೆಪಿಯ ಸರಕಾರವಿದೆ. ರಾಜ್ಯದಲ್ಲಿ ಅವರ ಪಕ್ಷದ 26 ಸಂಸದರು ಇದ್ದಾರೆ. ಕೂಡಲೇ ರಾಜ್ಯಕ್ಕೆ ಹೆಚ್ಚಿನ ಹಣ ಕೊಡಿಸುವ ಕೆಲಸ ಆಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸರಕಾರದಿಂದ ಸರಿಯಾದ ರೀತಿಯಲ್ಲಿ ಪರಿಹಾರ ಕ್ರಮ ಆಗುತ್ತಿಲ್ಲ. ಸಾಕಷ್ಟು ಗಂಜಿ ಕೇಂದ್ರಗಳನ್ನು ತೆರೆಯಬೇಕು. ಕನಿಷ್ಠ ಸೌಲಭ್ಯ ಕಲ್ಪಿಸಲು ಸರಕಾರದಿಂದ ಆಗುತ್ತಿಲ್ಲ. ಈಗಾಗಲೇ ಕಾಂಗ್ರೆಸ್‌ನಿಂದ ಎರಡು ತಂಡಗಳು ಪ್ರವಾಹ ಸ್ಥಳಗಳ ಪರಿಶೀಲನೆ ನಡೆಸುತ್ತಿವೆ. ಸರಕಾರದಿಂದ ಕೇಂದ್ರಕ್ಕೆ ಯಾವುದೇ ವರದಿ ಹೋಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ರಾಜ್ಯ ಸರಕಾರದ ಪ್ರವಾಹದ ವರದಿ ಕಾಯದೇ ಕೂಡಲೇ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಬೇಕು. ಅಲ್ಲದೇ ಹೆಚ್ಚಿನ ಸಂಖ್ಯೆಯ ಹೆಲಿಕಾಪ್ಟರ್‌ಗಳನ್ನು ರಾಜ್ಯಕ್ಕೆ ಕಳುಹಿಸಿಕೊಡಬೇಕು. ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಯಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.