ಸಿಎಂ ಯಡಿಯೂರಪ್ಪ ತಿರುಕನ ಶೋಕಿ ಮಾಡಲು ಹೊರಟಿದ್ದಾರೆ: ಕಾಂಗ್ರೆಸ್

ಬೆಂಗಳೂರು, ಆ.14: ರಾಜ್ಯದ ಜನತೆ ಪ್ರವಾಹದಲ್ಲಿ ಸಿಲುಕಿ ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ಥರಿಗೆ ನೆರವಾಗಬೇಕಾದ ಹಣವನ್ನು ತಮ್ಮ ಸರಕಾರದ ಸಾಧನೆ ಸಾರಲೆಂದು ಪತ್ರಿಕೆಗಳಿಗೆ ಜಾಹೀರಾತು ನೀಡಿ ದುಂದುವೆಚ್ಚ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಕನ ಶೋಕಿ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೆರೆ ವೀಕ್ಷಣೆಗೆ ಬಂದಿಲ್ಲ. ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿದ್ದರೂ ರಾಷ್ಟ್ರೀಯ ವಿಪತ್ತೆಂದು ಘೋಷಣೆ ಮಾಡಿಲ್ಲ. 5ಸಾವಿರ ಕೋಟಿ ರೂ.ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ಇದರ ನಡುವೆಯೆ ಬಿ.ಎಸ್.ಯಡಿಯೂರಪ್ಪ ತನ್ನ ಮೂರು ವಾರಗಳ ಸರಕಾರದ ಸಾಧನೆಗೆ ಲಕ್ಷಾಂತರ ರೂ. ಖರ್ಚು ಮಾಡಿ, ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರೆ ಎಂದು ಕೆಪಿಸಿಸಿ ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಮಂತ್ರಿಮಂಡಲ ರಚಿಸದೆ, ಕೆಲಸ ಮಾಡದೆ, ಜಾಹೀರಾತಿಗೆ ದುಂದು ವೆಚ್ಚ ಮಾಡುತ್ತಿರುವುದು ನೆರೆಯಿಂದ ಸಂಕಷ್ಟದಲ್ಲಿರುವ ಲಕ್ಷಾಂತರ ಜನತೆಗೆ ಮಾಡಿರುವ ಅವಮಾನವಾಗಿದೆ ಎಂದು ಟ್ವೀಟರ್‌ನಲ್ಲಿ ಪ್ರಕಟಿಸಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ನಿಮ್ಮ ಬಳಿ ಪ್ರವಾಹ ಸಂತ್ರಸ್ತರಿಗೆ ನೀಡಲು ಹಣವಿಲ್ಲ. ಆದರೆ, ಸರಕಾರದ ಮೂರು ವಾರಗಳ ಸಾಧನೆಯನ್ನು ಸಂಭ್ರಮಿಸಿ, ಜಾಹೀರಾತು ನೀಡಲು ಹಣವಿದೆಯೇ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಪ್ರವಾಹ ಉಂಟಾಗಿ, ಜನಜೀವನ ಅಸ್ತವ್ಯಸ್ಥವಾಗಿರುವ ಕಾರಣ ಈ ಬಾರಿ ಸ್ವಾತಂತ್ರೋತ್ಸವವನ್ನು ಸರಳವಾಗಿ ಆಚರಿಸಲಾಗುವುದು ಎಂದು ಸರಕಾರ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ, ಯಡಿಯೂರಪ್ಪ ತಮ್ಮ ಸರಕಾರದ ಮೂರು ವಾರಗಳ ಸಾಧನೆಯ ಬಗ್ಗೆ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡಿದ್ದಾರೆ ಎಂದು ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.