ರಾಜಧಾನಿಯ ಎಲ್ಲ ಮನೆಗಳಲ್ಲೂ ಶೌಚಾಲಯಗಳ ನಿರ್ಮಾಣ: ಬಿಬಿಎಂಪಿಯ ಗುರಿ
ಬೆಂಗಳೂರು, ಆ.14: ಪ್ರಸಕ್ತ ಸಾಲಿನ ಸ್ವಚ್ಛ ಸರ್ವೇಕ್ಷಣಾ ಸರ್ವೇಗಾಗಿ ಡಿಸೆಂಬರ್ ಅಂತ್ಯದೊಳಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಖಲೆಗಳನ್ನು ಒದಗಿಸಬೇಕಿದೆ. ಹೀಗಾಗಿ, ಪಾಲಿಕೆಯು ಡಿಸೆಂಬರ್ ಒಳಗೆ ಎಲ್ಲ ಮನೆಗಳಲ್ಲೂ ಶೌಚಾಲಯಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದೆ.
ಪಾಲಿಕೆಗೆ ಈವರೆಗೆ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ನೆರವು ಕೋರಿ 4,466 ಅರ್ಜಿಗಳು ಬಂದಿದ್ದು, 3,188ಕ್ಕೆ ಅನುಮೋದನೆ ನೀಡಲಾಗಿದೆ. ಈ ಪೈಕಿ 2,018 ಶೌಚಾಲಯಗಳ ನಿರ್ಮಾಣ ಕಾರ್ಯವಷ್ಟೆ ಪೂರ್ಣಗೊಂಡಿದೆ. ಬಾಕಿ ಉಳಿದ 2,869 ಶೌಚಾಲಯಗಳ ನಿರ್ಮಾಣ ಕಾರ್ಯ ಮುಗಿದರಷ್ಟೆ ಒಡಿಎಫ್ ಶ್ರೇಯಾಂಕ ಲಭಿಸಲಿದೆ. ಸ್ವಚ್ಛ ಭಾರತ ಮಿಷನ್ ಮನೆಗಳ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಶೇ.90ರಷ್ಟು ಗುರಿ ನಿಗದಿಪಡಿಸಿದೆ. ಆದರೆ, ಇದರಲ್ಲಿ ಪಾಲಿಕೆಯು ಈವರೆಗೆ ಶೇ.63ರಷ್ಟು ಪ್ರಗತಿ ಸಾಧಿಸಲಷ್ಟೆ ಸಫಲವಾಗಿದೆ.
ವಾರ್ಡ್‌ನ ಪ್ರತಿ ಮನೆಗೆ ಶೌಚಾಲಯ ಸಂಪರ್ಕ ಕಲ್ಪಿಸುವುದು, ವೈಯಕ್ತಿಕ ಶೌಚಾಲಯ ನಿರ್ಮಿಸಲು ಸ್ಥಳಾವಕಾಶವಿಲ್ಲದ ಕಡೆಗಳಲ್ಲಿ ಸಾರ್ವಜನಿಕ ಶೌಚಾ ಲಯಗಳನ್ನು ಕಟ್ಟುವುದು, ಇವು ಬೆಳಗ್ಗೆ 4ರಿಂದ ರಾತ್ರಿ 10ರವರೆಗೆ ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳುವುದು ಹಾಗೂ ಇವುಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವ ಅಂಶಗಳನ್ನು ಆಧರಿಸಿ, ಒಡಿಎಫ್ ಮುಕ್ತವೆಂಬ ಮನ್ನಣೆ ನೀಡಲಾಗುತ್ತದೆ.
ಇನ್ನು, ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸ್ಥಳಾವಕಾಶ ಇಲ್ಲದಿರುವುದು, ಒಂಟಿ ಮನೆ ಯೋಜನೆಯಡಿ ಸಬ್ಸಿಡಿ ಪಡೆದುಕೊಂಡಿರುವವರು ಮತ್ತೆ ನೆರವಿಗಾಗಿ ಅರ್ಜಿ ಸಲ್ಲಿಸಿರುವುದು ಸೇರಿದಂತೆ ಇನ್ನಿತರೆ ಕಾರಣಗಳಿಗಾಗಿ 1,253 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ 15 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.
ಅಗ್ರ ಶ್ರೇಯಾಂಕ ಪಡೆಯಲು ಕಸರತ್ತು ನಡೆಸುತ್ತಿರುವ ಬಿಬಿಎಂಪಿಯು, ಹೊಸದಾಗಿ 416 ಸಾರ್ವಜನಿಕ ಮತ್ತು 46 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದೆ. ಶೌಚಾಲಯಗಳ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದ್ದು, ವಿನ್ಯಾಸ ಕೂಡ ಸಿದ್ಧಪಡಿಸಲಾಗುತ್ತಿದೆ. ನವ ಬೆಂಗಳೂರು ಯೋಜನೆಯಡಿ 25 ಕೋಟಿ ರೂ. ಮತ್ತು ಪಾಲಿಕೆಯ ಯೋಜನೆ ವಿಭಾಗದಿಂದ 50 ಕೋಟಿ ರೂ. ಅನುದಾನ ಲಭಿಸಿದೆ.
ಬಹಿರ್ದೆಸೆ ಮುಕ್ತ ಘೋಷಣೆ
ಪಾಲಿಕೆಯ 198 ವಾರ್ಡ್‌ಗಳೂ ಬಯಲು ಬಹಿರ್ದೆಸೆ ಮುಕ್ತವಾಗಿವೆ ಎಂದು ಸ್ವಯಂ ಘೋಷಿಸಿಕೊಂಡು, 2018ರ ಡಿ. 27ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ವಾಸ್ತವವಾಗಿ ಸಿಲಿಕಾನ್ ಸಿಟಿಗೆ ಈ ಸೌಭಾಗ್ಯ ಸಿಕ್ಕಿಲ್ಲ. ಇದರಿಂದಾಗಿಯೇ ಕಳೆದ ವರ್ಷ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಿಗದಿಪಡಿಸಿದ್ದ ಪೂರ್ಣ 250 ಅಂಕ ಪಡೆಯುವಲ್ಲಿ ವಿಫಲವಾಗಿ ಅಗ್ರ 50ರೊಳಗಿನ ಶ್ರೇಯಾಂಕ ಪಡೆಯುವ ಕನಸು ನುಚ್ಚು ನೂರಾಗಿತ್ತು. ಅಂತಿಮವಾಗಿ 194ನೇ ಸ್ಥಾನ ಪಡೆದುಕೊಂಡಿತು.
ಸ್ವಚ್ಛ ಭಾರತದ ಮಾನದಂಡಗಳ ಪ್ರಕಾರ ಪ್ರತಿ 100 ಪುರುಷರಿಗೆ ಒಂದು ಮತ್ತು 100 ಮಹಿಳೆಯರಿಗೆ 2 ಶೌಚಾಲಯ ಕೊಠಡಿಗಳಿರಬೇಕು. ಇದಲ್ಲದೇ ಪ್ರತಿ 7 ಕಿ.ಮೀಗೆ ಒಂದು ಸಾರ್ವಜನಿಕ ಶೌಚಾಲಯವಿರಬೇಕು. ಆದರೆ, ನಗರದಲ್ಲಿ 613 ಸಾರ್ವಜನಿಕ ಶೌಚಾಲಯಗಳಷ್ಟೆ ಇವೆ.