ಬಿಬಿಎಂಪಿ ಬಜೆಟ್ ಗೆ ತಡೆ: ಶಾಲೆಗಳ ಮೂಲ ಸೌಕರ್ಯಗಳಿಗೆ ಆರ್ಥಿಕ ಸಂಕಷ್ಟ- ಸರಕಾರಕ್ಕೆ ಪತ್ರ

Update: 2019-08-15 13:01 GMT

ಬೆಂಗಳೂರು, ಆ.15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಅನ್ನು ತಡೆ ಹಿಡಿದಿರುವ ರಾಜ್ಯ ಸರಕಾರದ ಧೋರಣೆಯಿಂದಾಗಿ ಪಾಲಿಕೆ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮೇಯರ್ ಗಂಗಾಂಬಿಕೆ ಅವರಿಗೆ ಪತ್ರ ಬರೆದಿದ್ದಾರೆ.

ಹಣವಿಲ್ಲದೆ ಮಕ್ಕಳಿಗೆ ತುರ್ತು ಸೇವೆ ಒದಗಿಸಲು ಆಗುತ್ತಿಲ್ಲ. ಬಿಬಿಎಂಪಿ ಶಾಲೆಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ಸಮವಸ್ತ್ರ, ನೋಟ್‌ಬುಕ್, ಪಠ್ಯಪುಸ್ತಕ, ಬ್ಯಾಗ್, ಶೂ ನೀಡಲು ಹಾಗೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೂ ಸಮಸ್ಯೆಯಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಬಜೆಟ್ ತಡೆದಿರುವ ಕಾರಣ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ವಿವಿಧ ತುರ್ತು ಯೋಜನೆಗಳು ನಿಂತು ಹೋಗಿವೆ. ರಾಜ್ಯ ಸರಕಾರ ತುರ್ತು ಬಳಕೆಗೆ ತಡೆ ನೀಡಿಲ್ಲ ಎಂದು ಹೇಳಿದೆಯಾದರೂ ವಾಸ್ತವವೇ ಬೇರೆ ಇದೆ. ಮೌಖಿಕವಾಗಿ ಹೇಳುವುದರಿಂದ ಯಾವುದೇ ಇಲಾಖೆಯ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ.

ಇಲ್ಲಿಯವರೆಗೆ ರಾಜ್ಯ ಸರಕಾರದಿಂದ ಲಿಖಿತ ರೂಪದ ಯಾವುದೇ ಪತ್ರ ಬಂದಿಲ್ಲ. ಬಜೆಟ್ ತಡೆ ಹಿಡಿದಿದ್ದರೂ ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಎಚ್ಚರ ವಹಿಸಲಾಗಿದೆ. ಬಿಬಿಎಂಪಿಯ ಶಿಕ್ಷಣ ಇಲಾಖೆ ಅಧಿಕಾರಿಗಳೇ ಹಣ ಸಂಗ್ರಹಿಸಿ, ಸ್ವಾತಂತ್ರ ದಿನಾಚರಣೆ ಮಾಡಲು ಮುಂದಾಗಿದ್ದೇವೆ ಎಂದು ಪಾಷ ಹೇಳಿದ್ದಾರೆ.

ಬಿಬಿಎಂಪಿ ಬಜೆಟ್‌ಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮತ್ತೂಮ್ಮೆ ಮನವಿ ಸಲ್ಲಿಸಲಾಗಿದೆ. ತುರ್ತು ಅಗತ್ಯಗಳ ಬಗ್ಗೆಯೂ ಅವರಿಗೆ ವಿವರಿಸಲಾಗಿದೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News