ಜಾತ್ಯತೀತತೆ, ರಾಷ್ಟ್ರೀಯವಾದ ದೇಶದ ರಾಜಕಾರಣದ ಮುಖ್ಯ ಸರಕು: ಬೆಲಗೂರು ಸಮೀಉಲ್ಲಾ
ಬೆಂಗಳೂರು, ಆ.15: ಜಾತ್ಯತೀತತೆ, ರಾಷ್ಟ್ರೀಯವಾದ ದೇಶದ ರಾಜಕಾರಣದ ಮುಖ್ಯ ಸರಕುಗಳಾಗಿದ್ದು, ಇದರ ಮಧ್ಯೆ ಸಿಲುಕಿದ ಅಲ್ಪಸಂಖ್ಯಾತ ಸಮುದಾಯ ಇದೀಗ ಆತ್ಮಾವಲೋಕನ ಮಾಡಿಕೊಂಡು, ರಾಜಕೀಯ ಒಲುವು ನಿಲುವನ್ನು ಬದಲಾಯಿಸಿಕೊಳ್ಳಲು ಸಕಾಲವಾಗಿದೆ ಎಂದು ಹಿರಿಯ ಪತ್ರಕರ್ತ ಬೆಲಗೂರು ಸಮೀಉಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮತ್ತೀಕೆರೆಯಲ್ಲಿರುವ ಮಸ್ಜಿದ್-ಎ-ತಾಹ ಆಡಳಿತ ಮಂಡಳಿ ಆಯೋಜಿಸಿದ್ದ 73ನೇ ಸ್ವಾತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಹುಸಿ ಜಾತ್ಯತೀತತೆ ಹಾಗೂ ಹುಸಿ ರಾಷ್ಟ್ರೀಯವಾದವನ್ನು ಬಿಂಬಿಸುತ್ತಿರುವುದು ರಾಜಕೀಯ ಪಕ್ಷಗಳು ತಲುಪಿರುವ ದುಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದರು.
ಅಲ್ಪಸಂಖ್ಯಾತರನ್ನು ಅವರು ಹುಟ್ಟಿದ ನೆಲದಲ್ಲಿ ಎರಡನೆ ದರ್ಜೆಯ ಪ್ರಜೆಗಳಂತೆ ನೋಡುವ ಕ್ರೂರ ರಾಜಕಾರಣ ಕೊನೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ದೇಶಭಕ್ತಿಯನ್ನು ಪರೀಕ್ಷೆಗೆ ಒಡ್ಡಲಾಗುತ್ತಿದೆ. ದೇಶ ಭಕ್ತಿಯನ್ನು ಸಾಬೀತುಪಡಿಸಿ ಎಂದು ಒತ್ತಡ ನಿರ್ಮಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ದೇಶದ ಸ್ವಾತಂತ್ರ ಹೋರಾಟದಲ್ಲಿ ಸಾವಿರಾರು ಮುಸ್ಲಿಮರು ಬಲಿದಾನ ಮಾಡಿದ್ದಾರೆ. ಲಕ್ಷಾಂತರ ಮಂದಿ ದೇಶಕ್ಕಾಗಿ ಹೋರಾಡಿದ್ದಾರೆ. ಸ್ವಾತಂತ್ರದ ಹೋರಾಟ ಮಾತ್ರವಲ್ಲದೇ, ಇನ್ನಿತರ ಎಲ್ಲ ರಂಗಗಳಲ್ಲೂ ಮುಸ್ಲಿಮರ ಪಾತ್ರವಿದೆ. ನಾವು ಈ ನೆಲದ ಮಕ್ಕಳು, ನಾವು ಯಾರಿಂದಲೂ ದೇಶ ಪ್ರೇಮದ ಪಾಠವನ್ನು ಕಲಿಯಬೇಕಿಲ್ಲ ಎಂದು ಸಮೀಉಲ್ಲಾ ಹೇಳಿದರು.
ಇದೇ ಸಂದರ್ಭದಲ್ಲಿ ಬಿಬಿಎಂಪಿ ಶಾಲೆಯಲ್ಲಿ ಎಸೆಸೆಲ್ಸಿಯಲ್ಲಿ ಶೇ.95ರಷ್ಟು ಅಂಕ ಪಡೆದ ವಿದ್ಯಾರ್ಥಿನಿಯರಾದ ಸಾನಿಯಾ ಮತ್ತು ಸಿದ್ದಮ್ಮರಿಗೆ ನಗದು ಬಹುಮಾನದೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀಉಲ್ಲಾ ಖಾನ್, ಕಾರ್ಯದರ್ಶಿ ಷಾಹಜಹಾನ್, ಮಸಾಜಿದ್ ಕೌನ್ಸಿಲ್ ಕರ್ನಾಟಕ ಅಧ್ಯಕ್ಷ ಮುಹಮ್ಮದ್ ಸಮೀಉಲ್ಲಾ, ಮುಖಂಡರಾದ ಝೈನುಲ್ ಆಬಿದೀನ್, ಎನ್.ರಾಜ, ಚೆನ್ನಕೇಶವ ಮೂರ್ತಿ, ಎಡ್ವರ್ಡ್, ಹಾರೂನ್ ರಶೀದ್, ಸಾಗರ್ ಸಮೀಉಲ್ಲಾ, ಸುನಂದಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.