ಕೆಎಸ್ಸಾರ್ಟಿಸಿಯ ‘ಅಂಬಾರಿ ಡ್ರೀಮ್ ಕ್ಲಾಸ್’ ಸೇವೆಗೆ ಅಂತಾರಾಷ್ಟ್ರೀಯ ಸಿಎಂಒ ಬ್ರಾಂಡಿಂಗ್ ಎಕ್ಸ್ ಲೆನ್ಸ್ ಪ್ರಶಸ್ತಿ
Update: 2019-08-16 05:43 GMT
ಬೆಂಗಳೂರು, ಆ.16: ಕೆಎಸ್ಸಾರ್ಟಿಸಿ ಇತ್ತೀಚೆಗೆ ನೂತನವಾಗಿ ಆರಂಭಿಸಿರುವ ಬಸ್ಸಿನ ‘ಬ್ರಾಂಡ್ ಅಂಬಾರಿ ಡ್ರೀಮ್ ಕ್ಲಾಸ್’ - ಕನಸಿನೊಂದಿಗೆ ಪ್ರಯಾಣಿಸಿ ಉಪಕ್ರಮವು ಅಂತಾರಾಷ್ಟ್ರೀಯ ಸಿಎಂಒ ಬ್ರಾಂಡಿಂಗ್ ಎಕ್ಸ್ ಲೆನ್ಸ್ ಪ್ರಶಸ್ತಿಗೆ ಭಾಜನವಾಗಿದೆ.
ಸಪ್ಲಾಯ್ ಚೈನ್ ಆ್ಯಂಡ್ ಲಾಜಿಸ್ಟಿಕ್ ವರ್ಗದಲ್ಲಿ ಈ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ಮಲೇಶ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಈ ಪ್ರಶಸ್ತಿ ಸ್ವೀಕರಿಸಿದರು.
'ಸಿಎಂಒ ಏಷ್ಯಾ' ಜಾಗತಿಕ ಮಟ್ಟದ ಬ್ರಾಂಡಿಂಗ್ ಕ್ಷೇತ್ರದ ಜಾಲವಾಗಿದ್ದು, ಬ್ರಾಡಿಂಗ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಜ್ಞಾನ ವಿನಿಮಯ ನಾಯಕತ್ವದ ವೇದಿಕೆಯಾಗಿದೆ. ಬ್ರಾಂಡಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಗಳ ಮುಖ್ಯಸ್ಥರು, ಬ್ರಾಂಡ್ ಪಾಲಕರು ಮತ್ತು ಸೃಜನಶೀಲ ನಾಯಕತ್ವವನ್ನು ಪ್ರೋತ್ಸಾಹಿಸಿ, ಗುರುತಿಸುವ ವ್ಯವಸ್ಥೆ ಇದಾಗಿದೆ.