‘ಹಿಂದಿ’ ಕಟೌಟ್ ತೆರವು ಆರೋಪ: ಹೋರಾಟಗಾರರ ಬಂಧನ- ಭುಗಿಲೆದ್ದ ಆಕ್ರೋಶ
ಬೆಂಗಳೂರು, ಆ.18: ಹಿಂದಿ ಭಾಷೆಯ ಕಟೌಟ್ ಅನ್ನು ತೆರವುಗೊಳಿಸಿದ ಆರೋಪದಡಿ ಆರು ಜನ ಪರ ಹೋರಾಟಗಾರರನ್ನು ಇಲ್ಲಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಹರೀಶ್‌ಗೌಡ, ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಆಂಜನಪ್ಪ, ಮಾದೇಶಗೌಡ, ಹಾಗೂ ಚಂದ್ರಶೇಖರ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಆ.16ರಂದು ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಜೈನ್ ಸಮುದಾಯದ ಗಣೇಶ್ ಬಾಗ್ ಕಟ್ಟಡದ ಪ್ರವೇಶ ದ್ವಾರದಲ್ಲಿ ಹಾಕಿದ್ದ ಹಿಂದಿ ಕಟೌಟ್ ಅನ್ನು ಕಿತ್ತು ಹಾಕಲಾಗಿದೆ ಎಂದು ಆರೋಪಿಸಿ, ಗಣೇಶ್ ಬಾಗ್ ಟ್ರಸ್ಟಿ ತ್ರಿಲೋಕ್ ಚಂದ್ರ ಎಂಬಾತ ದೂರು ನೀಡಿದ್ದರು. ದೂರಿನ್ವಯ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಕ್ರೋಶ: ಕನ್ನಡ ಪರ ನಾಮಫಲಕ ಅಳವಡಿಕೆ ಸಂಬಂಧ ನಡೆದ ಹೋರಾಟದ ಭಾಗವಾಗಿಯೇ, ಇತರೆ ಭಾಷೆಯ ನಾಮಫಲಕಗಳನ್ನು ತೆರವು ಮಾಡಲಾಯಿತು. ಆದರೆ, ಇದನ್ನೇ ನೆಪ ಮಾಡಿಕೊಂಡು, ಹೋರಾಟಗಾರರನ್ನು ಬಂಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕನ್ನಡ ಪರ ಹೋರಾಟಗಾರರು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಕನ್ನಡ ಆದೇಶ?
ಅಂಗಡಿಯ ಹೆಸರನ್ನು ಕನ್ನಡದಲ್ಲಿ ದಪ್ಪ ಅಕ್ಷರದಲ್ಲಿ ಬರೆಸಬೇಕು ಎಂಬ ನಿಯಮವಿದೆ. ಅಂದರೆ ಶೇ.60ರಷ್ಟು ಪ್ರಧಾನವಾಗಿರಬೇಕು. ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಯ ಅಕ್ಷರಗಳು ಶೇ.40ರಷ್ಟು ಪ್ರಮಾಣದಲ್ಲಿ ಇರಬಹುದು. ಈ ನಿಯಮ ಜಾರಿಯಲ್ಲಿದ್ದರೂ ಬಹುತೇಕ ವಾಣಿಜ್ಯ ಮಳಿಗೆಗಳು ಇಂಗ್ಲಿಷ್‌ಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿವೆ. ಅಲ್ಲದೆ, ಎರಡು ವರ್ಷದ ಹಿಂದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟು ಪ್ರಮಾಣದಲ್ಲಿ ಕನ್ನಡದಲ್ಲಿರುವಂತೆ ಆದೇಶಿಸಿತ್ತು. ಈ ನಿಯಮ ಜಾರಿ ಹೊಣೆಯನ್ನು ರಾಜಧಾನಿಯಲ್ಲಿ ಬಿಬಿಎಂಪಿಗೆ ವಹಿಸಲಾಗಿದೆ. ಕನ್ನಡ ನಾಮಫಲಕ ಅಳವಡಿಸಿಕೊಳ್ಳದ ಅಂಗಡಿಗಳ ಲೈಸೆನ್ಸ್ ರದ್ದುಪಡಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದ್ದರೂ ಮಾಲೀಕರು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ, ಕನ್ನಡ ನಾಮಫಲಕಕ್ಕಾಗಿ ಹೋರಾಟ ನಡೆಸಲಾಗುತ್ತಿದೆ ಎನ್ನುತ್ತಾರೆ ಕನ್ನಡ ಪರ ಹೋರಾಟಗಾರರು.
ತೇಜಸ್ವಿ ಸೂರ್ಯ ಟ್ವೀಟ್‌ಗೆ ಆಕ್ರೋಶ
ಹಿಂದಿ ಬ್ಯಾನರ್ ವಿಷಯವಾಗಿ ಕೆಲ ರೌಡಿಗಳು, ಜೈನ್ ಸಹೋದರರ ಮೇಲೆ ದಾಳಿ ಮಾಡಿದ್ದಕ್ಕೆ ತುಂಬಾ ನೋವಾಗಿದೆ. ಬೆಂಗಳೂರಿನಲ್ಲಿ ಅರಬಿ ಬಳಕೆ ಮಾಡಿದರೆ ಯಾರೋ ಕೇಳುವುದಿಲ್ಲ ಎಂದು ಉಲ್ಲೇಖಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿರುವುದಕ್ಕೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಕನ್ನಡ ಹೋರಾಟಗಾರರನ್ನೇ ರೌಡಿಗಳು ಎನ್ನುತ್ತಿದ್ದೀರಾ. ಯಾವ ಸಂದೇಶ ಕೊಡುತ್ತಿದ್ದೀರಾ ಎಂದು ಹಲವಾರು ಮಂದಿ ಪ್ರಶ್ನಿಸಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದಿದ್ದಾರೆ.
'ಬೆಂಗಳೂರು ಬಂದ್' ವೈರಲ್?
‘ಹಿಂದಿ’ ಭಾಷೆಯ ಕಟೌಟ್ ಅನ್ನು ತೆರವುಗೊಳಿಸಿರುವುದು ಖಂಡನೀಯ. ಕನ್ನಡ ಹೋರಾಟಗಾರರ ದಬ್ಬಾಳಿಕೆ ಹೆಚ್ಚಾಗಿದ್ದು, ಇದರ ವಿರುದ್ಧ ಬೆಂಗಳೂರು ಬಂದ್‌ಗೆ ಕರೆ ನೀಡಿ, ನಗರದ ಪುರಭವನದ ಮುಂಭಾಗ ಪ್ರತಿಭಟನೆ ನಡೆಸಲು ಜೈನ ಸಮುದಾಯ ಒಗ್ಗೂಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೊಂದು ವೈರಲ್ ಆಗಿದೆ.