ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಬಿಡುಗಡೆಗೆ ಸಿದ್ದರಾಮಯ್ಯ, ಎಚ್.ಡಿ.ಕೆ. ಆಗ್ರಹ

Update: 2019-08-19 12:23 GMT

ಬೆಂಗಳೂರು, ಆ.19: ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘‘ಕನ್ನಡ ಹೋರಾಟಕ್ಕೆ ಧರ್ಮ ಮತ್ತು ರಾಜಕೀಯದ ಬಣ್ಣ ಬಳಿದು ಪೊಲೀಸರ ಮೂಲಕ ಕನ್ನಡ ಹೋರಾಟಗಾರರನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ನಡೆ ಖಂಡನೀಯ. ಬಂಧಿತ ಕನ್ನಡ ಹೋರಾಟಗಾರರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ’’ ಎಂದಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಎಚ್.ಡಿ ಕುಮಾರಸ್ವಾಮಿ, ‘‘ಮಾನ್ಯ ಮುಖ್ಯಮಂತ್ರಿಗಳೇ ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆಯನ್ನು ಹಿಂಪಡೆಯಿರಿ. ನಿಮ್ಮ ಪೌರುಷವನ್ನು ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯದ ಪಾಲಿನ ನೆರವಿನ ಹಣವನ್ನು ಪಡೆದುಕೊಂಡು ಬರುವುದರಲ್ಲಿ ತೋರಿಸಿ’’ ಎಂದು ಖಾರವಾಗಿ ಹೇಳಿದ್ದಾರೆ.

ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಜೈನ ಸಮುದಾಯಕ್ಕೆ ಸೇರಿದ ‘ಗಣೇಶ್ ಬಾಗ್’ ಎಂಬ ಕಟ್ಟಡದ ಬಳಿಗೆ ಆ.16ರಂದು ತೆರಳಿದ್ದ ಕನ್ನಡ ಪರ ಹೋರಾಟಗಾರರು ‘ಹಿಂದಿ’ ಭಾಷೆಯಲ್ಲಿ ಕಟೌಟ್ ಹಾಕಿದ್ದನ್ನು ಪ್ರಶ್ನಿಸಿದ್ದರು. ಅಲ್ಲದೇ ತಾವೇ ಕಾಂಪೌಂಡ್ ಏರಿ, ಹಿಂದಿಯಲ್ಲಿದ್ದ ಕಟೌಟ್ ಅನ್ನು ಕಿತ್ತೆಸೆದಿದ್ದರು. ಈ ಹಿನ್ನೆಲೆಯಲ್ಲಿ ‘ಕರ್ನಾಟಕ ರಕ್ಷಣಾ ಸೇನೆ’ ಸಂಘಟನೆಯ ಆರು ಕಾರ್ಯಕರ್ತರನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಪರ ಹೋರಾಟಗಾರರ ಈ ಬಂಧನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಅದೀಗ ರಾಜಕೀಯ ಬಣ್ಣ ಪಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News