ಹಿಂದಿ ಕಟೌಟ್ ತೆರವು ಪ್ರಕರಣ: ಕನ್ನಡ ಪರ ಹೋರಾಟಗಾರರಿಗೆ ಜಾಮೀನು

Update: 2019-08-19 16:05 GMT

ಬೆಂಗಳೂರು, ಆ.19: ಹಿಂದಿ ಭಾಷೆಯ ಬ್ಯಾನರ್ ಹರಿದು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಹರೀಶ್‌ಗೌಡ ಸೇರಿ ಆರು ಜನ ಕನ್ನಡ ಪರ ಹೋರಾಟಗಾರರಿಗೆ ನಗರದ 43ನೆ ಎಸಿಎಂಎಂ ಕೋರ್ಟ್ ಸೋಮವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಕುರಿತು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎಸಿಎಂಎಂ ನ್ಯಾಯಪೀಠವು ಆರೋಪಿಗಳಾದ ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಹರೀಶ್‌ಕುಮಾರ್, ಆಂಜನಪ್ಪ, ಮಾದೇಶಗೌಡ, ಚಂದ್ರಶೇಖರ್, ಮಂಜುನಾಥ್ ಹಾಗೂ ಹರೀಶ್‌ಗೌಡಗೆ 50 ಸಾವಿರ ರೂ.ಮೊತ್ತದ ಶ್ಯೂರಿಟಿ ಬಾಂಡ್, ಇಬ್ಬರ ಭದ್ರತೆ ಸಹಿ, ಸಾಕ್ಷಿ ನಾಶಕ್ಕೆ ಯತ್ನಿಸಬಾರದು, ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು, ವಿಚಾರಣೆಗೆ ಕರೆದಾಗ ಹಾಜರಾಗಬೇಕೆಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

ಅರ್ಜಿದಾರರ ಪರ ವಾದಿಸಿದ ವಕೀಲ ಸೂರ್ಯ ಮುಕುಂದರಾಜ್ ಅವರು, ಬ್ಯಾನರ್ ಹರಿದು ಹಾಕಿರುವ ಅರ್ಜಿದಾರರೆಲ್ಲರೂ ಕನ್ನಡದ ಪರವಾಗಿ ಕೆಲಸ ಮಾಡುವವರು. ಹಿಂದಿ ಭಾಷೆಯ ಬ್ಯಾನರ್ ಜಾಗದಲ್ಲಿ ಕನ್ನಡ ಭಾಷೆಯ ಬ್ಯಾನರ್ ಹಾಕಿ ಎನ್ನುವ ಉದ್ದೇಶದಿಂದ ಹಿಂದಿ ಭಾಷೆಯ ಬ್ಯಾನರ್ ಹರಿದು ಹಾಕಿದ್ದಾರೆಯೇ ವಿನಹ ಮತ್ಯಾವ ದುರುದ್ದೇಶ ಅವರಲ್ಲಿ ಇರಲಿಲ್ಲ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರಣಧೀರ ಪಡೆಯ ಅಧ್ಯಕ್ಷ ಹರೀಶ್‌ಕುಮಾರ್ ಸೇರಿ 6 ಜನರಿಗೆ ಜಾಮೀನು ಮಂಜೂರು ಮಾಡಿತು.

ಪ್ರಕರಣವೇನು: ಆ.16ರಂದು ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಜೈನ್ ಸಮುದಾಯದ ಗಣೇಶ್ ಬಾಗ್ ಕಟ್ಟಡದ ಪ್ರವೇಶ ದ್ವಾರದಲ್ಲಿ ಹಾಕಿದ್ದ ಹಿಂದಿ ಕಟೌಟ್ ಅನ್ನು ಕಿತ್ತು ಹಾಕಲಾಗಿದೆ ಎಂದು ಆರೋಪಿಸಿ, ಗಣೇಶ್ ಬಾಗ್ ಟ್ರಸ್ಟಿನ ತ್ರಿಲೋಕ್ ಚಂದ್ರ ಎಂಬಾತ ಕಮರ್ಷಿಯಲ್‌ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಆರೋಪಿಗಳನ್ನು ಬಂಧಿಸಿ, ತಮ್ಮ ವಶಕ್ಕೆ ಪಡೆದಿದ್ದರು.

ಏನಿದು ಕನ್ನಡ ಆದೇಶ: ಅಂಗಡಿಯ ಹೆಸರನ್ನು ಕನ್ನಡದಲ್ಲಿ ದಪ್ಪ ಅಕ್ಷರದಲ್ಲಿ ಬರೆಸಬೇಕು ಎಂಬ ನಿಯಮವಿದೆ. ಅಂದರೆ ಶೇ.60ರಷ್ಟು ಪ್ರಧಾನವಾಗಿರಬೇಕು. ಇಂಗ್ಲಿಷ್ ಸೇರಿ ಇತರೆ ಭಾಷೆಯ ಅಕ್ಷರಗಳು ಶೇ.40ರಷ್ಟು ಪ್ರಮಾಣದಲ್ಲಿ ಇರಬಹುದು. ಈ ನಿಯಮ ಜಾರಿಯಲ್ಲಿದ್ದರೂ ಬಹುತೇಕ ವಾಣಿಜ್ಯ ಮಳಿಗೆಗಳು ಇಂಗ್ಲಿಷ್‌ಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದೆ. ಅಲ್ಲದೆ, ಎರಡು ವರ್ಷಗಳ ಹಿಂದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟು ಪ್ರಮಾಣದಲ್ಲಿ ಕನ್ನಡದಲ್ಲಿರುವಂತೆ ಆದೇಶಿಸಿತ್ತು. ಈ ನಿಯಮ ಜಾರಿ ಹೊಣೆಯನ್ನು ರಾಜಧಾನಿಯಲ್ಲಿ ಬಿಬಿಎಂಪಿಗೆ ವಹಿಸಲಾಗಿದೆ. ಕನ್ನಡ ನಾಮಫಲಕ ಅಳವಡಿಸಿಕೊಳ್ಳದ ಅಂಗಡಿಗಳ ಲೈಸೆನ್ಸ್ ರದ್ದುಪಡಿಸುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದ್ದರೂ ಮಾಲಕರು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ, ಕನ್ನಡ ನಾಮಫಲಕಕ್ಕಾಗಿ ಹೋರಾಟ ನಡೆಸಲಾಗುತ್ತಿದೆ ಎನ್ನುತ್ತಾರೆ ಕನ್ನಡ ಪರ ಹೋರಾಟಗಾರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News