ಕೇಂದ್ರದ ವಿರುದ್ಧ ಮುಷ್ಕರ ಆರಂಭಿಸಿದ ರಕ್ಷಣಾ ಇಲಾಖೆ ಸಿಬ್ಬಂದಿ

Update: 2019-08-21 13:01 GMT

ಬೆಂಗಳೂರು, ಆ.21: ರಕ್ಷಣಾ ಉದ್ಯಮ ನಿಷ್ಕ್ರಿಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಇದರ ಪರಿಣಾಮ ರಕ್ಷಣಾ ಇಲಾಖೆಯ ಬರೋಬ್ಬರಿ 82 ಸಾವಿರ ಸಿಬ್ಬಂದಿ ಬೀದಿಪಾಲಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯಿಸ್ ಫೆಡರೇಷನ್ ಉಪಾಧ್ಯಕ್ಷ ಎಂ.ಕೆ.ರವೀಂದ್ರನ್ ಪಿಳ್ಳೆ ಹೇಳಿದರು. 

ರಕ್ಷಣಾ ಇಲಾಖೆ ಕಾರ್ಖಾನೆಗಳ ಖಾಸಗೀಕರಣ ವಿರೋಧಿಸಿ ನಗರದ ಟಿವಿ ಟವರ್ ಸಮೀಪದ ರಕ್ಷಣಾ ಇಲಾಖೆಯ ಕಚೇರಿ ಮುಂಭಾಗ ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯಿಸ್ ಫೆಡರೇಷನ್ ಹಾಗೂ ಸಿಕ್ಯೂಎಎಲ್ ಮತ್ತು ಆರ್.ಸಿವಿಲಿಯನ್ ಎಂಪ್ಲಾಯಿಸ್ ಯೂನಿಯನ್ ಜಂಟಿಯಾಗಿ ನಡೆಸುತ್ತಿರುವ ಮುಷ್ಕರವನ್ನುದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರದ ಮೋದಿ ಸರಕಾರ ಖಾಸಗಿ ಕಾರ್ಪೊರೇಟ್ ಕುಳಗಳನ್ನು ಬಲಪಡಿಸುವ ಗುರಿ ಇಟ್ಟುಕೊಂಡಿದ್ದು, ಪ್ರಮುಖ ರಕ್ಷಣಾ ತಯಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಾದ ಸಂಶೋಧನೆ ಹಾಗೂ ಸೇವಾ ಕಾರ್ಯಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲು ಮುಂದಾಗಿದೆ. ಇದರ ಪರಿಣಾಮ 82 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ದೇಶದ ಶಾಂತಿ ಸ್ಥಾಪನೆಗಾಗಿ, ರಕ್ಷಣಾ ಉದ್ಯಮಗಳಲ್ಲಿ ಸ್ವಾವಲಂಬನೆ ಸಾಧಿಸಲು ರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸಂಸ್ಥೆಯಲ್ಲಿನ ಕೌಶಲ್ಯ ಭರಿತ ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಗೌರವವನ್ನು ಸಾಧಿಸಲು ಒದ್ದಾಡುತ್ತಿದ್ದಾರೆ. ಆದರೆ, ಸರಕಾರ ಅವರನ್ನು ಉತ್ತೇಜಿಸುವ ಬದಲಾಗಿ, ರಕ್ಷಣಾ ಘಟಕಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರದ ನೀತಿಗಳಿಂದ ರಾಷ್ಟ್ರ ವ್ಯಾಪ್ತಿಯ ನಾಲ್ಕು ಲಕ್ಷ ರಕ್ಷಣಾ ನಾಗರಿಕ ಉದ್ಯೋಗಿಗಳು ರೋಸಿ ಹೋಗಿದ್ದಾರೆ. ರಕ್ಷಣಾ ನೀತಿಗಳು ದೇಶದ ಅಭಿವೃದ್ಧಿಗಾಗಿಯೋ ಅಥವಾ ಖಾಸಗಿ ಕಾರ್ಪೋರೇಟ್‌ಗಳ ಉದ್ಧಾರಕ್ಕಾಗಿ ಇವೆಯೋ ಎಂದು ಅವರು ಪ್ರಶ್ನಿಸಿದರು.

ಸರಕಾರಿ ವ್ಯವಸ್ಥೆಯಡಿ ದೇಶದ ಸೈನಿಕರಿಗೆ ಸ್ವೇಚ್ಛಾ ಸ್ವಾತಂತ್ರವನ್ನು ನೀಡಬೇಕು. ಅವರಿಗೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಪಡೆಯಲು ಅನುಮತಿ ನೀಡಬೇಕು. ಈ ಎಲ್ಲ ವಿಚಾರಗಳನ್ನು ಸರಕಾರ ಸಂಸತ್ತಿನೊಳಗೆ ಹಾಗೂ ಹೊರಗೆ ಚರ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಮುಷ್ಕರದಲ್ಲಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶ್ರೀಧರ್ ರೆಡ್ಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

1 ತಿಂಗಳು ಮುಷ್ಕರ

ರಕ್ಷಣಾ ಉದ್ಯಮ ಖಾಸಗೀಕರಣಕ್ಕೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ 1 ತಿಂಗಳು ಕಾಲ ಮುಷ್ಕರ ನಡೆಸಲಿದ್ದು, ತಮ್ಮ ಬೇಡಿಕೆಗಳು ಈಡೇರದೆ ಇದ್ದರೆ ಮುಷ್ಕರ ಮುಂದುವರೆಸಲಾಗುವುದು ಎಂದು ಎಂ.ಕೆ.ರವೀಂದ್ರನ್ ಪಿಳ್ಳೆ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News