ಬೆಂಗಳೂರಿನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅಡ್ಡಿ ಸಾಧ್ಯತೆ: ಕಾರಣವೇನು ಗೊತ್ತೇ ?
ಬೆಂಗಳೂರು, ಆ.21: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಬಿಎಂಪಿಯ ಎಲ್ಲ ಟೆಂಡರ್ ಹಾಗೂ ಕಾಮಗಾರಿಗಳಿಗೆ ತಡೆ ನೀಡಿರುವ ಹಿನ್ನೆಲೆಯಲ್ಲಿ ಈ ಬಾರಿ ನಗರದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶಗಳ ವಿಸರ್ಜನೆಗೂ ಅಡ್ಡಿಯಾಗುವ ಸಾಧ್ಯತೆ ಎದುರಾಗಿದೆ.
ಹಿಂದಿನ ಸರಕಾರದ ಸಚಿವ ಸಂಪುಟ ಅನುಮತಿಯಿಲ್ಲದೆ ಪಾಲಿಕೆ ಬಜೆಟ್‌ಗೆ ತಡೆ ಹಿಡಿಯುವಂತೆ ನಗರಾಭಿವೃದ್ಧಿ ಇಲಾಖೆಗೆ ಮುಖ್ಯಮಂತ್ರಿ ಸೂಚಿಸಿದ್ದರು. ಅದರಂತೆ ಪಾಲಿಕೆಯ ಮೈತ್ರಿ ಆಡಳಿತ ನೀಡಿರುವ ಎಲ್ಲ ಟೆಂಡರ್‌ಗಳನ್ನು ತಡೆ ಹಿಡಿಯಲಾಗಿದೆ.
ಈ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆಗೆ ಕೆರೆಗಳ ಬಳಿ ಕಲ್ಯಾಣಿಗಳನ್ನು ನಿರ್ಮಾಣ ಮಾಡಲು ಬಿಬಿಎಂಪಿ ಸಿದ್ಧತೆ ಕೈಗೊಳ್ಳಬೇಕಿದೆ. ಅದಕ್ಕಾಗಿ ಟೆಂಡರ್ ಅನ್ನು ಕರೆಯಬೇಕಿತ್ತು. ಆದರೆ, ಸರಕಾರದ ನಿರ್ಧಾರದಿಂದಾಗಿ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ. ಇದರಿಂದ ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಇದು ಈ ಬಾರಿ ಗಣೇಶ ವಿಸರ್ಜನೆಗೆ ಸಾಕಷ್ಟು ಸಂಕಷ್ಟ ತಂದಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕಳೆದ 10 ದಿನಗಳಿಂದ ಸಮಸ್ಯೆಯಾಗಿರುವ ಆನ್‌ಲೈನ್ ಟೆಂಡರ್ ವ್ಯವಸ್ಥೆ ಇ-ಪ್ರಕ್ಯೂರ್‌ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಿದೆ. ಆದರೆ, ಈ ಪ್ರಕ್ರಿಯೆ ವಿಳಂಬವಾಗಲಿದೆ. ಪ್ರತಿವರ್ಷ ಹಬ್ಬಕ್ಕೆ ಒಂದು ತಿಂಗಳ ಮುಂಚಿತವಾಗಿಯೇ ಟೆಂಡರ್ ಪ್ರಕ್ರಿಯೆ ಆರಂಭವಾಗಿ, ಕೆಲಸಗಳು ಆರಂಭವಾಗುತ್ತಿದ್ದವು.
ಟೆಂಡರ್ ಪಡೆದವರು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ನಿಗಧಿ ಮಾಡಿರುವ ಕೆರೆಗಳ ಬಳಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದರು. ಆದರೆ, ಈ ಬಾರಿ ಟೆಂಡರ್ ಪ್ರಕ್ರಿಯೆ ಆರಂಭವಾಗದ ಕಾರಣ ಗಣೇಶ ವಿಸರ್ಜನೆಗೆ ತೊಂದರೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಗಣೇಶ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ ಕೇಳಿ ಬರುತ್ತಿದೆ.