ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಕುಸಿತ: ಭರದಿಂದ ಸಾಗಿದ ದುರಸ್ತಿ ಕಾಮಗಾರಿ
Update: 2019-08-21 22:52 IST
ಬೆಂಗಳೂರು, ಆ.21: ಮಲೆನಾಡಿನಲ್ಲಿ ಅಧಿಕ ಮಳೆಯಾದ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಕುಸಿತಗೊಂಡಿರುವ ಗುಡ್ಡಗಳ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಕಾಮಗಾರಿ ಪೂರ್ತಿಯಾಗಲು ಇನ್ನೂ 10 ದಿನಗಳ ಸಮಯಾವಕಾಶ ಬೇಕಾಗುತ್ತದೆ.
ಎಡಕುಮೇರಿ ಬಳಿ ಗುಡ್ಡ ಕುಸಿದಿದ್ದರಿಂದ ರೈಲ್ವೆ ಮಾರ್ಗದ ಬಳಿಯಲ್ಲಿನ ಒಂದು ಪಾರ್ಶ್ವ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ರೈಲ್ವೆ ಎಂಜಿನಿಯರಿಂಗ್ ವಿಭಾಗವು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು, ರಿಪೇರಿ ಕಾರ್ಯ ಮಾಡಲಾಗುತ್ತಿದೆ. ಕಾಮಗಾರಿ ಸ್ಥಳಕ್ಕೆ 20 ಕ್ರೇನ್ ಹಾಗೂ ನೂರಾರು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.
ದುರಸ್ತಿ ಕಾಮಗಾರಿ ಭರದಿಂದ ಸಾಗಿದ್ದು, ಪೂರ್ತಿಯಾಗಲು ಇನ್ನೂ ಹತ್ತು-ಹದಿನೈದು ದಿನಗಳಷ್ಟು ಕಾಲಾವಕಾಶ ಬೇಕಾಗಿದೆ. ಅನಂತರವೇ ಮಾರ್ಗ ಯಥಾಸ್ಥಿತಿಗೆ ಬರಲಿದೆ. ಅಲ್ಲಿಯವರೆಗೂ ರೈಲುಗಳ ಸಂಚಾರ ಕಷ್ಟಕರವಾಗಲಿದೆ ಎಂದು ರೈಲ್ವೆ ಮೂಲಗಳು ಹೇಳಿವೆ.