ಮಕ್ಕಳ ಹಕ್ಕು ಉಲ್ಲಂಘನೆ ಹಿನ್ನೆಲೆ: ಸುಪ್ರೀಂ ಕೋರ್ಟ್‌ಗೆ ಅರ್ಜಿ
ಬೆಂಗಳೂರು, ಆ.24: ಸೇವ್ ಚೈಲ್ಡ್ ಇಂಡಿಯಾ ಫೌಂಡೇಷನ್, ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಬಗ್ಗೆ ನ್ಯಾಯಾಲಯಗಳು ತಮ್ಮ ದೃಷ್ಟಿಕೋನ ಬದಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್‌ನ ಸದಸ್ಯ ಹಾಗೂ ನ್ಯಾಯವಾದಿ ಪ್ರದೀಪ್‌ಕುಮಾರ್ ಕೌಶಿಕ್ ಮಾತನಾಡಿ, ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ಕಳೆದ ಜು.19ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ರೀಟ್ ಅರ್ಜಿಯು ಒಂದು ನೋಬಲ್ ಕಾಸ್ ಎಂದು ಹೇಳಿದೆ. ಜತೆಗೆ ಪ್ರತಿವಾದಿಗಳಿಗೆ ನೋಟಿಸ್ ನೀಡುವಂತೆ ತಿಳಿಸಿದೆ ಎಂದರು.
ದೇಶದಲ್ಲಿ ಶೇ.16 ವಿಚ್ಛೇದನಾ ಪ್ರಕರಣಗಳಿವೆ. ಇದರಲ್ಲಿ ಸಿಲುಕಿದ ಮಕ್ಕಳ ಅಳಲು ಪೂರ್ಣವಾಗಿ ಸಮಾಜ ಹಾಗೂ ಪ್ರಾಧಿಕಾರ, ನ್ಯಾಯಾಲಯದ ಗಮನಕ್ಕೆ ಬಂದಿಲ್ಲ. ಕೌಟುಂಬಿಕ ವಿವಾದದಿಂದ ತಂದೆ ಇಲ್ಲವೇ ತಾಯಿಯ ಜತೆಗಷ್ಟೇ ಮಕ್ಕಳು ಬೆಳೆಯುವುದರಿಂದ ಮಕ್ಕಳ ಬಾಲ್ಯ, ವಾತ್ಸಲ್ಯ, ಪಾಲನೆ, ವಿಕಸನ ಕಸಿದುಕೊಂಡಂತಾಗುತ್ತದೆ. ಆದ್ದರಿಂದ ಮಕ್ಕಳ ಮೇಲಿನ ಸಮಾನ ಪೋಷಣಾ ಜವಾಬ್ದಾರಿ ಹೊಂದಿ ಮಕ್ಕಳೊಂದಿಗೆ ಬೆರೆತು ಅವರ ಪಾಲನೆಯಲ್ಲಿ ಪೋಷಕರಿಬ್ಬರು ಭಾಗಿಯಾಗುವಂತೆ ಸೂಚಿಸಲು ಅರ್ಜಿಯಲ್ಲಿ ಕೇಳಲಾಗಿದೆ ಎಂದರು.
ಫೌಂಡೇಷನ್ ವೈವಾಹಿಕ ವಿವಾದದಲ್ಲಿ ಮಗುವನ್ನು ಒಬ್ಬರಿಗೆ ಸೀಮಿತ ಮಾಡಬಾರದು, ಪೋಷಕರ ನಡುವೆ ಪಾಲನಾ ಯೋಜನೆ ಒಪ್ಪಂದ ಮಾಡಬೇಕು. ನ್ಯಾಯಾಲಯಗಳು ಒಂದು ತಿಂಗಳೊಳಗೆ ಪೋಷಕರ ಪಾಲನಾ ಯೋಜನೆ ಪೂರ್ಣಗೊಳಿಬೇಕು. ಸಂಬಂಧಿಸಿದ ಇಲಾಖೆಗಳು ಮಕ್ಕಳ ಪಾಲನೆ ಬಗ್ಗೆ ಪೋಷಕರಲ್ಲಿ ಸಮಾಲೋಚಿಸಬೇಕು ಹಾಗೂ ಕಸ್ಟಡಿ ಬದಲು ಪೇರೆಂಟಿಂಗ್ ದಿ ಚೈಲ್ಡ್ ಲೈಫ್ ಎಂಬ ಸಕಾರಾತ್ಮಕ ಅರ್ಥದ ಪದ ಬಳಸುವಂತೆ ಕೋರಲಾಗಿದ್ದು, ಸುಪ್ರೀಂನಿಂದ ಸ್ಪಂದನೆ ಸಿಕ್ಕಿದೆ. ಜತೆಗೆ ಸಮಾಜ ಈ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.