ಭ್ರಷ್ಟ ಅಧಿಕಾರಿ ಎಂ.ರಾಮ ವಿರುದ್ಧ ಸಂಪೂರ್ಣ ತನಿಖೆಯಾಗಲಿ: ದಲಿತ ಸಂಘಟನೆಗಳ ಆಗ್ರಹ

Update: 2019-08-26 13:16 GMT

ಬೆಂಗಳೂರು, ಆ.26: ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿ, ಅಪಾರ ಪ್ರಮಾಣದ ಅಕ್ರಮಗಳಲ್ಲಿ ಶಾಮೀಲಾಗಿರುವ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಹಾಗೂ ಅಧೀಕ್ಷಕ ಅಭಿಯಂತರ ಎಂ.ರಾಮ ಎಂಬುವವರ ವಿರುದ್ಧ ಸಂಪೂರ್ಣ ತನಿಖೆಯಾಗಬೇಕು ಎಂದು ದಲಿತ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮಾವಳ್ಳಿ ಶಂಕರ್, ಪರಿಶಿಷ್ಟ ಜಾತಿಯ ಕೋಟಾದಡಿ ಸೇವೆಗೆ ಸೇರಿದ್ದು, ಕುರುಬ ಜಾತಿಯ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ್ದ ಸಮಾಜ ಕಲ್ಯಾಣ ಇಲಾಖೆ, ಇವರು ಸುಳ್ಳು ಪ್ರಮಾಣ ಪತ್ರ ನೀಡಿರುವುದನ್ನು ದೃಢೀಕರಿಸಿ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದರೂ ಯಾರೂ ಕ್ರಮಕ್ಕೆ ಮುಂದಾಗಿಲ್ಲ ಎಂದರು.

ರಾಷ್ಟ್ರೀಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಆಯೋಗ ರಾಮ ಸಲ್ಲಿಸಿರುವ ಜಾತಿ ಪ್ರಮಾಣ ಪತ್ರ ನಕಲಿ ಎಂದು ಹೇಳಿ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದೆ. ಅಲ್ಲದೆ, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರೂ ರಾಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರೂ, ಕ್ರಮಕ್ಕೆ ಮುಂದಾಗಿಲ್ಲ ಎಂದು ಅವರು ಆಪಾದಿಸಿದರು.

ಇಲಾಖೆಯ ಮುಖ್ಯ ಕಾರ್ಯದರ್ಶಿ ಗೌರವ್‌ಗುಪ್ತ ರಾಮ ಜತೆ ಸೇರಿಕೊಂಡು ಅನೇಕ ಅಕ್ರಮಗಳನ್ನು ನಡೆಸುತ್ತಾ ಕೆಐಎಡಿಬಿಗೆ ಕೋಟ್ಯಂತರ ರೂ. ನಷ್ಟವನ್ನುಂಟು ಮಾಡಿದ್ದಾರೆ. ಈ ಇಬ್ಬರೂ ಸೇರಿ ಎಸ್ಸಿ ಜಾತಿಗೆ ಸೇರಿದ ದಂಪತಿಗಳ ಜಮೀನಿಗೆ ನೀಡಬೇಕಿದ್ದ ಪರಿಹಾರ ಹಣವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಿದ್ದಾರೆ ಎಂದು ಹೇಳಿದರು.

ಸಮಿತಿಯ ಸಂಚಾಲಕ ನಾಗರಾಜು ಮಾತನಾಡಿ, ಮಾಜಿ ಸಚಿವ ಜಾರ್ಜ್ ಜತೆ ಶಾಮೀಲಾಗಿ ಗೌರವ್ ಗುಪ್ತ ಹಾಗೂ ರಾಮ ನಾಗಮಂಗಲದ ಅಟ್ನಾ, ಬೆಳಗುಂದ ಗ್ರಾಮಗಳಲ್ಲಿ 1500 ಎಕರೆ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಕರಾರು ಮಾಡಿಸಿ, ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ ಮಾಡಿದ್ದಾರೆ. ಯಶವಂತಪುರದಲ್ಲಿ 50 ವರ್ಷಗಳ ಹಿಂದಿನ ಭೂಮಿಯನ್ನು ಬೇನಾಮಿ ಹೆಸರು ಸೃಷ್ಟಿಸಿ, ಅದನ್ನು ಉದ್ಯಮಿಗೆ ಮಾರಾಟ ಮಾಡಿದ್ದಾರೆ ಎಂದರು.

ವೈಟ್‌ಫೀಲ್ಡ್‌ನ ಕೆಐಎಡಿಬಿಗೆ ಸೇರಿದ 2 ಎಕರೆ ಪಾರ್ಕ್ ಸ್ಥಳವನ್ನು ಮಾರಾಟ ಮಾಡಿದ್ದಾರೆ. ಬಾಗಲೂರು ಹತ್ತಿರದ ಕೆಐಎಡಿಬಿ 1 ಸಾವಿರ ಎಕರೆ ಅಭಿವೃದ್ಧಿ ಪಡಿಸಿದೆ. ಇದಕ್ಕೆ ಹೊಂದಿಕೊಂಡಿರುವ ಸಂಸ್ಥೆಯ 25 ಎಕರೆ ಜಾಗವನ್ನು ಬೇನಾಮಿ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿಸಿಕೊಂಡಿದ್ದಾರೆ ಎಂದು ಅವರು ದೂರಿದರು.

ರಾಮಗೆ ಉಪ ಅಭಿವೃದ್ಧಿ ಅಧಿಕಾರಿಯಾಗಿ ಹಿಂಬಡ್ತಿ ನೀಡಬೇಕು ಎಂದು ಕೋರ್ಟ್ ಹೇಳಿದ್ದರೂ, ಅಂದಿನ ಸಚಿವ ಜಾರ್ಜ್ ಹಾಗೂ ಗೌರವ್ ಗುಪ್ತ ಭ್ರಷ್ಟ ಅಧಿಕಾರಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ, ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇವರು ಮಾಡಿರುವ ಅಕ್ರಮಗಳ ಎಲ್ಲವೂ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News