ಪ್ರತಿನಿತ್ಯ 293 ಮಕ್ಕಳಿಂದ ತುಂಬಾಕು ಬಳಕೆ: ಡಾ.ವಿವೇಕ್ ಶೆಟ್ಟಿ
ಬೆಂಗಳೂರು, ಆ.27: ರಾಜ್ಯ ವ್ಯಾಪ್ತಿಯಲ್ಲಿ ಪ್ರತಿನಿತ್ಯ 293 ಮಕ್ಕಳು ತುಂಬಾಕು ಬಳಕೆಗೆ ಮುಂದಾಗುತ್ತಿದ್ದು, ಇದನ್ನು ತಡೆಗಟ್ಟುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ನಾರಾಯಣ ಹೆಲ್ತ್ ಸಿಟಿಯ ಕ್ಯಾನ್ಸರ್ ತಜ್ಞ ಡಾ.ವಿವೇಕ್ ಶೆಟ್ಟಿ ಹೇಳಿದರು.
ಮಂಗಳವಾರ ನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಆಯೋಜಿಸಿದ್ದ, ಜೀವನಕ್ಕಾಗಿ ಪ್ರತಿಜ್ಞೆ, ತಂಬಾಕು ಮುಕ್ತ ಯುವಜನತೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದಿನೇ ದಿನೇ ತಂಬಾಕು ಬಳಕೆದಾರರು ಹೆಚ್ಚಾಗುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ. ಪ್ರತಿವರ್ಷ ಬರೀ ತಂಬಾಕು ಉತ್ಪನ್ನಗಳ ಸೇವನೆಯಿಂದಲೇ 50 ಸಾವಿರಕ್ಕೂ ಅಧಿಕ ಮಂದಿ ಮೃತಪಡುತ್ತಿದ್ದು, ಇದರಲ್ಲಿ ಯುವ ಸಮುದಾಯವೇ ಜಾಸ್ತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಎನ್‌ಎಸ್‌ಎಸ್ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕ ಕೆ.ವಿ.ಖಾದ್ರಿ ನರಸಿಂಹಯ್ಯ ಮಾತನಾಡಿ, ನಮ್ಮ ಭವಿಷ್ಯದ ತಲೆಮಾರುಗಳನ್ನು ತಂಬಾಕಿನಿಂದ ರಕ್ಷಿಸುವುದು ಬಹಳ ಮುಖ್ಯ ಮತ್ತು ಯುವ ಜನತೆ ಸಕ್ರಿಯವಾಗಿ ತಂಬಾಕು ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಕರ್ನಾಟಕದಲ್ಲಿ 3 ಸಾವಿರಕ್ಕೂ ಅಧಿಕ ಎನ್‌ಎಸ್‌ಎಸ್ ಘಟಕಗಳಿದ್ದು, 3.7 ಲಕ್ಷಕ್ಕೂ ಅಧಿಕ ಸ್ವಯಂ ಸೇವಕರಿದ್ದಾರೆ. ಈ ಅಭಿಯಾನದಲ್ಲಿ ಇವರು ಜತೆಗೂಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಸಂಚಾಲಕ ಪ್ರೊ.ಬಸಂತಾ ಶೆಟ್ಟಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.