ಆ.30: ಕನ್ನಡ-ಉರ್ದು ಸಾಹಿತ್ಯ ಅನುವಾದ ಕುರಿತು ಉಪನ್ಯಾಸ
ಬೆಂಗಳೂರು, ಆ.28: ಕನ್ನಡ ಮತ್ತು ಉರ್ದು ಭಾಷೆಗಳ ನಡುವಿನ ಸಾಹಿತ್ಯ ಅನುವಾದಗಳ ಕುರಿತು ವಿಶೇಷ ಉಪನ್ಯಾಸವೊಂದನ್ನು ನಗರದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಕೇಂದ್ರ ಸಾಹಿತ್ಯ ಅಕಾದೆಮಿಯ ಭಾಷಾಂತರ ಕೇಂದ್ರದಲ್ಲಿ ಆ.30ರಂದು ಶುಕ್ರವಾರ ಸಂಜೆ 5ಕ್ಕೆ ಆಯೋಜಿಸಲಾಗಿದೆ.
ಪ್ರಮುಖ ಉರ್ದು ಲೇಖಕ ಹಾಗೂ ಅನುವಾದಕ ಮಾಹೇರ್ ಮನ್ಸೂರ್ ಕನ್ನಡ ಮತ್ತು ಉರ್ದು ಭಾಷೆಗಳ ನಡುವಿನ ಅನುವಾದಗಳ ಅನುಸಂಧಾನ ಕುರಿತಾಗಿ ಮಾತನಾಡಲಿದ್ದಾರೆ. ಇವರು ಕನ್ನಡದಿಂದ ಉರ್ದು ಭಾಷೆಗೆ ಅನುವಾದಿಸಿರುವ ’ಸಿರಿಸಂಪಿಗೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪಡೆದಿದ್ದಾರೆ.
ಉರ್ದು ಭಾಷೆಯ ಪ್ರಸಿದ್ಧ ಕವಿ ಹಾಗೂ ಕರ್ನಾಟಕದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಖಲೀಲ್ ಉರ್ ರೆಹಮಾನ್ (ಖಲೀಲ್ ಮಾಮೂನ್) ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪ್ರಮುಖ ಅನುವಾದಕರಾದ ಮುಹಮ್ಮದ್ ಆಝಾಮ್ ಶಾಹಿದ್ ಮತ್ತು ಶಾಕಿರಾ ಖಾನುಂ ಉಪನ್ಯಾಸದ ಬಳಿಕ ಸಭಿಕರೊಡನೆ ನಡೆಯಲಿರುವ ಸಂವಾದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.