ಸೆ. 8-9ಕ್ಕೆ ಬೆಳಗಾವಿ ಸುವರ್ಣಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಭೆ: ಸಚಿವ ಈಶ್ವರಪ್ಪ
ಬೆಂಗಳೂರು, ಆ. 29: ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ಗ್ರಾಮೀಣ ಪ್ರದೇಶದ ರಸ್ತೆ, ಮೂಲಸೌಲಭ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೆ.8 ಮತ್ತು 9ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಜಿ.ಪಂ.ಅಧ್ಯಕ್ಷರು, ಸಿಇಓಗಳು ಸೇರಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಹೊಸ ರೂಪ ನೀಡಲು ನಿರ್ಧರಿಸಿದ್ದೇನೆ. ಪ್ರಧಾನಿ ಮೋದಿ ಗ್ರಾಮೀಣ ಜನರ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ನಾನೂ ಆ ನಿಟ್ಟಿನಲ್ಲಿ ಶ್ರಮಿಸುವೆ ಎಂದರು.
ನೆರೆ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಶುದ್ಧ ಕುಡಿಯುವ ನೀರಿನ ಘಟಕಗಳ ಸುಸ್ಥಿತಿ, ಕೆರೆ ಅಭಿವೃದ್ಧಿ- ಪುನಶ್ಚೇತನ, ತುರ್ತು ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಜನ ಜಾಗೃತಿ: ಸ್ವಚ್ಛ ಭಾರತ್ ಅಭಿಯಾನದಲ್ಲಿ ಶೌಚಾಲಯಗಳ ನಿರ್ಮಾಣದ ಜತೆಗೆ ಶೌಚಾಲಯ ಬಳಕೆಗೆ ಜಾಗೃತಿ ಮೂಡಿಸುವುದು, ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ, ನೈರ್ಮಲ್ಯ ಕಾಪಾಡಲು ಒತ್ತು ನೀಡಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.
ಪುನರ್ವಸತಿ: ಸರಕಾರ ಈಗಾಗಲೇ ನೆರೆ ಪೀಡಿತ ಪ್ರದೇಶದ ಜನರಿಗೆ ತಲಾ 10 ಸಾವಿರ ರೂ.ಗಳನ್ನು ಸಂತ್ರಸ್ತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಭಾಗಶಃ ಮನೆ ಕಳೆದುಕೊಂಡವರಿಗೆ 1ಲಕ್ಷ ರೂ., ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ನೀಡಲು ಘೋಷಣೆ ಮಾಡಲಾಗಿದೆ.
ನೆರೆ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ದೃಷ್ಟಿಯಿಂದ ಎತ್ತರ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಭೂಮಿ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದಾಖಲೆ ಇಲ್ಲದ ಜನರಿಗೆ ಸ್ಥಳೀಯರ ಮಾಹಿತಿಯನ್ನು ಆಧರಿಸಿ ಪುನರ್ವಸತಿ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.
ಪ್ರವಾಹ ಪೀಡಿತ ಪ್ರದೇಶದ ಮಕ್ಕಳಿಗೆ ಪುಸ್ತಕ ವಿತರಣೆ, ಸಾಂಕ್ರಾಮಿಕ ರೋಗ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ನೆರೆ ಸಂತ್ರಸ್ತರ ಹೆಸರಿನಲ್ಲಿ ಯಾವುದೇ ರೀತಿಯ ದುರ್ಬಳಕೆಗೆ ಅವಕಾಶವಿಲ್ಲದಂತೆ ಸರಕಾರ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದು ಈಶ್ವರಪ್ಪ ಸ್ಪಷ್ಟಣೆ ನೀಡಿದರು.
ಕೇಂದ್ರಕ್ಕೆ ಮನವಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರಕಾರದಿಂದ ಬರಬೇಕಿದ್ದ ಬಾಕಿ ಮೊತ್ತವನ್ನು ಪಡೆದುಕೊಳ್ಳಲು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. 1 ಸಾವಿರ ಕೋಟಿ ರೂ.ಗಳಷ್ಟು ಬಾಕಿ ಬರಬೇಕಿದ್ದು, ಶೀಘ್ರ ಬಿಡುಗಡೆಗೆ ಕೋರಲಾಗುವುದು ಎಂದರು. ಈ ವೇಳೆ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್ ಉಪಸ್ಥಿತರಿದ್ದರು.