ಐಟಿ ದಾಳಿ ಪ್ರಕರಣ: ರಕ್ಷಣೆ ಕೋರಿ ಶಾಸಕ ಡಿಕೆಶಿ ಸಲ್ಲಿಸಿದ್ದ ಮೆಮೊ ವಜಾ

Update: 2019-08-30 16:17 GMT

ಬೆಂಗಳೂರು, ಆ.30: ಹೊಸದಿಲ್ಲಿಯ ಮನೆಗಳಲ್ಲಿ ದೊರೆತ 8.60 ಕೋಟಿಯಷ್ಟು ಲೆಕ್ಕವಿಲ್ಲದ ಹಣ ಪತ್ತೆ ಪ್ರಕರಣದಲ್ಲಿ ಈ.ಡಿ. ವಿಚಾರಣೆ ವೇಳೆ ಬಂಧಿಸದಂತೆ ರಕ್ಷಣೆ ಕೋರಿ ಸಲ್ಲಿಸಿದ್ದ ಮೆಮೊ(ಜ್ಞಾಪನಾ ಪತ್ರ) ಅನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿ ಆದೇಶಿಸಿದೆ. 

ವಿಚಾರಣೆ ವೇಳೆ ಡಿಕೆಶಿ ಪರ ವಾದಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ಅರ್ಜಿದಾರರಿಗೆ ಜಾರಿ ನಿರ್ದೇಶನಾಲಯ(ಈ.ಡಿ.)ವು ಗುರುವಾರ ರಾತ್ರಿ ಸಮನ್ಸ್ ನೀಡಿ, ಶುಕ್ರವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದೆ. ಗುರುವಾರ ಇದೇ ನ್ಯಾಯಪೀಠ ನೀಡಿರುವ ತೀರ್ಪು ಮೇಲ್ಮನವಿ ಸಲ್ಲಿಸಬಹುದಾದ ತೀರ್ಪು. ಹೀಗಾಗಿ, ಮೇಲ್ಮನವಿ ಸಲ್ಲಿಸಲು ನಮಗೆ ಕಾಲಾವಕಾಶ ನೀಡಬೇಕು. ಈಗ ಮೂರು ದಿನ ಸರಕಾರಿ ರಜೆ ಇದೆ. ಹೀಗಾಗಿ, ವಿಚಾರಣೆಗೆ ಹಾಜರಾದಾಗ ಬಂಧನ ಮಾಡದಂತೆ ಮಧ್ಯಂತರ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಈ.ಡಿ. ಪರ ವಾದಿಸಿದ ವಕೀಲ ಎಂ.ಬಿ.ನರಗುಂದ ಅವರು, ಈ ಹಿಂದೆ ಕೇಸ್ ವಿಚಾರಣೆ ವೇಳೆ ರಕ್ಷಣೆ ನೀಡಲಾಗಿತ್ತು. ಆಗ ನೀಡಲಾಗಿದ್ದ ಮಧ್ಯಂತರ ರಕ್ಷಣೆ ಕೇಸು ಮುಗಿಯುವವರೆಗೆ ಮಾತ್ರ ಅನ್ವಯಿಸುತ್ತದೆ. ಈಗ ರಕ್ಷಣೆ ನೀಡುವ ಅವಶ್ಯಕತೆ ಇಲ್ಲ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಈಗಾಗಲೇ ತೀರ್ಪಿನ ಪ್ರತಿಯನ್ನು ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಲಾಗಿದೆ. ಇವತ್ತೆ ಮೇಲ್ಮನವಿ ಸಲ್ಲಿಸಬಹುದಲ್ಲಾ ಎಂದರು. ಈಗಾಗಲೇ ತೀರ್ಪು ನೀಡಲಾಗಿದೆ. ಈಗ ಏನೂ ಮಾಡಲಾಗುವುದಿಲ್ಲ ಎಂದು ಅರ್ಜಿ ವಜಾ ಮಾಡಿದರು.

ಪ್ರಕರಣವೇನು: 2017ರ ಆ.2ರಂದು ಆದಾಯ ತೆರಿಗೆ(ಐಟಿ) ಅಧಿಕಾರಿಗಳು ಡಿ.ಕೆ.ಶಿವಕುಮಾರ್‌ಗೆ ಸೇರಿದ ಬೆಂಗಳೂರು ಮತ್ತು ಹೊಸದಿಲ್ಲಿಯ ಮನೆಗಳ ಮೇಲೆ ದಾಳಿ ಮಾಡಿ 8,59,69,100 ಮೊತ್ತವನ್ನು ಜಪ್ತಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್, ಸಚಿನ್ ನಾರಾಯಣ, ಸುನಿಲ್‌ಕುಮಾರ್ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯ್ದೆ-1961ರ ಕಲಂ 277 ಮತ್ತು 278 ಹಾಗೂ ಐಪಿಸಿ ಕಲಂ 120 ಬಿ, 193 ಹಾಗೂ 199 ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ಜಾರಿಗೊಳಿಸಿದ್ದ ಸಮನ್ಸ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರವಷ್ಟೇ ವಜಾ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News