ಮೆಟ್ರೋ 2ನೆ ಹಂತ 2020ರೊಳಗೆ ಸಂಚಾರಕ್ಕೆ ಮುಕ್ತ: ಯಡಿಯೂರಪ್ಪ

Update: 2019-08-30 17:22 GMT

ಬೆಂಗಳೂರು, ಆ.30: ಪ್ರಸ್ತುತ 72 ಕಿ.ಮೀ ಉದ್ದ ಹಾಗೂ 61 ನಿಲ್ದಾಣಗಳನ್ನು ಹೊಂದಿರುವ ಮೆಟ್ರೋ-2ನೆ ಹಂತ ಅನುಷ್ಠಾನದ ವಿವಿಧ ಹಂತಗಳಲ್ಲಿದ್ದು, ಬಹುತೇಕ ಮಾರ್ಗಗಳು 2020 ರೊಳಗೆ ಸಂಚಾರಕ್ಕೆ ಮುಕ್ತವಾಗಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿಯವರು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ಪ್ರಗತಿ ಪರಿಶೀಲನೆ ಸಭೆಯನ್ನು ಕರೆದು ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಅವರು ಮಾತನಾಡಿದರು.

ರಾಜ್ಯ ಸರಕಾರವು 2ನೆ ಹಂತ ಎ ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂವರೆಗೆ 17 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು 5995 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದೆ. 2ನೆ ಹಂತ ಬಿ ಅಡಿಯಲ್ಲಿ ಕೆ.ಆರ್.ಪುರಂ ನಿಂದ ಏರ್‌ಪೋರ್ಟ್‌ವರೆಗೆ 38 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು 10,584 ಕೋಟಿ ವೆಚ್ಚದಲ್ಲಿ ಕೈಗೊಂಡಿದೆ. ಈ ಎರಡು ಮಾರ್ಗಗಳ ವ್ಯಾಪ್ತಿಯಲ್ಲಿ ಬರುವ ಐಟಿ ಕಂಪೆನಿಗಳ ಉದ್ಯೋಗಿಗಳಿಗೆ ಇದರಿಂದ ಬಹಳ ಉಪಯೋಗವಾಗಲಿದೆ ಎಂದರು.

ಇತ್ತೀಚೆಗೆ ಮೆಟ್ರೋ ನಿಲ್ದಾಣದಲ್ಲಿ ಅವಘಡ ಉಂಟಾಗಿ ಪ್ರಾಣಹಾನಿಯಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಅತಿಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಿಯೂ ಅಪಘಾತ, ಅವಘಡವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಿಎಂ ಅವರು ಹೇಳಿದರು.

ಪ್ರಯಾಣಿಕರ ಅಹವಾಲು, ಆಕ್ಷೇಪಗಳಿದ್ದಲ್ಲಿ ಅವುಗಳನ್ನು ತ್ವರಿತವಾಗಿ ಪರಿಹರಿಸಲು ಸಾಮಾಜಿಕ ಮಾಧ್ಯಮವನ್ನು ಉಪಯೋಗಿಸಿಕೊಳ್ಳುವುದು ಸೂಕ್ತ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಸರಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಸೇರಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News