ಬಿಜೆಪಿ ನಾಯಕಿಯರು ಎಲ್ಲಿದ್ದಾರೆ: ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಪ್ರಶ್ನೆ

Update: 2019-08-31 13:55 GMT

ಬೆಂಗಳೂರು, ಆ.31: ವಿಧಾನಸೌಧದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಆರೋಪ ಹೊತ್ತಿರುವ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದನ್ನು ಖಂಡಿಸಿ, ಪ್ರಶ್ನಿಸಬೇಕಾದ ಬಿಜೆಪಿ ನಾಯಕಿಯರು ಎಲ್ಲಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಪ್ರಶ್ನೆ ಮಾಡಿದರು.

ಶನಿವಾರ ನಗರದ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಮಹಿಳಾ ಕಾರ್ಯಕರ್ತರು, ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕೈಬಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಪ್ಪಾಅಮರನಾಥ್, ಮಹಿಳೆಯರಿಗೆ ಅಪಮಾನ ಮಾಡಿರುವ ಲಕ್ಷ್ಮಣ ಸವದಿ ಅನ್ನು ಜನರೇ ಸೋಲಿಸಿದ್ದಾರೆ. ಆದರೆ, ಸಂವಿಧಾನ ವಿರುದ್ಧವಾಗಿ ಅವರು ಉನ್ನತ ಪಡೆದಿರುವುದು ಖಂಡನೀಯ. ಈ ಬಗ್ಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ತು ಸದಸ್ಯೆ ತಾರಾ, ಮುಖಂಡರಾದ ಶೃತಿ, ಭಾರತಿಶೆಟ್ಟಿ ಪ್ರಶ್ನಿಸಿ, ಅವರನ್ನು ವಜಾಗೊಳಿಸಬೇಕಿತ್ತು ಎಂದು ಹೇಳಿದರು.

ಸಂವಿಧಾನ ಬಾಹಿರ ಅಧಿಕಾರವನ್ನು ಹಿಡಿದಿರುವ ಯಡಿಯೂರಪ್ಪ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣೆಯಲ್ಲಿ ಸೋತವರನ್ನು ಕೇವಲ ಮಂತ್ರಿಯಷ್ಟೆ ಅಲ್ಲ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಮಹಿಳೆಯರ ಘನತೆಯ ಕುರಿತು ಕಿಂಚಿತ್ತಾದರೂ ಗೌರವ ಇದ್ದರೆ ಲಕ್ಷ್ಮಣ ಸವದಿ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಾಯಕರು, ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ಸಾಂವಿಧಾನಿಕ ಸಂಸ್ಥೆಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಜನರು ಗಮನಿಸುತ್ತಿದ್ದಾರೆ ಎಂದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಿರುಕುಳ ನೀಡುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಂದರು.

ಅತಿವೃಷ್ಟಿ, ನೆರೆ ಸಂತ್ರಸ್ತರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರ ಗಮನ ನೀಡುತ್ತಿಲ್ಲ. ಜನ-ಜಾನುವಾರು, ಆಸ್ತಿ-ಪಾಸ್ತಿ ನಷ್ಟವಾದರೂ, ಯಾವುದೇ ಕ್ರಮ ಕೈಗೊಳ್ಳದೆ, ಸರಕಾರ ಸುಮ್ಮನಿರುವುದು ನಮ್ಮ ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ವಶಕ್ಕೆ

ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನಿಸಿದ ಪ್ರತಿಭಟನಾ ನಿರತ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News