ಕನ್ನಡದ ಕೋಟ್ಯಧಿಪತಿಯಲ್ಲಿ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಜಗ್ಗೇಶ್

Update: 2019-09-05 18:10 GMT

ಬೆಂಗಳೂರು, ಸೆ.5: ವಾರಾಂತ್ಯಕ್ಕೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ವಿಶೇಷವಾಗಿ ಜರುಗಲಿದ್ದು, ರಾಜ್ಯದ ಇಬ್ಬರು ಯುವ ಸಂಸದರು ಹಾಗೂ ನವರಸ ನಾಯಕ ಜಗ್ಗೇಶ್ ಸಮಾಜದ ಒಳಿತಿಗಾಗಿ ಈ ಆಟ ಆಡಿದ್ದಾರೆ. ಮೈಸೂರಿನ ಸಂಸದ ಪ್ರತಾ ಸಿಂಹ ಹಾಗೂ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಪೀಡಿತರಿಗಾಗಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಗೆದ್ದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಇಬ್ಬರು ಯುವ ನಾಯಕರು ತಮ್ಮ ಸಾಮಾನ್ಯ ಜ್ಞಾನವನ್ನು ಒರೆಗೆ ಹಚ್ಚಿದ್ದು, ಮಾತ್ರವಲ್ಲದೆ ರಾಜಕೀಯ ಕ್ಷೇತ್ರದ ಸ್ವಾರಸ್ಯಕರ ಅಂಶಗಳನ್ನು ಪುನೀತ್ ಜೊತೆ ಹಂಚಿಕೊಂಡರು.

ಮೈಸೂರಿನ ಸಿಂಹ ಮತ್ತು ಬೆಂಗಳೂರಿನ ಸೂರ್ಯ ಪ್ರವಾಹ ಪೀಡಿತರಿಗಾಗಿ ಆಟವಾಡಿದರೆ ನವರಸ ನಾಯಕ ಜಗ್ಗೇಶ್ ನೀರಿನ ಸದ್ಬಳಕೆ ಮತ್ತು ನೀರಿನ ಅಭಾವದ ಬಗ್ಗೆ ಜಾಗೃತಿ ಮೂಡಿಸಿದರು. ಮುಂದಿನ ದಿನಗಳಲ್ಲಿ ನೀರಿನ ಅಭಾವ ಬಹಳವಾಗಿ ಎದುರಾಗಲಿದೆ. ಅದಕ್ಕಾಗಿ ನಾವೆಲ್ಲರೂ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕಾದ ಬಗ್ಗೆ ಮನರಂಜನೀಯ ಶೈಲಿಯಲ್ಲಿ ವಿವರಿಸಿದರು.

ಇಬ್ಬರು ಯುವ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅಲ್ಲಿ ರಾಜಕೀಯ ಮತ್ತು ಅವರ ಜೀವನಕ್ಕೆ ಸಂಬಂಧಿಸಿದ ಆಸಕ್ತ ವಿಷಯಗಳೂ ಪ್ರಸ್ತುತಗೊಂಡವು. ತಾನು ಮತ್ತು ಮಗಳು ಪುನೀತ್ ಅಭಿನಯದ ಜಾಕಿ ಚಿತ್ರವನ್ನು ದಿನಾ ನೋಡುತ್ತಿದ್ದು, ಮಲಗುವ ಮುಂಚೆ ಜಾಕಿಯ ಯಾವುದಾದರೂ ಒಂದು ಸೀನ್ ನೋಡದೆ ಮಗಳು ಮಲಗುವುದೇ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಅವರ ಮೊದಲ ಸಂಬಳದ ಬಗೆಗಿನ ಪ್ರಸಂಗ ತುಂಬಾ ಕುತೂಹಲಕಾರಿಯಾಗಿದ್ದು, ತಿಂಗಳಿಗೆ 2,750 ರೂ. ವೇತನದಿಂದ ಆರಂಭವಾದ ಸಿಂಹರ ವೃತ್ತಿ ಬದುಕು ಇಂದು ಸಂಸದರ ವೇತನ ಹೆಚ್ಚಳಕ್ಕಾಗಿ ಹೋರಾಟ ನಡೆಸುವವರೆಗೆ ಬೆಳೆದ ಪರಿಯನ್ನು ಕಾರ್ಯಕ್ರಮದಲ್ಲಿ ವಿವರಿಸಿದರು. ಸಂಸತ್ ಸದಸ್ಯರ ತಿಂಗಳ ವೇತನವನ್ನು 1,08,000 ದಿಂದ ಹೆಚ್ಚಿಸಬೇಕು ಎಂದು ನಾನು ಪ್ರಧಾನಿ ಮೋದಿಯವರ ಬಳಿಗೆ 80ಕ್ಕೂ ಹೆಚ್ಚು ಸಂಸದರ ಸಹಿಯೊಂದಿಗೆ ಮನವಿ ತೆಗೆದುಕೊಂಡು ಹೋಗಿದ್ದೆ. ಈಗ ಅದನ್ನು 1,89,000 ಕ್ಕೆ ಏರಿಸಲಾಗಿದೆ, ಎಂದು ಪ್ರತಾಪ್ ಹೇಳಿದರು. ತೇಜಸ್ವಿ ಆರು ತಿಂಗಳ ಕಾಲ ಕೆಲಸ ಮಾಡಿ ಕೇವಲ 5,000 ರೂ. ವೇತನ ಪಡೆದ ಬಗ್ಗೆ ವಿವರಿಸಿ, ಕೆಲಸವನ್ನುಶ್ರದ್ಧೆಯಿಂದ ಮಾಡಬೇಕಾದ ಬಗ್ಗೆ ತಿಳಿಸಿದರು.

ಜಗ್ಗೇಶ್ ಅವರ ಫನ್ ಅನ್‌ಲಿಮಿಟೆಡ್‌ನಲ್ಲಿ ನೀರನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ತುಂಬಾ ರಸವತ್ತಾಗಿ ತಿಳಿಹೇಳಿದರು. ಮಕ್ಕಳಿಗೆ ಆಸ್ತಿ ಮಾಡಿದ ಹಾಗೆ ಮುಂದಿನ ಪೀಳಿಗೆಗೆ ನಾವು ನೀರಿನ ಆಸ್ತಿ ಮಾಡಿಡಬೇಕಾಗಿ ಬಂದಿದೆ. ಇಲ್ಲವಾದಲ್ಲಿ 2045ರ ಹೊತ್ತಿಗೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಬ್ರಿಟೀಷರ ಥರ ಪೇಪರ್ ಬಳಸಬೇಕಾಗಬಹುದು, ಎಂದು ಹಾಸ್ಯಭರಿತವಾಗಿ ಗಂಭೀರ ವಿಚಾರವನ್ನು ವಿವರಿಸಿದರು. ಅವರು ಗೆದ್ದ ಹಣವನ್ನು ನೀರಿನ ಇಂಗು ಗುಂಡಿಗಳ ನಿರ್ಮಾಣ ಕೆಲಸಕ್ಕೆ ದೇಣಿಗೆಯಾಗಿ ನೀಡಿದರು.

ಕಲರ್ಸ್ ಕನ್ನಡ ಯಾವಾಗಲೂ ಸಾಮಾಜಿಕ ಜವಾಬ್ದಾರಿ ಯನ್ನು ನಿಭಾಯಿಸಿರುವ ಸಂಸ್ಥೆ. ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ಹಾಗೂ ನೀರಿನ ಅಭಾವದ ಬಗ್ಗೆ ಜಾಗೃತಿ ಮೂಡಿಸಲು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೂಲಕ ನೆರವಾಗಲು ನಮಗೊಂದು ಅವಕಾಶ ಸಿಕ್ಕಿತು. ಇದರಲ್ಲಿ ಭಾಗವಹಿಸಿದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮತ್ತು ಜಗ್ಗೇಶ್‌ರಿಗೆ ಕಲರ್ಸ್ ಕನ್ನಡ ಆಭಾರಿಯಾಗಿದೆ ಎಂದು ವಯಾಕಾಂ 18ನ ಕನ್ನಡ ಕ್ಲಸ್ಟರ್‌ನ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳಿದ್ದಾರೆ.

ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ರವಿವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News