ಹಣ ವಸೂಲಿ ಮಾಡಿ ನೀವೇನು ರಸ್ತೆ ಸರಿ ಮಾಡ್ತೀರಾ ?
ಬೆಂಗಳೂರು, ಸೆ.6: ಕೇಂದ್ರ ಸರಕಾರವು ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಜಾರಿಗೊಳಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿರುವ ಬೆನ್ನಲ್ಲೇ ಬೆಂಗಳೂರು ನಗರ ಸಂಚಾರ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಶುಲ್ಕದ ಪಟ್ಟಿ ನೋಡಿ, ವಾಹನ ಸವಾರರು ಸಿಟ್ಟು ಹೊರ ಹಾಕುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬರುತ್ತಿದೆ.
ನಗರ ವ್ಯಾಪ್ತಿಯ ಬಹುತೇಕ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ಗುಂಪು ಕಟ್ಟಿ ನಿಂತಿದ್ದು, ತಪ್ಪು ಎಸಗುವ ವಾಹನ ಸವಾರರಿಗೆ ಬಲೆ ಬೀಸುತ್ತಿದ್ದಾರೆ. ಆದರೆ, ದಂಡ ಪಾವತಿಸುವವರ ಪ್ರಶ್ನೆಗಳಿಗೆ ಪೊಲೀಸರ ಬಳಿ ಉತ್ತರವೇ ಇಲ್ಲದಂತಾಗಿದೆ. ದಂಡ ಹೆಚ್ಚಿರುವ ಮಾಹಿತಿಯೇ ಇಲ್ಲದ ವಾಹನ ಸವಾರರು ಹೌಹಾರುತ್ತಿದ್ದಾರೆ.
ದಂಡ ಪಾವತಿಸಿದ ನೂರಾರು ಮಂದಿಯದು ಒಂದೇ ಪ್ರಶ್ನೆ- ವಸೂಲಿ ಮಾಡಿದ ಹಣದಿಂದ ನೀವು ರಸ್ತೆ ಸರಿ ಮಾಡುತ್ತೀರಾ? ಇದಕ್ಕೆ ಪೊಲೀಸರ ಬಳಿ ಉತ್ತರವೇ ಇಲ್ಲ. ನಮ್ಮ ಕೆಲಸ ಸಂಚಾರ ನಿಯಮ ಪಾಲನೆ ಎಂದೇಳಿ ಸಮಾಧಾನ ಪಡಿಸುತ್ತಿದ್ದಾರೆ. ನಗರದ ಅಂಚೆ ಇಲಾಖೆಯ ಪ್ರಧಾನ ಕಚೇರಿ ಮುಂಭಾಗ ನಿಂತಿದ್ದ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಬೈಕ್ ಸವಾರನೋರ್ವನ ಬಳಿ, ವಿಮೆ ಇರಲಿಲ್ಲ. ಇದಕ್ಕೆ ಪೊಲೀಸರು 2 ಸಾವಿರ ರೂ.ದಂಡ ಕಟ್ಟಿ ಎಂದರು. ‘ಸರ್, ನನ್ನ ಬಳಿ ಅಷ್ಟೊಂದು ಹಣವಿಲ್ಲ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುತ್ತಿಗೆ ನೌಕರಿಯಲ್ಲಿದ್ದೇನೆ. ಈ ಬಾರಿ ಬಿಟ್ಟುಬಿಡಿ’ ಎಂದು ಮನವಿ ಮಾಡಿಕೊಂಡರು. ಆದರೆ, ದರ ಪರಿಷ್ಕರಣೆ ಆಗಿದೆ, ದಂಡ ಕಟ್ಟಿ ವಾಹನ ತೆಗೆದುಕೊಂಡು ಹೋಗು ಎಂದು ಪೊಲೀಸರು ಉತ್ತರಿಸಿದರು.
ಮತ್ತೊಂದು ದೃಶ್ಯ, ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಿರಾಣಿ ಅಂಗಡಿಯನ್ನಿಟ್ಟುಕೊಂಡಿರುವ ಮುನಿರಾಜು ಎಂಬುವರನ್ನು ಹಿಡಿದ ಪೊಲೀಸರು, ಅರ್ಧ ಹೆಲ್ಮೆಟ್ ಧರಿಸುವಂತಿಲ್ಲ. ನೀತಿ, ನಿಯಮ ಬದಲಾಗಿದ್ದು, ದಂಡ ಪಾವತಿಸು ಎಂದರು. ಇದಕ್ಕೆ ಸಿಟ್ಟಾದ ಮುನಿರಾಜು, ‘ಈ ಹೆಲ್ಮೆಟ್ ನಾನೇನು ಮನೆಯಲ್ಲಿ ತಯಾರಿಸಿಲ್ಲ, ಅಂಗಡಿಯಿಂದಲೇ ಖರೀದಿ ಮಾಡಿದ್ದೇನೆ. ದಿನಕ್ಕೊಂದು ನಿಯಮ ಮಾಡಿದರೆ ನಾವೇನು ಮಾಡಬೇಕು’ ಎಂದರು.
‘ಸರಕಾರ ಹೆಚ್ಚಿನ ದಂಡ ಪಾವತಿಗೆ ಹೊಸ ನಿಯಮ ಜಾರಿ ಮಾಡಿದೆ. ಇದರಿಂದ ನಿಯಮ ಪಾಲನೆ ಪ್ರಮಾಣ ಹೆಚ್ಚಬಹುದು. ತಪ್ಪು ಮಾಡಿದವರು ದಂಡವನ್ನೇನೋ ಪಾವತಿಸುತ್ತಾರೆ. ಆದರೆ, ಮತ್ತೆ ತಪ್ಪೆಸಗದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸಂಚಾರ ಪೊಲೀಸರಿಂದ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕಿದೆ. ಹೀಗೆ ಏಕಾಏಕಿ, ಹೆಚ್ಚುವರಿ ದಂಡ ವಸೂಲಿ ಮಾಡುವುದರಿಂದ ಭಯ ಆಗುತ್ತಿದೆ’ ಎಂದರು ಕಾರಿನ ಸೀಟ್ ಬೆಲ್ಟ್ ಹಾಕದೆ ದಂಡ ಪಾವತಿಸಿದ ಚಾಲಕ ಮುಬಾರಕ್.
ವಿಮೆ ಬಳಿ ಸಾಲು ಸಾಲು
ವಾಹನ ಮಾಲಕರು ಈ ಹಿಂದೆ ವಿಮೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, 2 ಸಾವಿರ ರೂ. ದಂಡ ಹೆಚ್ಚಿದ ಹಿನ್ನೆಲೆ, ನಗರ ಪೆಟ್ರೋಲ್ ಬಂಕ್, ವಿಮೆ ನೋಂದಣಿ ಕೇಂದ್ರಗಳಲ್ಲಿ ಸಾಲು ಸಾಲಾಗಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ.
ಹೊಸ ನಿಯಮದಲ್ಲಿ ವಾಹನ ವಿಮೆ ಇಲ್ಲದೆ ರಸ್ತೆಗೆ ಇಳಿಸಿದರೆ 2 ಸಾವಿರ ರೂ. ದಂಡ, ವಾಹನ ಫಿಟ್‌ನೆಸ್ (ಎಫ್‌ಸಿ) ಇಲ್ಲದಿದ್ದರೆ 2 ಸಾವಿರ ದಂಡ ಪಾವತಿಸಬೇಕಿದೆ. ಈ ಆದೇಶದ ಬೆನ್ನಲ್ಲೇ ಎಚ್ಚೆತ್ತುಕೊಳ್ಳುತ್ತಿರುವ ಸವಾರರು, ತಮ್ಮ ವಾಹನದ ವಿಮೆ, ಫಿಟ್ನೆಸ್ ಪರೀಕ್ಷೆಯ ಪ್ರಮಾಣ ಪತ್ರದ ಕಾಲಮಿತಿ ಮುಗಿದಿದೆಯಾ? ಮುಗಿಯದೇ ಇದ್ದರೆ ಇನ್ನು ಎಷ್ಟು ದಿನ ಬಾಕಿ ಇದೆ? ಎಂದು ದಾಖಲೆಗಳಿಗೆ ತಡಕಾಡುತ್ತಿದ್ದಾರೆ.
ನಿಯಮ ಉಲ್ಲಂಘಿಸಿ ಸಿಎಂ?
ನೂತನ ಸಂಚಾರಿ ನಿಯಮದ ಅನ್ವಯ ಕಾರಲ್ಲಿ ಪ್ರಯಾಣಿಸುವಾಗ ಚಾಲಕ, ಸಹ ಪ್ರಯಾಣಿಕ ಸಹ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ಕಾನೂನು ಉಲ್ಲಂಘಿಸಿದರೆ, 1 ಸಾವಿರ ರೂ. ದಂಡ ಕಟ್ಟಬೇಕು. ಆದರೆ, ಕಾರಿನ ಮುಂಭಾಗ ಕೂರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೀಟ್ ಬೆಲ್ಟ್ ಧರಿಸುವುದಿಲ್ಲ ಎಂದು ವರದಿಯಾಗಿದೆ. ಪರಿಷ್ಕೃತ ದರ ಜಾರಿಯಾದ ಬಳಿಕವೂ, ಯಡಿಯೂರಪ್ಪ ಅವರು ಎರಡು ದಿನವು ಸಿಲ್ ಬೆಲ್ಟ್ ಧರಿಸದೆ, ಪ್ರಯಾಣ ಬೆಳೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅದೇ ರೀತಿ, ಗೃಹ ಸಚಿವ ಬಸವರಾಜ ಬೊಮ್ಮಯಿ ಅವರ ಕಾರಿನ ಚಾಲಕ ಸಹ ಸೀಟ್ ಬೆಲ್ಟ್ ಧರಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.
ನಿಯಮ ಪಾಲಿಸಿ ದಂಡ ತಪ್ಪಿಸಿ
ಸಂಚಾರಿ ನಿಯಮಗಳನ್ನು ಪಾಲಿಸಿದರೆ ಯಾರೂ ದಂಡ ಕಟ್ಟಬೇಕಿಲ್ಲ. ವಾಹನ ಸವಾರರ ಹಿತದೃಷ್ಟಿಯಿಂದಲೇ ದಂಡ ಹೆಚ್ಚಳ ಮಾಡಲಾಗಿದೆ ಹೊರತು, ಬೇರೆ ಉದ್ದೇಶಕ್ಕಲ್ಲ ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.