ಬಿ ಟ್ರಾಕ್ ವ್ಯವಸ್ಥೆ ಜಿಲ್ಲಾ ಕೇಂದ್ರಗಳಿಗೂ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ

Update: 2019-09-09 12:31 GMT

ಬೆಂಗಳೂರು, ಸೆ.9: ಸಂಚಾರ ನಿಯಂತ್ರಣಕ್ಕಾಗಿ ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಜಾರಿಯಲ್ಲಿರುವ ಬಿ ಟ್ರಾಕ್ ವ್ಯವಸ್ಥೆಯನ್ನು ಜಿಲ್ಲಾ ಕೇಂದ್ರಗಳು ಹಾಗೂ ಪ್ರಮುಖ ವಾಣಿಜ್ಯ ಕೇಂದ್ರಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ನಗರದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಚಾರ ದಟ್ಟಣೆ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಇದು ಎರಡನೆ ಹಂತದ ನಗರ ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ. ಆದುದರಿಂದಾಗಿ, ನಗರದ ಮಾದರಿಯಲ್ಲಿ ಬಿಟ್ರಾಕ್ ವ್ಯವಸ್ಥೆಯನ್ನು ಜಿಲ್ಲಾ ಕೇಂದ್ರಗಳು ಹಾಗೂ ಪ್ರಮುಖ ವಾಣಿಜ್ಯ ಕೇಂದ್ರಗಳಿಗೂ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದರು.

ನಗರದ ಹೆಚ್ಚು ವಾಹನ ದಟ್ಟಣೆ ಇರುವ 12 ಜಂಕ್ಷನ್‌ಗಳಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು 50 ಕೋಟಿ ರೂ ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ನೂತನ ಯೋಜನೆಯಡಿ ಸಂಚಾರ ದಟ್ಟಣೆಯ 14 ಜಂಕ್ಷನ್ ಗಳಲ್ಲಿ ಆಧುನಿಕ ಉಪಕರಣಗಳನ್ನು ಅಳವಡಿಸಿ ಸಂಚಾರ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಬೆಂಗಳೂರಿನ ಮೆಟ್ರೋ ನಿಲ್ದಾಣದ ಬಳಿ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಲೋಕೋಪಯೋಗಿ ಇಲಾಖೆ, ಬಿಬಿಎಂಪಿ, ಮೆಟ್ರೋ ಮತ್ತು ಸಂಚಾರ ಪೊಲೀಸರು ಸಭೆ ಸೇರಿ ಕ್ರಮಗಳನ್ನು ಅನುಷ್ಠಾನಗೊಳಿಸುವ ವ್ಯವಸ್ಥೆಯನ್ನು ಜಾರಿ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಅನಾಥ ವಾಹನಗಳಿಗೆ ಮುಕ್ತಿ:

ಪೊಲೀಸ್ ಠಾಣೆಗಳ ಮುಂದೆ ಮತ್ತು ಅಕ್ಕಪಕ್ಕದ ರಸ್ತೆಗಳಲ್ಲಿ ಅನಾಥವಾಗಿ ಬಿದ್ದಿರುವ, ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳಿಗೆ ಮುಕ್ತಿ ಸಿಗಲಿದೆ. ನಗರದ ಪೊಲೀಸ್ ಠಾಣೆಗಳ ಮುಂದೆ ಬಿದ್ದಿರುವ ಹಳೆಯ ಸ್ಕ್ರಾಪ್ ವಾಹನಗಳನ್ನು ಒಂದೆಡೆ ಹಾಕಲು ಗೃಹ ಇಲಾಖೆ ನಿರ್ಧರಿಸಿದ್ದು, ಅದಕ್ಕೆ ಬಿಬಿಎಂಪಿಯಿಂದ 10 ಎಕರೆ ಭೂಮಿಯನ್ನು ಪಡೆದುಕೊಂಡಿದೆ. ಪೊಲೀಸ್ ಠಾಣೆಗಳ ಮುಂದೆ ಇರುವ ಸ್ಕ್ರಾಪ್ ವಾಹನಗಳನ್ನು ಇನ್ನು ಮುಂದೆ ಬಿಬಿಎಂಪಿ ನಗರದ ಬೆನ್ನಿಗಾನಹಳ್ಳಿ ಬಳಿ ನೀಡಿರುವ 10 ಎಕರೆ ಜಾಗದಲ್ಲಿ ಡಂಪ್ ಮಾಡಲಾಗುವುದು ಎಂದರು.

ಬಿಬಿಎಂಪಿಯ ಮೇಯರ್ ಗಂಗಾಂಬಿಕೆ ಜಾಗ ನೀಡಿ 5 ಕೋಟಿ ರೂ. ವೆಚ್ಚದಲ್ಲಿ ಜಾಗವನ್ನು ಮಟ್ಟ ಮಾಡಿ ಕಾಂಪೌಂಡ್ ಹಾಕಿಕೊಟ್ಟಿದ್ದಾರೆ. ನಗರ ಪೊಲೀಸ್ ಠಾಣೆಗಳ ಮುಂದೆ ಬಿದ್ದಿರುವ ಎಲ್ಲ ಸ್ಕ್ರಾಪ್ ವಾಹನಗಳನ್ನು ಇಲ್ಲಿಗೆ ಡಂಪ್ ಮಾಡಲಾಗುವುದು. ಪೊಲೀಸ್ ಠಾಣೆಗಳ ಮುಂದೆ ಧೂಳು ಹಿಡಿದು ಬಿದ್ದಿದ್ದ ಸ್ಕ್ರಾಪ್ ವಾಹನಗಳಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿತ್ತು. ಈ ಕಿರಿಕಿರಿಯಿಂದ ಸಾರ್ವಜನಿಕರು ಮುಕ್ತರಾಗಲಿದ್ದಾರೆ ಎಂದರು.

ಸಿಎಂರೊಂದಿಗೆ ರವಿವಾರ ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಚರ್ಚೆ ನಡೆಸಲಾಗಿದೆ. ಅತಿ ಹೆಚ್ಚು ಸಂಚಾರವಿರುವ ಯಾವ ರೀತಿ ಸಂಚಾರ ನಿಯಂತ್ರಣ ಮಾಡಬಹುದು ಎಂದು ಮಾಹಿತಿ ಪಡೆಯಲಾಗಿದೆ. ಅಲ್ಲದೆ, ಹೊಸದಾಗಿ ಸಿಸಿ ಕ್ಯಾಮೆರಾ ಅಳವಡಿಕೆ, ರಸ್ತೆಗಳ ಆಧುನೀಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News