ಡಿಜಿಟಲ್ ಆ್ಯಪ್‌ನಿಂದಲೂ ದಾಖಲೆ ತೋರಿಸಬಹುದು: ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್

Update: 2019-09-09 14:16 GMT

ಬೆಂಗಳೂರು, ಸೆ.9: ಡ್ರೈವಿಂಗ್ ಲೈಸೆನ್ಸ್ ಒಂದನ್ನು ಹೊರತು ಪಡಿಸಿ ವಾಹನಕ್ಕೆ ಸಂಬಂಧಪಟ್ಟಂತ ಆರ್‌ಸಿ ಬುಕ್, ವಿಮೆ ಹಾಗೂ ಇತರ ಕಾಗದ ಪತ್ರಗಳನ್ನು ವಾಹನ ಸವಾರರು ಡಿಜಿಟಲ್ ಲಾಕರ್ ಆ್ಯಪ್ ಮೂಲಕ ಸಂಚಾರಿ ಪೊಲೀಸರ ತಪಾಸಣೆ ವೇಳೆ ಪ್ರಸ್ತುತ ಪಡಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ದಾಖಲಾತಿಗಳನ್ನು ಕಾಗದ ಪತ್ರ ಸ್ವರೂಪದಲ್ಲೇ ಇಟ್ಟುಕೊಳ್ಳಲು ಕೆಲವು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ವಾಹನ ಸವಾರರಿಗೆ ಸಲಹೆ ನೀಡಿದರು. ದಂಡದ ಪ್ರಮಾಣ ದುಬಾರಿ ಆದ ನಂತರ ಸಾರ್ವಜನಿಕರಲ್ಲಿ ವ್ಯಾಪಕವಾದ ಜಾಗೃತಿ ಮೂಡಿಸಲಾಗುತ್ತಿದೆ. ಕಾನೂನು ಕೇವಲ ದಂಡ ವಸೂಲಿ ಮಾಡುವುದಕ್ಕಾಗಲಿ, ಸರಕಾರದ ಬೊಕ್ಕಸ ತುಂಬುವುದಕ್ಕಾಗಲಿ ಅಲ್ಲ. ಜನರ ಜೀವನ ರಕ್ಷಣೆ ಮಾಡುವುದಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಮೊಹರಂ ವರೆಗೂ ಬೆಂಗಳೂರು ಪೊಲೀಸರಿಗೆ ಕಾನೂನು ಸುವ್ಯವಸ್ಥೆ ರಕ್ಷಣೆ ಕಾರ್ಯದ ಒತ್ತಡ ಇದೆ. ಆ ಬಳಿಕ ಎಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಂಡು ಹೆಚ್ಚಿನ ಜನ ಜಾಗೃತಿ ಮೂಡಿಸಲಾಗುವುದು. ಅಪಘಾತಕ್ಕೆ ಕಾರಣವಾಗುವ ಏಕಮುಖ ಸಂಚಾರ, ನೋ ಪಾರ್ಕಿಂಗ್, ಪರವಾನಗಿ ರಹಿತ ಚಾಲನೆಯಂತಹ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದರು.

ಮೂಲಸೌಲಭ್ಯ ಕೊರತೆಯ ನೆಪ ಹೇಳಿ ಕಾನೂನು ಉಲ್ಲಂಘನೆ ಮಾಡುವುದು ಸರಿಯಲ್ಲ. ಪೊಲೀಸ್ ಇಲಾಖೆ ಬಿಬಿಎಂಪಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಮೂಲ ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಇವೆಲ್ಲ ಸರಿಯಲ್ಲ. ಕಾನೂನು ಜನರ ರಕ್ಷಣೆಗಾಗಿಯೇ ಇದೆ. ದಿನವೊಂದಕ್ಕೆ ರಾಜ್ಯದಲ್ಲಿ 33 ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. 300 ಜನ ಗಾಯಗೊಳ್ಳುತ್ತಿದ್ದಾರೆ. ಜೀವ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೇವೆ. ಜನ ಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು ಎಂದರು.

ಅಕ್ರಮ ವಲಸಿಗರ ಬಗ್ಗೆ ಕೇಂದ್ರ ಸರಕಾರದಿಂದ ಇನ್ನು ಯಾವುದೇ ಮಾಹಿತಿ ಬಂದಿಲ್ಲ. ಸೂಚನೆ ಬಂದ ತಕ್ಷಣ ನಾವು ಕ್ರಮ ಕೈಗೊಳ್ಳುತ್ತೇವೆ. ಮೊಬೈಲ್ ಹಾಗೂ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ಬೇಡ. ಅಪರಾಧಿಗಳನ್ನು ಪತ್ತೆಹಚ್ಚಿ ಮಾಲನ್ನು ವಶಪಡಿಸಿಕೊಂಡು ಮಾಲಕರಿಗೆ ಒಪ್ಪಿಸುತ್ತಿದ್ದೇವೆ. ಶೇ.70ರಷ್ಟು ಅಪರಾಧಗಳು ಪತ್ತೆಯಾಗುತ್ತಿವೆ ಎಂದರು.

ಶಾಲಾ ಬಸ್‌ಗೆ 17 ಸಾವಿರ ದಂಡ

ಮಿರರ್ ಇಲ್ಲದೇ ಇರುವಂತಹ ಸಣ್ಣಪುಟ್ಟ ಪ್ರಕರಣಗಳ ಬಗ್ಗೆ ಮೃದು ಧೋರಣೆ ಅನುಸರಿಸಲಾಗುತ್ತಿದೆ. ಈಗಾಗಲೇ ಓಲಾ ಕ್ಯಾಬ್ ಅಸೋಸಿಯೇಷನ್, ಆಟೋ ಚಾಲಕರ ಸಂಘ, ಶಾಲಾ ಬಸ್‌ಗಳ ಚಾಲಕರು ಮತ್ತು ಮಾಲಕರ ಸಂಘದೊಂದಿಗೆ ಚರ್ಚೆ ಮಾಡಿ ತಿಳುವಳಿಕೆ ಮೂಡಿಸಲಾಗಿದೆ. ನಿನ್ನೆ ಒಂದೇ ದಿನ ಶಾಲಾ ಬಸ್ ಒಂದಕ್ಕೆ 17 ಸಾವಿರ ದಂಡ ವಿಧಿಸಲಾಗಿದೆ. ಕಾನೂನನ್ನು ಅತ್ಯಂತ ನಿರ್ಲಕ್ಷದಿಂದ ಕಾಣುವ ಮೂಲಕ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದನ್ನು ತಡೆಗಟ್ಟಲು ನಾವು ದಿಟ್ಟ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಭಾಸ್ಕರ್‌ ರಾವ್ ವಿವರಿಸಿದರು.

ಕೇಂದ್ರ ಸರಕಾರದ ಡಿಜಿಟಲ್ ಲಾಕರ್ ಆಪ್ಲಿಕೇಷನ್‌ನಲ್ಲಿ ಸಂಗ್ರಹಿಸಿಕೊಂಡ ದಾಖಲಾತಿಗಳನ್ನು ಸಂಚಾರಿ ಪೊಲೀಸರ ತಪಾಸಣೆ ವೇಳೆ ತೋರಿಸಿದರೆ ಅವುಗಳನ್ನು ಮಾನ್ಯ ಮಾಡಲಾಗುತ್ತದೆ.

-ಭಾಸ್ಕರ್‌ ರಾವ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News