ಒಕ್ಕಲಿಗರ ಪ್ರತಿಭಟನೆ: ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ- ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು, ಸೆ.11: ಜಾರಿ ನಿರ್ದೇಶನಾಲಯ(ಈ.ಡಿ.)ದ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರನ್ನು ಬಂಧಿಸಿರುವುದನ್ನು ಖಂಡಿಸಿ ಒಕ್ಕಲಿಗರ ಸಂಘ, ಸಂಸ್ಥೆಗಳು ನಡೆಸಿದ ಬಹೃತ್ ಪ್ರತಿಭಟನೆಯಿಂದಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಆಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನಾ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ. ನಗರದ ಯಾವುದೇ ಭಾಗದಲ್ಲಿ ಅಹಿತಕರ ಘಟನೆಗಳು ನಡೆದಿರುವ ಕುರಿತು ವರದಿಯಾಗಿಲ್ಲ ಎಂದರು.
ಪ್ರತಿಭಟನೆಗೆ ಕರೆ ಕೊಟ್ಟವರು ಶಾಂತಿ ಕಾಪಾಡಿದ್ದಾರೆ. ಅದಕ್ಕಾಗಿ ಅವರಿಗೆಲ್ಲ ಧನ್ಯವಾದಗಳನ್ನು ತಿಳಿಸುತ್ತೇನೆ. ನಗರದ ಪೊಲೀಸರು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ಶಾಂತಿಯುತವಾಗಿ ನಡೆಯುವಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದರು ಎಂದು ಅವರು ಹೇಳಿದರು.
ಜಯನಗರದ ಅಶೋಕ ಪಿಲ್ಲರ್ ಬಳಿ ಬಿಎಂಟಿಸಿ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವರು ಅಂತಹ ಯಾವುದೇ ಘಟನೆ ನಡೆದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿಜೆಪಿಯವರು ಒಕ್ಕಲಿಗ ನಾಯಕರನ್ನು ಗುರಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಮಾಡಿರುವ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳುವಷ್ಟು ಎಲ್ಲ ಸಮುದಾಯಗಳು ಪ್ರಬುದ್ಧವಾಗಿವೆ. ಯಾರನ್ನೂ ತಪ್ಪು ದಾರಿಗೆ ಎಳೆಯಲು ಸಾಧ್ಯವಿಲ್ಲ ಎಂದರು.
ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಯಾವ ಸಮುದಾಯವನ್ನು ಯಾರ ಮೇಲೂ ಸುಲಭವಾಗಿ ಎತ್ತಿ ಕಟ್ಟಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ವಿಚಾರಗಳನ್ನು ವಿಮರ್ಶಿಸುವಷ್ಟು ಪ್ರೌಢಿಮೆ ಇಂದು ಎಲ್ಲ ಸಮುದಾಯಗಳಲ್ಲೂ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ನೂತನ ಮೋಟಾರು ಕಾಯ್ದೆ ಜಾರಿಯಿಂದಾಗಿ ಸಂಚಾರ ನಿಯಮಗಳ ಉಲ್ಲಂಘನೆಗೆ ವಿಧಿಸುತ್ತಿರುವ ಭಾರಿ ಪ್ರಮಾಣದ ದಂಡವನ್ನು ಗುಜರಾತ್‌ನಲ್ಲಿ ಇಳಿಕೆ ಮಾಡಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ದಂಡದ ಪ್ರಮಾಣ ಇಳಿಸಬೇಕೆಂಬ ವಿಚಾರ ಮುಖ್ಯಮಂತ್ರಿ ಗಮನದಲ್ಲಿದೆ ಎಂದು ಅವರು ತಿಳಿಸಿದರು.
ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಭಾರಿ ಪ್ರಮಾಣದ ದಂಡವನ್ನು ಇಳಿಸಬೇಕೆ, ಬೇಡವೇ ಎಂಬುದರ ಕುರಿತು ಮುಖ್ಯಮಂತ್ರಿ ಸ್ಪಷ್ಟne ನೀಡಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕಳೆದ ಬಾರಿ ಹೊಸದಿಲ್ಲಿಗೆ ಹೋಗಿದ್ದಾಗ ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಿ ಮಹಾದಾಯಿ ಜಲ ವಿವಾದ ಇತ್ಯರ್ಥ ಸಂಬಂಧ ಮನವಿ ಮಾಡಲಾಗಿತ್ತು. ಅವರೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವುದಾಗಿ ತಿಳಿಸಿದ್ದರು. ಆದುದರಿಂದ, ಈ ಬಗ್ಗೆ ಗೋವಾ ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಮುನ್ನ ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಬೇಕಿದೆ ಎಂದು ಅವರು ಹೇಳಿದರು.
ನಾನು ಗೋವಾ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಮಹಾರಾಷ್ಟ್ರ ಹಾಗೂ ಗೋವಾ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ. ಈಗಿರುವ ವ್ಯವಸ್ಥೆಯಲ್ಲಿ ಸ್ವಲ್ಪ ಹೊಸದರ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.