ಸೆ.12ರಿಂದ ‘ಮೈನಿಂಗ್ ಮಜ್ಮಾ’ ಅಂತರ್‌ರಾಷ್ಟ್ರೀಯ ಸಮಾವೇಶ: ಫಿಮಿ ಅಧ್ಯಕ್ಷ ಸುನೀಲ್ ದುಗ್ಗಲ್

Update: 2019-09-11 15:20 GMT

ಬೆಂಗಳೂರು, ಸೆ.11: ಗಣಿಗಾರಿಕೆಗೆ ಸಂಬಂಧಿಸಿದಂತೆ ಪರಿಶೋಧನೆ, ವ್ಯಾಪಾರ ಪ್ರದರ್ಶನವನ್ನು ಒಳಗೊಂಡ ಮೂರು ದಿನಗಳ(ಸೆ.12-14ರವರೆಗೆ) ‘ಮೈನಿಂಗ್ ಮಜ್ಮಾ’ ಅಂತರ್‌ರಾಷ್ಟ್ರೀಯ ಸಮಾವೇಶವನ್ನು ಬೆಂಗಳೂರು ಅಂತರ್‌ರಾಷ್ಟ್ರೀಯ ಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ ಆಯೋಜಿಸಲಾಗಿದೆ ಎಂದು ಫೆಡರೇಷನ್ ಆಫ್ ಇಂಡಿಯನ್ ಮಿನರಲ್ ಇಂಡಸ್ಟ್ರೀಸ್ ಅಧ್ಯಕ್ಷ ಸುನೀಲ್ ದುಗ್ಗಲ್ ತಿಳಿಸಿದರು.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖನಿಜ ಸಮೃದ್ಧ ರಾಷ್ಟ್ರಗಳಾದ ಕೆನಡಾ ಮತ್ತು ಇತರೆ ದೇಶಗಳು ಸಮಾವೇಶದಲ್ಲಿ ಮತ್ತು ಟ್ರೇಡ್ ಶೋನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ. ಇದಲ್ಲದೆ, ಪರಿಶೋಧನೆ, ಗಣಿಗಾರಿಕೆ ಕಂಪೆನಿಗಳು, ಸಲಕರಣೆಗಳ ಪೂರೈಕೆದಾರರು, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಸೇವಾ ಪೂರೈಕೆದಾರರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ನೀತಿ ತಯಾರಕರು, ತಂತ್ರಜ್ಞರು, ಪರಿಶೋಧನಾ ಕಂಪೆನಿಗಳು, ಗಣಿಗಾರಿಕೆ ವೃತ್ತಿಪರರು, ಸಲಕರಣೆಗಳ ಪೂರೈಕೆದಾರರು, ಶಿಕ್ಷಣ ತಜ್ಞರು ಮತ್ತು ನಾಗರಿಕ ಸಮಾಜಗಳು ಆಯಾ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಹಂಚಿಕೊಳ್ಳಲು ಈ ಸಮಾವೇಶ ಒಂದು ವಿಶಿಷ್ಟ ವೇದಿಕೆಯನ್ನು ಒದಗಿಸುತ್ತದೆ ಎಂದು ಸುನೀಲ್ ದುಗ್ಗಲ್ ಹೇಳಿದರು.

ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವಲ್ಲಿ ಮತ್ತು ಅದರ ಅಗತ್ಯವಿರುವ ಉದ್ಯೋಗ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಗಣಿಗಾರಿಕೆ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಆದರೂ, ಗಣಿಗಾರಿಕೆ ಕ್ಷೇತ್ರದ ಪುನರುಜ್ಜೀವನ ಮತ್ತು ಬೆಳವಣಿಗೆಯ ಅಪೇಕ್ಷಿತ ಉದ್ದೇಶವನ್ನು ಸಾಧಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸಲಾಗುತ್ತಿದೆ ಎಂದು ಅವರು ಹೇಳಿದರು.

ದೇಶದ ಜಿಡಿಪಿಗೆ ಖನಿಜ ಕ್ಷೇತ್ರದ ಕೊಡುಗೆ ತೀರಾ ಕಡಿವೆು ಇದೆ. 2017-18ರಲ್ಲಿ ಶೇ.1.53ರಷ್ಟಿತ್ತು. ಆದರೆ, ಖನಿಜ ಸಂಪನ್ಮೂಲ ಸಮೃದ್ಧ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯದ ಖನಿಜ ವಲಯದ ಕೊಡುಗೆಗಳು ತಮ್ಮ ದೇಶದ ಜಿಡಿಪಿಗೆ ಶೇ.7 ರಿಂದ 7.5ರಷ್ಟಿದೆ ಎಂದು ಸುನೀಲ್ ದುಗ್ಗಲ್ ತಿಳಿಸಿದರು.

ನಮ್ಮ ದೇಶದಲ್ಲಿ ಪರಿಶೋಧನಾ ಚಟುವಟಿಕೆಗಳು ಮುಖ್ಯವಾಗಿ ಸರಕಾರಿ ವಲಯದ ಸಂಸ್ಥೆಗಳಾದ ಜಿಎಸ್‌ಐ, ಎಂಇಸಿಎಲ್, ಡಿಎಂಜಿಗಳು ಮತ್ತು ಕೆಲವು ನಾಮ ನಿರ್ದೇಶಿತ ಸಾರ್ವಜನಿಕ ವಲಯದ ಕಂಪೆನಿಗಳಿಗೆ ಸೀಮಿತವಾಗಿವೆ ಎಂದು ಅವರು ಹೇಳಿದರು.

ಅಸಮರ್ಪಕ ಪರಿಶೋಧನೆ ಮತ್ತು ನಂತರದ ಖನಿಜ ಸಂಪನ್ಮೂಲಗಳ ಬಳಕೆಯಿಂದಾಗಿ, ದೇಶವು ಖನಿಜಗಳ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದರಿಂದಾಗಿ, ಪ್ರಮುಖ ಖನಿಜಗಳ ದೇಶಿಯ ಉತ್ಪಾದನೆಯ ವೌಲ್ಯಕ್ಕಿಂತ ಏಳುಪಟ್ಟು ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಶೇ.100ರಷ್ಟು ಎಫ್‌ಡಿಐಗೆ ಅನುಮತಿ ನೀಡುವ ಮೂಲಕ ಕಲ್ಲಿದ್ದಲು ಕ್ಷೇತ್ರವನ್ನು ಅನಿಯಂತ್ರಣಗೊಳಿಸಲು ಕಲ್ಲಿದ್ದಲು ಸಚಿವಾಲಯ ಕೈಗೊಂಡ ಉಪಕ್ರಮ ಸ್ವಾಗತಾರ್ಹ. ವಾಣಿಜ್ಯ ಗಣಿಗಾರಿಕೆಗಾಗಿ ಖಾಸಗಿ ವಲಯಕ್ಕೆ ಕಲ್ಲಿದ್ದಲು ಘಟಕಗಳನ್ನು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ನಾವು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಫಿಮಿ ಉಪಾಧ್ಯಕ್ಷ ಆರ್.ಎಲ್.ಮೊಹಂತಿ, ಮಹಾ ಪ್ರಧಾನ ಕಾರ್ಯದರ್ಶಿ ಆರ್.ಕೆ.ಶರ್ಮಾ, ಪದಾಧಿಕಾರಿಗಳಾದ ಎಚ್.ಇಕ್ಬಾಲ್, ಎಚ್.ನೂರ್ ಅಹ್ಮದ್, ಶಾಂತೇಶ್ ಗುರೆಡ್ಡಿ ಉಪಸ್ಥಿತರಿದ್ದರು.

ಸುಪ್ರೀಂಕೋರ್ಟ್ 204 ಕಲ್ಲಿದ್ದಲು ಘಟಕಗಳನ್ನು ರದ್ದುಪಡಿಸಿತ್ತು. ಈ ಪೈಕಿ 84 ಘಟಕಗಳನ್ನು ಮರು ಹರಾಜು(25 ಖಾಸಗಿ ವಲಯ, 59 ಸಾರ್ವಜನಿಕ ವಲಯ) ಹಾಕಲಾಯಿತು. ಮರು ಹರಾಜು ಆದ ಘಟಕಗಳ ಪೈಕಿ 6 ಘಟಕಗಳನ್ನು ಪುನಃ ರದ್ದುಗೊಳಿಸಲಾಯಿತು. 8 ಘಟಕಗಳು ಅಭಿವೃದ್ಧಿ ಹೊಂದುತ್ತಿವೆ. 13 ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆಯಾಗುತ್ತಿದೆ.

-ಸುನೀಲ್ ದುಗ್ಗಲ್, ಫಿಮಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News