ಮಧ್ಯಸ್ಥಿಕಾ ಕೇಂದ್ರದಲ್ಲಿ ಮಕ್ಕಳ ಭೇಟಿ ಕೊಠಡಿ ಉದ್ಘಾಟಿಸಿದ ಸಿಜೆ ಎ.ಎಸ್.ಓಕಾ
ಬೆಂಗಳೂರು, ಸೆ.11: ಹೈಕೋರ್ಟ್‌ನ ಅತ್ಯುತ್ತಮ ಉಪಕ್ರಮ ಎನಿಸಿರುವ ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಮಕ್ಕಳ ಭೇಟಿ ಕೊಠಡಿಯನ್ನು ಹೈಕೋರ್ಟ್ ಮುಖ್ಯ ನ್ಯಾ.ಎ.ಎಸ್.ಓಕಾ ಅವರು ಬುಧವಾರ ಉದ್ಘಾಟಿಸಿದರು.
ನಗರದ ಎಚ್.ಸಿದ್ಧಯ್ಯ ರಸ್ತೆಯಲ್ಲಿರುವ ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ನಾಲ್ಕನೆ ಮಹಡಿಯಲ್ಲಿರುವ ಈ ಮಕ್ಕಳ ಭೇಟಿ ಕೊಠಡಿಯನ್ನು ಕಂಡಾಗ ಪೂರ್ವ ಪ್ರಾಥಮಿಕ ಶಾಲೆ ನೆನಪಿಗೆ ಬರುತ್ತದೆ. ವಿಶಾಲ ಕೊಠಡಿಯಲ್ಲಿನ ಎಲ್ಲ ಗೋಡೆಗಳಲ್ಲಿ ಹೂವು, ಹಣ್ಣು ಹಾಗೂ ಪ್ರಾಣಿಗಳ ಚಿತ್ರಗಳು, ಭಾರತೀಯ ಸಂಸ್ಕೃತಿಯ ಬಿಂಬಿಸುವ ಬಾಲ ಕೃಷ್ಣ, ಡಿಸ್ನಿ ಲ್ಯಾಂಡ್‌ನಲ್ಲಿ ಕಾಣಬಹುದಾದ ಅಳಿಲಿನಿಂದ ಜಿರಾಫೆಯವರೆಗಿನ ವಿವಿಧ ಭಂಗಿಯ ವ್ಯಂಗ್ಯ ಮತ್ತು ರೇಖಾ ಚಿತ್ರಗಳ ಚಿತ್ತಾಕರ್ಷಕ ಚಿತ್ರಗಳು, ಎಲ್ಲಕ್ಕೂ ಮಿಗಿಲಾಗಿ ಮಕ್ಕಳ ಪುಸ್ತಿಕೆಗಳು ಹಾಗೂ ಆಟಿಕೆಗಳಿವೆ. ಆರು ವರ್ಷದೊಳಗಿನ ಮಕ್ಕಳನ್ನು ಭೇಟಿ ಮಾಡಲು ಇದು ಅತ್ಯುತ್ತಮ ವೇದಿಕೆಯಾಗಿದೆ. ತನ್ನ ವಿಶೇಷ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ಈ ಮಕ್ಕಳ ಭೇಟಿ ಕೊಠಡಿಯನ್ನು ಬೆಂಗಳೂರು ಮಧ್ಯಸ್ಥಿಕಾ ಕೇಂದ್ರವು ಸದ್ಯದಲ್ಲಿಯೇ ಕೌಟುಂಬಿಕ ನ್ಯಾಯಾಲಯಕ್ಕೆ ಹಸ್ತಾಂತರಿಸಲಿದೆ.
ಏನಿದು ಮಕ್ಕಳ ಭೇಟಿ ಕೊಠಡಿ:
ಗಂಡ ಅಥವಾ ಹೆಂಡತಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದಾಗ ಅಥವಾ ವಿಚ್ಛೇಧನಕ್ಕೆ ಒಳಪಟ್ಟಾಗ ಆ ದಂಪತಿಯ ಮಗು ಅಥವಾ ಮಕ್ಕಳನ್ನು ನ್ಯಾಯಾಲಯವು ಪತಿ ಅಥವಾ ಪತ್ನಿಯ ವಶಕ್ಕೆ ನೀಡುತ್ತದೆ. ತಾಯಿಯ ವಶದಲ್ಲಿರುವ ಮಗುವನ್ನು ನೋಡಲು ತಂದೆಗೆ ಅಥವಾ ತಂದೆಯ ವಶದಲ್ಲಿರುವ ಮಗುವನ್ನು ಕಾಣಲು ತಾಯಿಗೆ ಅವಕಾಶ ಕಲ್ಪಿಸುವ ವಿಶೇಷ ತಾಣವೇ ಈ ಮಕ್ಕಳ ಭೇಟಿ ಕೊಠಡಿಯಾಗಿದೆ.
ಭೇಟಿ ಹೇಗೆ: ಪತ್ನಿಯ ವಶದಲ್ಲಿರುವ ತನ್ನ ಮಗುವನ್ನು ಪತಿ ಅಥವಾ ಪತಿಯ ವಶದಲ್ಲಿರುವ ಮಗುವನ್ನು ಪತ್ನಿ ನೋಡಲು ಇಚ್ಛಿಸಿದಲ್ಲಿ ವಿಶೇಷ ಪ್ರಕರಣಗಳಲ್ಲಿ ತಮ್ಮ ಮೊಮ್ಮಗನೋ ಅಥವಾ ಮೊಮ್ಮಗಳನ್ನು ಕಾಣಲು ಬಯಸುವ ಅಜ್ಜ-ಅಜ್ಜಿ ಮೊದಲು ನ್ಯಾಯಾಲಯದ ಲಿಖಿತ ಅನುಮತಿ ಪಡೆಯಬೇಕಾಗುತ್ತದೆ. ಭೇಟಿಯ ದಿನಾಂಕ, ಸಮಯ, ಕಾಲಾವಧಿ ಮತ್ತು ಸ್ಥಳದ ಉಲ್ಲೇಖವಿದ್ದಲ್ಲಿ ಮಾತ್ರ ಓರ್ವ ಪಾಲಕರ ವಶದಲ್ಲಿರುವ ಮಗುವನ್ನು ಮತ್ತೋರ್ವ ಪಾಲಕರಿಗೆ ಅಥವಾ ಆ ಪಾಲಕರ ಪೋಷಕರಿಗೆ ಮಕ್ಕಳ ಭೇಟಿ ಕೊಠಡಿ ಕಾಣಲು ಅವಕಾಶ ಕಲ್ಪಿಸಲಾಗುವುದು.
ಬೆಂಗಳೂರು ನಗರ ಆಡಳಿತಾತ್ಮಕ ಹಾಗೂ ಕೌಟುಂಬಿಕ ನ್ಯಾಯಾಲಯಗಳ ನ್ಯಾಯಾಧೀಶರೂ ಆದ ಹೈಕೋರ್ಟ್ ನ್ಯಾ. ಎಲ್.ನಾರಾಯಣ ಸ್ವಾಮಿ ಸೇರಿ ಮತ್ತಿತರರು ಹಾಜರಿದ್ದರು.