ವಿದ್ಯಾರ್ಥಿಗಳು ಸೃಜನಾತ್ಮಕ ಅರಿವು ಬೆಳೆಸಿಕೊಳ್ಳಬೇಕು: ಭೂವಿಜ್ಞಾನಿ ಅನಂತರಾಮನ್

Update: 2019-09-12 17:20 GMT

ಬೆಂಗಳೂರು, ಸೆ.12: ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸೃಜನಾತ್ಮಕ ಅರಿವು ಬೆಳೆಸಿಕೊಳ್ಳಬೇಕು ಎಂದು ಎಂದು ಭೂವಿಜ್ಞಾನಿ ಅನಂತರಾಮನ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸೆಲ್ಕೋ ಫೌಂಡೇಶನ್ ಮತ್ತು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ನಡೆದ ‘ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸುಸ್ಥಿರ ಶಕ್ತಿಯ ಪಾತ್ರ ಮತ್ತು ಸವಾಲುಗಳು’ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಜ್ಞಾನ ಸಂಪತ್ತನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಭಾರತದಲ್ಲಿ ಇನ್ನೂ ನೂರು ವರ್ಷಕ್ಕಾಗುವಷ್ಟು ಕಲ್ಲಿದ್ದಲು ನಿಕ್ಷೇಪಗಳಿವೆ. ಕರ್ನಾಟಕದ ರಾಯಚೂರಿನಲ್ಲಿ ಥರ್ಮಲ್ ಪ್ಲಾಂಟ್‌ನಲ್ಲಿ ದಿನಕ್ಕೆ 15 ಸಾವಿರ ಟನ್ ಕಲ್ಲಿದ್ದಲು ಬಳಕೆಯಾಗುತ್ತಿದೆ. ಕರ್ನಾಟಕಕ್ಕೆ ಥರ್ಮಲ್ ಪವರ್ ಪ್ಲಾಂಟ್‌ನಿಂದ ಶೇ.60ರಷ್ಟು ಭಾಗ ಶಕ್ತಿ ಪೂರೈಕೆಯಾಗುತ್ತಿದೆ. ನಮ್ಮಲ್ಲಿನ ಕಲ್ಲಿದ್ದಲು ಕಳಪೆ ಮಟ್ಟದ್ದಾಗಿದ್ದು, ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಹೆಚ್ಚಿದೆ ಎಂದು ಅವರು ಹೇಳಿದರು.

ಭಾರತದಲ್ಲಿ 103 ಥರ್ಮಲ್ ಸ್ಥಾವರಗಳಿವೆ. ವರ್ಷಕ್ಕೆ 565 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗುತ್ತಿದೆ. ಹೀಗೆ ದೊಡ್ಡಮಟ್ಟದಲ್ಲಿ ಸಮಸ್ಯೆ ಇದ್ದಾಗ ಪರ್ಯಾಯ ವ್ಯವಸ್ಥೆಗೆ ನಾವು ತೆರೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದರು.

ಈ ಹಿಂದಿನ ಸರಕಾರ ಸೋಲಾರ್ ಶಕ್ತಿ ಬಳಕೆಗೆ ಉತ್ತೇಜನ ನೀಡಿತ್ತು. ಆದರೆ, ಇಂದಿನ ಸರಕಾರ ಕೆಲ ನಿಬಂಧನೆಗಳಿವೆ ಎಂದು ಯೋಜನೆಗಳನ್ನು ಬದಲಾಯಿಸುತ್ತಿರುವುದು ಸರಿಯಲ್ಲ. ಭವಿಷ್ಯದ ಕ್ಲೀನ್ ಎನರ್ಜಿ ಸೋಲಾರ್ ಶಕ್ತಿಯಾಗಿದೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆ ಕುರಿತಂತೆ ಸರಕಾರಗಳು ಜನಜಾಗೃತಿ ಮೂಡಿಸಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರಾದ ನಾಗೇಶ್ ಹೆಗಡೆ ‘ಮಾಧ್ಯಮದಲ್ಲಿ ಸುಸ್ಥಿರ ಶಕ್ತಿಯ ಪಾತ್ರ’ ವಿಚಾರ ಕುರಿತು ಪ್ರಾತ್ಯಕ್ಷಿತೆ ನೀಡಿದರು. ಈ ವೇಳೆ ಭಾರತೀಯ ವಿದ್ಯಾಭವನ ನಿರ್ದೇಶಕ ಎಚ್.ಎನ್.ಸುರೇಶ್, ಮಾಧ್ಯಮ ಭಾರತಿ ನಿರ್ದೇಶಕ ಎನ್.ಎಸ್.ಶ್ರೀಧರ ಮೂರ್ತಿ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News