ಸ್ವಸ್ಥ ಸಮಾಜ ನಿರ್ಮಾಣಕ್ಕೆ 'ಪೋಷಣ್ ಅಭಿಯಾನ' ಸಹಕಾರಿ: ಕೇಂದ್ರ ಸಚಿವೆ ಸ್ಮತಿ ಇರಾನಿ
ಬೆಂಗಳೂರು, ಸೆ.13: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜವಳಿ ಸಚಿವೆ ಸ್ಮತಿ ಇರಾನಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಕೇಂದ್ರ ಸರಕಾರದ ಪೋಷಣ್ ಅಭಿಯಾನ ಯೋಜನೆ ಪ್ರಗತಿ ಬಗ್ಗೆ ಚರ್ಚಿಸಿದರು.
ರಾಜ್ಯದಲ್ಲಿ ತಾಯಿ ಮತ್ತು ಶಿಶು ಆರೋಗ್ಯ ವೃದ್ಧಿಸುವ ಮೂಲಕ ಶಿಶು ಮರಣ ಪ್ರಮಾಣ ಹಾಗೂ ಗರ್ಭಿಣಿ ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವುದಲ್ಲದೇ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಕೊಡುಗೆ ನೀಡಲು ಪೋಷಣ್ ಅಭಿಯಾನ ಯೋಜನೆ ಸಹಕಾರಿಯಾಗಿದೆ. ಆದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಒಗ್ಗೂಡಿ ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸಲು ಸೂಚನೆ ನೀಡುವಂತೆ ಮುಖ್ಯಮಂತ್ರಿಗೆ ಸ್ಮತಿ ಇರಾನಿ ಮನವಿ ಮಾಡಿದರು.
ಕರ್ನಾಟಕದಲ್ಲಿ ಪ್ರತಿ ಒಂದು ಸಾವಿರ ಶಿಶುಗಳಿಗೆ ಮರಣವನ್ನಪ್ಪುವ ಪ್ರಮಾಣ 50 ರಿಂದ 25ಕ್ಕೆ ಇಳಿದಿದೆ. ಇದನ್ನು ಮತ್ತಷ್ಟು ಸುಧಾರಿಸುವತ್ತ ಕ್ರಮ ಕೈಗೊಳ್ಳಬೇಕಾಗಿದ್ದು, ತಾಯಿ ಮತ್ತು ಶಿಶುಗಳ ಆರೋಗ್ಯ ಸುಧಾರಣೆಗೆ ಪೂರಕವಾದ ಪೋಷಣ್ ಅಭಿಯಾನ, ಮಾತೃಪೂರ್ಣ ಮೊದಲಾದ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕೆ ರಾಜ್ಯ ಸರಕಾರ ಎಲ್ಲ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.