ಓ ಮೆಣಸೇ…
ಜನ ಸಾಮಾನ್ಯರಿಗೆ ಉತ್ತಮ ಸೇವೆ ನೀಡಲು ತಾಲೂಕು ಕಚೇರಿಯನ್ನೇ ಹಳ್ಳಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ - ಆರ್. ಅಶೋಕ್, ಸಚಿವ
ತಾಲೂಕು ಕಚೇರಿ ಸಿಬ್ಬಂದಿಯೇ ಹಳ್ಳಿಗಳಿಗೆ ಬಂದು ಲಂಚ ವಸೂಲಿ ಮಾಡಿ ಹೋಗುತ್ತಾರೆ ಅಂದಾಯಿತು.
---------------------
ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು - ರಮಾನಾಥ ರೈ, ಮಾಜಿ ಸಚಿವ
ಇಬ್ಬರೂ ತಮ್ಮ ತಮ್ಮ ದೇಶವನ್ನು ನಾಶ ಮಾಡಲು ಪೈಪೋಟಿ ನಡೆಸುತ್ತಿದ್ದಾರೆ.
---------------------
ಡಿಕೆಶಿ ಬಂಧನದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೈವಾಡವಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಅಂದರೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ನಿಯಂತ್ರಿಸುವಷ್ಟು ಶಕ್ತಿ ಸಿದ್ದರಾಮಯ್ಯರಿಗಿದೆ ಎಂದಾಯಿತು.
---------------------
ನವ ಭಾರತದ ಅಗತ್ಯಗಳನ್ನು ಈಡೇರಿಸಲು ಸರಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳು ಸಾಕು - ರಾಜೀವ್‌ಕುಮಾರ್, ಹಣಕಾಸು ಕಾರ್ಯದರ್ಶಿ
ಬಹುಶಃ ನವಭಾರತ ಅಂಬಾನಿ, ಅದಾನಿ ಕುಟುಂಬವನ್ನಷ್ಟೇ ಒಳಗೊಂಡಿರಬೇಕು.
---------------------
ಸಂಸ್ಕೃತಿ ಮತ್ತು ವ್ಯಕ್ತಿತ್ವ ಎದ್ದು ಕಾಣುವುದೇ ಆತಿಥ್ಯದಿಂದ - ಡಾ.ಸಿ. ಅಶ್ವತ್ಥ್ ನಾರಾಯಣ, ಉಪ ಮುಖ್ಯಮಂತ್ರಿ
ಹೌದು, ತಮ್ಮ ರೆಸಾರ್ಟ್ ಆತಿಥ್ಯವನ್ನು ಈಗಲೂ ಅನರ್ಹ ಶಾಸಕರು ಸ್ಮರಿಸುತ್ತಿದ್ದಾರೆ.
---------------------
ಕೆಲವರ ಪ್ರಶ್ನೆಗಳಿಗೆ ಉತ್ತರಿಸದಿರಲು ನಿರ್ಧರಿಸಿದ್ದೇನೆ - ಯಡಿಯೂರಪ್ಪ, ಮುಖ್ಯಮಂತ್ರಿ
ತಮ್ಮ ನಿವೃತ್ತಿಯ ಕುರಿತಂತೆ ವರಿಷ್ಠರು ಕೇಳುತ್ತಿರುವ ಪ್ರಶ್ನೆಗಳಿರಬೇಕು.
---------------------
ರಾಜ್ಯದಲ್ಲಿ ಮತ್ತೆರಡು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ಕುರಿತು ನನಗೇನೂ ಗೊತ್ತಿಲ್ಲ - ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ
ಈ ಹುದ್ದೆಗಳಿಂದ ರಾಜ್ಯಕ್ಕಾಗುವ ಪ್ರಯೋಜನದ ಕುರಿತಂತೆ ಏನಾದರೂ ಗೊತ್ತಿದೆಯೆ?
---------------------
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಗೋಮೂತ್ರ ಕುಡಿಯುತ್ತಿದ್ದರು- ಅಶ್ವಿನಿ ಕುಮಾರ್ ಚೌಬೆ, ಕೇಂದ್ರ ಸಚಿವ
ಜನಸಾಮಾನ್ಯರ ರಕ್ತ ಕುಡಿಯುವ ಪ್ರಧಾನಿಗಳೇ ಇದ್ದಾರೆ.
---------------------
ಮೃದು ಹಿಂದುತ್ವ ಎನ್ನುವುದು ಕೋಕ್ ಲೈಟ್, ಪೆಪ್ಸಿಲೈಟ್ ಇದ್ದಂತೆ - ಶಶಿ ತರೂರು, ಕಾಂಗ್ರೆಸ್ ಮುಖಂಡ
ಅದನ್ನು ಕುಡಿದ ಪರಿಣಾಮವಾಗಿಯೇ ಕಾಂಗ್ರೆಸ್‌ಗೆ ಈ ದುಸ್ಥಿತಿ.
---------------------
ಮುಖ್ಯಮಂತ್ರಿ ಯಡಿಯೂರಪ್ಪ ರಾಜಾಹುಲಿ ಅಲ್ಲ, ಹೆಣ್ಣು ಹುಲಿ - ನಾಗನಗೌಡ ಕಂದಕೂರ, ಶಾಸಕ
ಹುಲಿ ಹೆಣ್ಣಾದರೆ ಅದಕ್ಕೆ ವ್ಯಕ್ತಿತ್ವ ಇಲ್ಲ ಎಂದು ಅರ್ಥವೆ?
---------------------
ದೇಶದಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗನಿಗೆ ಉಳಿದು ಕೊಳ್ಳಲು ಅವಕಾಶ ನೀಡುವುದಿಲ್ಲ - ಅಮಿತ್ ಶಾ, ಕೇಂದ್ರ ಸಚಿವ
ಈಗಾಗಲೇ ಆರ್ಯನ್ನರು ವಲಸಿಗರು ಎನ್ನುವುದು ಸಾಬೀತಾಗಿದೆ.
---------------------
ತಾಲಿಬಾನ್ ನಂಬಿಗಸ್ಥ ಪಾಲುದಾರರಲ್ಲ ವೆಂಬುದು ನನಗೆ ಮನದಟ್ಟಾಗಿದೆ.- ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಅಂತೂ ಅದು ಒಂದು ಕಾಲದಲ್ಲಿ ನಿಮ್ಮ ವ್ಯಾಪಾರದ ಪಾಲುದಾರ ಆಗಿತ್ತು ಎಂದಾಯಿತು.
---------------------
ಇವಿಎಂ ವಿರುದ್ಧ ವಿಪಕ್ಷಗಳು ಒಂದಾಗಬೇಕು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಇವಿಎಂನ್ನು ತಿರುಚುವ ಬಗೆ ಹೇಗೆ ಎನ್ನುವುದನ್ನಾದರೂ ತಿಳಿಸಿಕೊಡಿ ಎಂದು ಕೆಲವು ವಿಪಕ್ಷಗಳು ಮೋದಿಯ ಹಿಂದೆ ಬಿದ್ದಿದೆಯಂತೆ.
---------------------
ಫಲಾನುಭವಿಗಳು ಬಯಸುವವರೆಗೂ ಮೀಸಲಾತಿ ಇರಬೇಕು - ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಜಂಟಿ ಪ್ರ. ಕಾರ್ಯದರ್ಶಿ
ಮನು ಮೀಸಲಾತಿಯ ಕುರಿತಂತೆ ಇರಬೇಕು.
---------------------
ಪರಿಷ್ಕೃತ ಸಾರಿಗೆ ನಿಯಮದ ಅನ್ವಯ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ನಾನೂ ಭಾರೀ ಮೊತ್ತದ ದಂಡ ಪಾವತಿಸಿದ್ದೇನೆ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಬಹುಶಃ ಅದನ್ನು ಕಟ್ಟಿದ್ದು ಮಾತ್ರ ಸರಕಾರದ ಖಜಾನೆಯಿಂದ ಇರಬೇಕು.
---------------------
ಶೀಘ್ರದಲ್ಲೇ ಎಚ್.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ - ಎಚ್.ಡಿ. ರೇವಣ್ಣ, ಮಾಜಿ ಸಚಿವ
ಯಾವ ರಾಜ್ಯಕ್ಕೆ?
---------------------
ಕೇಂದ್ರ ಸರಕಾರದ ನಿಲುವುಗಳನ್ನು ವಿರೋಧಿಸಿ ರಾಜೀನಾಮೆ ನೀಡುತ್ತಿರುವ ಅಧಿಕಾರಿಗಳಿಗೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು - ಸುನಿಲ್‌ಕುಮಾರ್, ಶಾಸಕ
ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳ ತನಿಖೆಗೆ ಹೊಸ ತಿರುವು ಸಿಕ್ಕಿದಂತಾಯಿತು.
---------------------
ಕಾರು ಮಾರಾಟ ಇಳಿಕೆಗೆ ಓಲಾ, ಉಬೇರ್ ಕೂಡಾ ಕಾರಣ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಕೊಳ್ಳುವವರೇ ಇಲ್ಲ ಎನ್ನುವ ಕಾರಣಕ್ಕಾಗಿ ದೇಶ ಇನ್ನೂ ಮಾರಾಟ ಆಗದೆ ಉಳಿದಿದೆ.
---------------------
ಹಿಂದೂ ಧರ್ಮ ಉಳಿದರೆ ಮಾತ್ರ ಭಾರತ ಅಖಂಡವಾಗಿ ಉಳಿಯುವುದಕ್ಕೆ ಸಾಧ್ಯ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಬ್ರಾಹ್ಮಣ ಧರ್ಮ ಸ್ವತಂತ್ರವಾದರೆ ಮಾತ್ರ ಹಿಂದೂ ಧರ್ಮ ಉಳಿಯುವುದಕ್ಕೆ ಸಾಧ್ಯವಂತೆ.
---------------------
ನನ್ನನ್ನು ಯಾವುದೇ ಹಗರಣಗಳಲ್ಲಿ ಸಿಲುಕಿಸಲು ಯಾರಿಂದಲೂ ಸಾಧ್ಯವಿಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ನಿಮ್ಮ ಫೋನ್‌ಗಳನ್ನು ಕದ್ದು ಆಲಿಸಲಾಗುತ್ತಿದೆ, ಎಚ್ಚರಿಕೆ ಇರಲಿ.
--------------------
ಸಮಸ್ಯೆಗಳನ್ನು ಕಂಡು ಓಡಬೇಡಿ, ಸಮಸ್ಯೆಗಳನ್ನೇ ಓಡಿಸಿ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ
ಜನರು ಈ ಕರೆಗೆ ಓಗೊಟ್ಟರೆ, ಕಲ್ಲಡ್ಕದ ಸಮಸ್ಯೆ ಸಂಪೂರ್ಣ ಪರಿಹಾರವಾಗುತ್ತದೆ.
---------------------
ವಿಧಾನ ಸಭೆಯ 17 ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ನನ್ನ ಕುಟುಂಬದ ಯಾರೂ ಸ್ಪರ್ಧಿಸುವುದಿಲ್ಲ - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಯಾವ ಸ್ಥಾನಗಳಲ್ಲೂ ಗೆಲ್ಲುವ ಭರವಸೆ ಇಲ್ಲವೇ?
---------------------
ನನಗೆ ಜೆಡಿಎಸ್ ಪಕ್ಷದಲ್ಲಿ ಸಾಕಷ್ಟು ನೋವಾಗಿದೆ. ನನ್ನ ನೋವು ಕಡಿಮೆಯಾಗುವ ತನಕ ನಾನು ಆ ಪಕ್ಷದಲ್ಲಿಯೇ ಇರುತ್ತೇನೆ - ಜಿ.ಟಿ. ದೇವೇಗೌಡ, ಮಾಜಿ ಸಚಿವ
ದೇವೇಗೌಡ ಎನ್ನುವ ಹೆಸರಿದ್ದ ಕಾರಣಕ್ಕೆ ಪಕ್ಷದ ಹೈಕಮಾಂಡ್ ಆಗಲು ಹೋದರೆ ಹೇಗೆ?
---------------------
ದೇಶದ ಪ್ರಜಾಪ್ರಭುತ್ವವು ಗಂಡಾಂತರದಲ್ಲಿದೆ - ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷೆ
ಅದು ದೇಶಕ್ಕೇ ಗೊತ್ತಿದೆ. ಅದನ್ನು ತಡೆಯಲು ತಾವೇನು ಮಾಡುತ್ತಿದ್ದೀರಿ ಹೇಳಿ?
---------------------
ರಾಜ್ಯ ಸರಕಾರದ ಆಡಳಿತದಲ್ಲಿ ಮೂಗು ತೂರಿಸಿಲ್ಲ - ಬಿ.ವೈ. ವಿಜಯೇಂದ್ರ, ಬಿಜೆಪಿ ನಾಯಕ
ಬೇರೇನು ತೂರಿಸಿದ್ದೀರಿ ಅದನ್ನು ಹೇಳಿ.
---------------------