ಮಧ್ಯಂತರ ಚುನಾವಣೆ ಸಾಧ್ಯತೆ, ಯಾರೊಂದಿಗೂ ಮೈತ್ರಿ ಇಲ್ಲ: ದೇವೇಗೌಡ ಸ್ಪಷ್ಟನೆ
ಬೆಂಗಳೂರು, ಸೆ. 16: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆಗಳಿದ್ದು, ಯಾರೊಂದಿಗೂ ಮೈತ್ರಿ ಇಲ್ಲದೆ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷ ತೊರೆಯುವವರ ಬಗ್ಗೆ ನಾನು ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವುದು ನನಗೆ ಗೊತ್ತಿದೆ ಎಂದು ಹೇಳಿದರು.
ಜನವರಿ ಅಥವಾ ಫೆಬ್ರವರಿಯಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಪಕ್ಷವನ್ನು ಸದೃಢಗೊಳಿಸಬೇಕಿದೆ. ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡಲಿದ್ದು, ನಾನೂ ಜಿಲ್ಲಾ ಪ್ರವಾಸ ಕೈಗೊಂಡು ಪಕ್ಷ ಬಲಪಡಿಸುತ್ತೇನೆ ಎಂದು ದೇವೇಗೌಡ ನುಡಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿ ಒಳ್ಳೆಯ ಕೆಲಸ ಮಾಡಿದರೂ ಅವರಿಗೆ ಸಹಕಾರ ಸಿಗಲಿಲ್ಲ. ಇನ್ನು ಮುಂದೆ ಆ ತಪ್ಪುಮಾಡುವುದಿಲ್ಲ. ಎಲ್ಲ ಚುನಾವಣೆಗಳನ್ನು ಸ್ವತಂತ್ರವಾಗಿ ಎದುರಿಸೋಣ. ಸಣ್ಣ- ಪುಟ್ಟ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷ ಸಂಘಟಿಸಿ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಕುಮಾರಸ್ವಾಮಿ ಸಿಎಂ ಆಗಿ ಮಾಡಿರುವ ಒಳ್ಳೆಯ ಕೆಲಸಗಳು ಮತ್ತು ಯೋಜನೆಗಳ ಕುರಿತು ಮನೆ-ಮನೆಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದ ಅವರು, ಪಕ್ಷದಿಂದ ಬೆಳೆದು ಪಕ್ಷದ ವಿರುದ್ಧವೇ ಕೆಲವರು ಮಾತನಾಡುತ್ತಿದ್ದಾರೆ. ಕಾರ್ಯಕರ್ತರನ್ನು ನಂಬಿ ಸಂಘಟನೆ ಮಾಡಿದ್ದೇನೆ. ಯಾರೇ ಪಕ್ಷ ತೊರೆದರೂ ಎದೆಗುಂದುವುದಿಲ್ಲ ಎಂದು ತಿಳಿಸಿದರು.