5ನೇ ಮದುವೆಗೆ ತಯಾರಿ ನಡೆಸಿದ್ದ ವ್ಯಕ್ತಿಯ ಸೆರೆ

Update: 2019-09-19 16:19 GMT

ಬೆಂಗಳೂರು, ಸೆ.19: ಈಗಾಗಲೇ ನಾಲ್ಕು ಮದುವೆಯಾಗಿ ವಂಚಿಸಿದ್ದ ವ್ಯಕ್ತಿಯೋರ್ವ, 5ನೇ ಮದುವೆಗಾಗಿ ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮೈಸೂರಿನ ಲಲಿತಾದ್ರಿಪುರದ ಎನ್.ಆರ್ ಗಣೇಶ್(45) ಬಂಧಿತ ಆರೋಪಿಯಾಗಿದ್ದು, ಉತ್ತರ ವಿಭಾಗದ ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ವಿಕ್ರಂ, ಕಾರ್ತಿಕ್, ಹರೀಶ್ ಇನ್ನಿತರ ಹೆಸರುಗಳಲ್ಲಿ ಮ್ಯಾಟ್ರಿಮೋನಿಯಲ್‌ನಲ್ಲಿ ವಿಧವೆಯರನ್ನು ಗುರಿಯಾಗಿಸಿಕೊಂಡು ನಾಲ್ವರನ್ನು ವಿವಾಹವಾಗಿ ವಂಚಿಸಿ 5ನೇ ಮದುವೆಗೆ ತಯಾರಿ ನಡೆಸಿದ್ದ. ಅಲ್ಲದೆ, ಈತ 10ನೆ ತರಗತಿವರೆಗೆ ಓದಿದ್ದು, ಮೊದಲಿಗೆ ರಾಜಾಜಿನಗರದ ಗಾರ್ಮೆಂಟ್ಸ್ ಉದ್ಯೋಗಿಯನ್ನು ವಿವಾಹವಾಗಿದ್ದು, ನಂತರ ಆಕೆಗೆ ಗೊತ್ತಾಗದಂತೆ 7 ವರ್ಷಗಳ ಹಿಂದೆ ಮಡಿಕೇರಿ ಮೂಲದ ಮಹಿಳೆಯನ್ನು ಮದುವೆ ಮಾಡಿಕೊಂಡು ಮೈಸೂರಿನಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.

ಈ ಇಬ್ಬರಿಗೂ ಗೊತ್ತಾಗದಂತೆ ಮ್ಯಾಟ್ರಿಮೋನಿಯಲ್‌ನಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ವಿಧವೆಯೊಬ್ಬರನ್ನು ಪರಿಚಯ ಮಾಡಿಕೊಂಡು ಕಳೆದ ವರ್ಷ ವಿವಾಹವಾಗಿ ಆಕೆಗೂ ವಿಚ್ಛೇಧನ ನೀಡಿದ್ದಾನೆ. ನಂತರ 2019ರಲ್ಲಿ ಮಗದೊಮ್ಮೆ ಯುವತಿಯೊಬ್ಬಾಕೆಯನ್ನು ವಿವಾಹವಾಗಿದ್ದ ಎಂದು ಹೇಳಲಾಗುತ್ತಿದೆ.

ವಿಚ್ಛೇಧನ ಪಡೆದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಅವರ ತಾಯಿ ಮಹಾಲಕ್ಷ್ಮೀ ಅವರು ನೀಡಿದ್ದ ದೂರಿನ್ವಯ ಆರ್‌ಎಂಸಿ ಯಾರ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News