ದಲಿತೋದ್ಧಾರ ಹಾಗೂ ಸ್ತ್ರೀಯರ ಜವಾಬ್ದಾರಿ

Update: 2019-09-19 18:27 GMT

27ನೇ ಡಿಸೆಂಬರ್ 1927ರಂದು ಮಧ್ಯಾಹ್ನ ಪರಿಷತ್ತನ್ನು ಮುಗಿಸಿ ಪ್ರತಿನಿಧಿಗಳು ಊಟಕ್ಕೆಂದು ಮಂಟಪಕ್ಕೆ ತೆರಳಿದರು ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ವಾಸಿಸಲು ವ್ಯವಸ್ಥೆ ಮಾಡಿದ್ದ ಪರಿಷತ್ತಿನ ಆಫೀಸಿಗೆ ಹೋದರು. ಅವರಲ್ಲಿ ಹೋಗಿ ಕುಳಿತುಕೊಳ್ಳಬೇಕು ಅನ್ನುವಷ್ಟರಲ್ಲಿ ಅವರನ್ನು ಕಾಣಲು ಹೆಂಗಸರದಂಡೇ ಬಂತು. ಈ ಹೆಂಗಸರು ಬಹಳ ದೂರದಿಂದ ಒಂಬತ್ತು ಹತ್ತು ಮೈಲಿಗಳಷ್ಟು ದೂರದಿಂದ ಡಾ. ಅಂಬೇಡ್ಕರ್ ಅವರನ್ನು ಕಾಣಲೆಂದೇ ಬಂದಿದ್ದರು. ಡಾ. ಅಂಬೇಡ್ಕರ್ ಅವರನ್ನು ಕಾಣುವ ಬಯಕೆ ಅವರಿಗೆಷ್ಟಿತ್ತೆಂದರೆ ಅವರಲ್ಲಿಯ ಕೆಲವು ಹೆಂಗಸರು ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬಂದಿದ್ದರು. ಸಾಯಂಕಾಲವಂತೂ ಅಲ್ಲಿ ಸಾಕಷ್ಟು ಹೆಂಗಸರು ಸೇರಿದರು.

ಅವರಲ್ಲೊಬ್ಬ ಮುದುಕಿ ಅಂಬೇಡ್ಕರ್‌ರನ್ನು ನೋಡಿ ಅಳಲಾರಂಭಿಸಿದ್ದನ್ನು ನೋಡಿದವರಿಗೆಲ್ಲ ಇವಳಿಗ್ಯಾರೋ ಮೇಲ್ಜಾತಿಯ ಗೂಂಡಾ ಹೊಡೆದ್ದಾನೆ ಅನಿಸುತ್ತಿತ್ತು. ‘‘ನೀನ್ಯಾಕೆ ಅಳುತ್ತಿದ್ದಿ? ನಿನಗ್ಯಾರಾದರೂ ಹೊಡೆದರೆ?’’ ಎಂದು ನೆರೆದ ಜನ ಅವಳನ್ನು ಕೇಳಿದ್ದಕ್ಕೆ ಆಕೆ, ‘‘ನನಗ್ಯಾರೂ ಹೊಡೆಯಲಿಲ್ಲ, ಆದರೆ ದಾರಿಯಲ್ಲಿ ಬರುವಾಗ ಕೆಲವು ದುಷ್ಟರು ನಿಮ್ಮ ರಾಜನ ಫಜೀತಿಯಾಯಿತು ಅಂದರು’’ ಎಂದಾಕೆ ಹೇಳಿದಾಗ ಆಕೆಯ ಅಳುವಿನ ಹಿಂದಿನ ಕಾರಣ ಹಾಗೂ ಇಷ್ಟೊಂದು ಹೆಂಗಸರು ಒಟ್ಟಿಗೆ ಅಂಬೇಡ್ಕರ್ ಅವರನ್ನು ಕಾಣಲು ಬಂದಿರುವುದಕ್ಕೆ ಕಾರಣ ಗೊತ್ತಾಯಿತು. ಎಷ್ಟು ಪ್ರೀತಿಯಿಂದ ಇಷ್ಟೊಂದು ಹೆಂಗಸರು ತನ್ನನ್ನು ಕಾಣಲು ಬಂದಿದ್ದಾರೆ ಅನ್ನುವುದರ ಲಾಭ ಪಡೆದು ಡಾ.ಅಂಬೇಡ್ಕರ್ ಅವರನ್ನೆಲ್ಲ ಕೂರಿಸಿ ‘‘ನಿಮಗೆ ಕೆಲವು ಸಮಾಜ ಹಿತದ ಮಾತುಗಳನ್ನು ನಾನು ಹೇಳಬಯಸುತ್ತೇನೆ ಹಾಗಾಗಿ ನೀವು ಸಾಯಂಕಾಲ ಪರಿಷತ್ತಿಗೆ ಬನ್ನಿರೆಂದು ವಿನಂತಿಸಿಕೊಳ್ಳುತ್ತೇನೆ’’ ಅಂದರು. ಅವರ ವಿನಂತಿಗೆ ಬೆಲೆ ಕೊಟ್ಟು ಎಲ್ಲ ಹೆಂಗಸರು ಅಲ್ಲೇ ಉಳಿದರು.

ಚಮ್ಮಾರರ ಓಣಿಯ ಸಭೆ ಮುಗಿದ ಮೇಲೆ ಬಾಬಾಸಾಹೇಬರು ಅಲ್ಲಿ ಸೇರಿದ್ದ ಹೆಂಗಸರನ್ನುದ್ದೇಶಿಸಿ ಭಾಷಣ ಮಾಡಿದರು. ನಂತರ ಜಾತಿಯ ಪಂಚರು, ಮ್ಹೆತ್ರೆಯಂತಹ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು. ನಿರ್ಧರಿಸಿದ್ದಂತೆ ಅಧ್ಯಕ್ಷರು ಕಡೆಯ ಹಾಗೂ ಮಹತ್ವದ ಕಾರ್ಯಕ್ರಮವನ್ನು ಆರಂಭಿಸಿದರು. ಈ ಕಡೆಯ ಕಾರ್ಯಕ್ರಮ ಎಷ್ಟು ಮಹತ್ವದ್ದಾಗಿತ್ತೆಂದರೆ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಲ್ಲಿ ಅದಕ್ಕೆ ಶ್ರೇಷ್ಠ ಸ್ಥಾನವಿತ್ತು. ಅಷ್ಟೇಯಲ್ಲದೆ ಈ ಕಾರ್ಯಕ್ರಮವನ್ನು ಎಷ್ಟು ಗಂಭೀರವಾಗಿ ನಡೆಸಿದರೆಂದರೆ ನೆರೆದ ಸಭಾಜನರಿಗೆಲ್ಲ ತಮ್ಮ ಕರ್ತವ್ಯದ ಅರಿವು ಕಣ್ಣೆದುರು ಸ್ಪಷ್ಟವಾಗಿ ಕಾಣುತ್ತಿತ್ತು. ಈ ಕಾರ್ಯಕ್ರಮದ ಮೊದಲ ಮುಖ್ಯ ಕಾರ್ಯಕ್ರಮ ಮಹಿಳೆಯರಿಗೆ ವ್ಯಾಖ್ಯಾನ ಕೊಡುವುದಾಗಿತ್ತು. ಮಧ್ಯಾಹ್ನ ನಿರ್ಧರಿಸಿದ್ದಂತೆ ಎಲ್ಲ ಮಹಿಳೆಯರು ಸಂಕೋಚ ಬಿಟ್ಟು ಮಂಟಪದಲ್ಲಿ ಬಂದು ಕುಳಿತಿದ್ದರು. ಅವರಿಗೆ ಕುಳಿತುಕೊಳ್ಳಲು ಮಧ್ಯದಲ್ಲಿ ಜಾಗ ಬಿಡಲಾಗಿತ್ತು.

ಡಾ. ಅಂಬೇಡ್ಕರ್ ಅವರನ್ನುದ್ದೇಶಿಸಿ ಮಾತನಾಡುತ್ತ, ‘‘ನೀವೆಲ್ಲ ಈ ಸಭೆಗೆ ಬಂದಿರುವುದು ನೋಡಿ ನನಗೆ ಬಹಳ ಸಂತೋಷ ವಾಗುತ್ತಿದೆ. ಮನೆಯ ಸಮಸ್ಯೆಗಳನ್ನು ಗಂಡು-ಹೆಣ್ಣು ಸೇರಿ ಬಿಡಿಸುವಂತೆ ಸಮಾಜದ ಸಮಸ್ಯೆಗಳನ್ನು ಕೂಡ ಇವರಿಬ್ಬರೂ ಸೇರಿ ಬಿಡಿಸಬೇಕು. ಕೇವಲ ಗಂಡಸರೇ ಈ ಜವಾಬ್ದಾರಿಯನ್ನು ಹೊತ್ತರೆ ಗುರಿ ತಲುಪಲು ಅವರಿಗೆ ಹೆಚ್ಚು ಸಮಯ ಬೇಕಾಗಬಹುದು ಅನ್ನುವುದರಲ್ಲಿ ಅನುಮಾನವಿಲ್ಲ. ಹೆಂಗಸರು ಈ ಕೆಲಸವನ್ನು ವಹಿಸಿಕೊಂಡರೆ ಆ ಕೆಲಸದಲ್ಲವರು ಬೇಗ ಯಶಸ್ಸು ಗಳಿಸಬಹುದು ಎಂದು ನನಗನಿಸುತ್ತದೆ. ತಾವೊಬ್ಬರೇ ಈ ಜವಾಬ್ದಾರಿ ವಹಿಸಲಾರೆವು ಎಂದೆನಿಸಿದರೆ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಗಂಡಸರಿಗೆ ಸಹಾಯ ಮಾಡಬಹುದು. ಅದಕ್ಕಾಗಿ ನೀವು ಇನ್ನು ಮುಂದೆ ಪರಿಷತ್ತುಗಳಲ್ಲಿ ಭಾಗವಹಿಸುತ್ತಿರಿ. ನಿಜ ಹೇಳಬೇಕೆಂದರೆ ಅಸ್ಪಶ್ಯತೆಯನ್ನು ತೊಲಗಿಸುವ ಕೆಲಸ ಗಂಡಸರದ್ದಲ್ಲ, ಹೆಂಗಸರದ್ದೆ. ನೀವು ನಮ್ಮಂತಹ ಗಂಡಸರಿಗೆ ಜನ್ಮಕೊಟ್ಟಿದ್ದೀರಿ. ಇತರ ಜನರೆಲ್ಲ ನಮ್ಮನ್ನು ಹೇಗೆ ಪ್ರಾಣಿಗಳಿಗಿಂತಲೂ ಕಡೆಯಾಗಿ ಕಾಣುತ್ತಾರೆ ಅನ್ನುವುದು ನಿಮಗೆ ಗೊತ್ತೇಯಿದೆ. ನಮ್ಮ ನೆರಳು ಕಂಡರೂ ಅವರಿಗಾಗುವುದಿಲ್ಲ. ಉಳಿದವರಿಗೆ ಕೋರ್ಟು ಕಚೇರಿಗಳಲ್ಲಿ ಗೌರವದ ಹುದ್ದೆಗಳು ಸಿಗುತ್ತವೆ. ಆದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಪೊಲೀಸ್ ಖಾತೆಯಲ್ಲಿ ಸಿಪಾಯಿಯ ಹುದ್ದೆಯೂ ಸಿಗುವುದಿಲ್ಲ ಅನ್ನುವಷ್ಟು ನಮ್ಮದು ಹೀನ ದರ್ಜೆಯಾಗಿದೆ. ಹೀಗೆಲ್ಲ ಇರುವಾಗ ನೀವು ನಮ್ಮನ್ನು ಹುಟ್ಟಿಸಿದ್ದೇಕೆ ಅನ್ನುವ ಪ್ರಶ್ನೆಯನ್ನು ನಿಮ್ಮ ಮಕ್ಕಳು ಕೇಳಿದರೆ ನೀವೇನು ಉತ್ತರಿಸುತ್ತೀರಿ? ಇಲ್ಲಿ ಕುಳಿತಿರುವ ಕಾಯಸ್ಥ ಹಾಗೂ ಇತರ ಮೇಲ್ಜಾತಿಯ ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲೂ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿರುವ ನಮ್ಮಂತಹ ಮಕ್ಕಳಲ್ಲೂ ಯಾವ ವ್ಯತ್ಯಾಸವಿದೆ? ಬ್ರಾಹ್ಮಣ ಹೆಣ್ಣಿನಲ್ಲಿರುವಷ್ಟೇ ಶೀಲ ನಿಮ್ಮಲ್ಲಿಯೂ ಇದೆ ಅನ್ನುವುದರ ಬಗ್ಗೆ ನೀವು ಯೋಚಿಸಬೇಕು. ಬ್ರಾಹ್ಮಣ ಹೆಣ್ಣಿನಲ್ಲಿರುವ ಪಾತಿವ್ರತ್ಯ ನಿಮ್ಮಲ್ಲೂ ಇದೆ. ನಿಮ್ಮಲ್ಲಿರುವ ಮನೋಧೈರ್ಯ, ದೃಢ ನಿರ್ಧಾರ ಹಾಗೂ ಶಕ್ತಿ ಮಾತ್ರ ಬ್ರಾಹ್ಮಣ ಸ್ತ್ರೀಯರಲ್ಲಿಲ್ಲ. ಹೀಗಿರುವಾಗ ಬ್ರಾಹ್ಮಣ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗೆ ಎಲ್ಲೆಡೆ ಗೌರವ ಹಾಗೂ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗೆ ಎಲ್ಲೆಡೆ ಉಪೇಕ್ಷೆ, ಅವಮಾನ, ಆ ಮಗುವಿನ ಮನುಷ್ಯತ್ವದ ಹಕ್ಕು ಕೂಡ ಸಿಗಬಾರದೆ? ಅನ್ನುವುದರ ಬಗ್ಗೆ ಎಂದೂ ಯೋಚಿಸಿದ್ದೀರಾ? ನನಗನಿಸಿದ ಮಟ್ಟಿಗೆ ನೀವದರ ಬಗ್ಗೆ ಎಂದೂ ಯೋಚಿಸಿಲ್ಲ. ನೀವು ಯೋಚಿಸಿದ್ದಿದ್ದರೆ ಗಂಡಸರ ಮೊದಲು ನೀವೇ ಸತ್ಯಾಗ್ರಹ ಆರಂಭಿಸಿರುತ್ತಿದ್ದಿರಿ. ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ್ದೇವೆ ಅನ್ನುವುದಷ್ಟೆ ನಾವು ಮಾಡಿರುವ ಪಾಪ, ಆ ಪಾಪಕ್ಕಾಗಿ ನಾವು ಅಸ್ಪಶ್ಯತೆಯ ಶಿಕ್ಷೆ ಅನುಭವಿಸುತ್ತಿದ್ದೇವೆ. ನಿಮ್ಮ ಹೊಟ್ಟೆಯಲ್ಲಿ ಹುಟ್ಟುವುದು ಪಾಪ, ಇತರ ಹೆಂಗಸರ ಹೊಟ್ಟೆಯಲ್ಲಿ ಹುಟ್ಟುವುದು ಪುಣ್ಯವೇಕಾಗಬೇಕು? ಅನ್ನುವುದರ ಬಗ್ಗೆ ನೀವು ಯೋಚಿಸಿದರೆ ನೀವು ಮುಂಬರುವ ಪೀಳಿಗೆಯನ್ನು ಹುಟ್ಟಿಸುವುದು ನಿಲ್ಲಿಸಬೇಕಾಗುತ್ತದೆ, ಇಲ್ಲವಾದರೆ ನಿಮ್ಮಿಂದ ಅವರಿಗೆ ತಗಲುವ ಕಳಂಕವನ್ನಾದರೂ ತೊಳೆಯಬೇಕಾಗುತ್ತದೆ. ಇನ್ನು ಮುಂದೆ ಇಂತಹ ಕಳಂಕಿತ ಸ್ಥಿತಿಯಲ್ಲಿ ನಾವು ಬದುಕುವುದಿಲ್ಲವೆಂದು ಪ್ರತಿಜ್ಞೆ ಮಾಡಿ. ಸಮಾಜದ ಏಳಿಗೆ ಮಾಡುವುದಾಗಿ ಗಂಡಸರು ನಿರ್ಧರಿಸಿರುವಂತೆ ನೀವೂ ನಿರ್ಧರಿಸಿ. ನಿಮಗೆ ಹೇಳಬೇಕಿರುವ ಮತ್ತೊಂದು ಮುಖ್ಯವಾದ ವಿಷಯವೆಂದರೆ ನೀವು ಹೊಲಸಾದ ರೂಢಿ ಪರಂಪರೆಗಳನ್ನಾಚರಿಸುವುದನ್ನು ಬಿಟ್ಟುಬಿಡಬೇಕು. ನಿಜ ಹೇಳಬೇಕೆಂದರೆ ಈತ ಅಸ್ಪಶ್ಯ ಎಂದು ತೋರಿಸುವ ಯಾವುದೇ ಅಚ್ಚು ಅಸ್ಪಶ್ಯನ ಹಣೆಯ ಮೇಲೆ ಒತ್ತಿರುವುದಿಲ್ಲ, ಆದರೆ ಅಸ್ಪಶ್ಯರ ರೂಢಿ ಪರಂಪರೆಗಳಿಂದ ಎಲ್ಲರಿಗೂ ನೀವು ಅಸ್ಪಶ್ಯರೆನ್ನುವುದು ಗೊತ್ತಾಗುತ್ತದೆ. ಈ ರೂಢಿ ಪರಂಪರೆಗಳು ಒಂದಾನೊಂದು ಕಾಲದಲ್ಲಿ ನಮ್ಮ ಮೇಲೆ ಒತ್ತಾಯದಿಂದ ಹೇರಲಾಗಿದ್ದವು ಎಂದು ನನಗನಿಸುತ್ತದೆ. ಆದರೆ ಬ್ರಿಟಿಷರ ರಾಜ್ಯದಲ್ಲಿ ಇಂತಹ ಒತ್ತಾಯಗಳಾಗಲಾರವು. ಹಾಗಾಗಿ ಅಸ್ಪಶ್ಯರೆಂದು ಗುರುತಿಸಲ್ಪಡುವ ಆಚಾರ, ರೂಢಿಗಳನ್ನು ನೀವು ತೊರೆಯಬೇಕು. ನೀವು ಸೀರೆ ಉಡುವ ರೀತಿ ನಿಮ್ಮ ಅಸ್ಪಶ್ಯತೆಗೆ ಸಾಕ್ಷಿ. ಮೇಲ್ಜಾತಿಯ ಹೆಂಗಸರು ಸೀರೆ ಉಡುವ ರೀತಿಯಲ್ಲಿ ನೀವೂ ಉಡಲು ಪ್ರಯತ್ನಿಸಬೇಕು. ಹಾಗೆ ಮಾಡುವುದರಲ್ಲಿ ನಿಮ್ಮ ಗಂಟೇನೂ ಹೋಗುವುದಿಲ್ಲ. ಹಾಗೆಯೇ ಕತ್ತಿನಲ್ಲಿ ನೂರಾರು ಸರಗಳು ಕೈಯಲ್ಲಿ ಮೇಲಿನ ತನಕ ಬೆಳ್ಳಿಯ ಇಲ್ಲವೆ ಲಾಖಿನ ಬಳೆಗಳನ್ನು ಹಾಕುವ ಪದ್ಧತಿಯೂ ನಿಮ್ಮನ್ನು ಅಸ್ಪಶ್ಯರೆಂದು ಪರಿಚಯಿಸುತ್ತದೆ. ಕತ್ತಿನಲ್ಲಿ ಒಂದಕ್ಕಿಂತ ಹೆಚ್ಚು ಸರಗಳಿರುವ ಅಗತ್ಯವಿಲ್ಲ. ಹೆಚ್ಚು ಸರಗಳನ್ನು ಹಾಕಿಕೊಂಡರೆ ಗಂಡನ ಆಯಷ್ಯ ಹೆಚ್ಚುತ್ತದೆಂದೋ ಇಲ್ಲ, ನಮ್ಮ ಶರೀರಕ್ಕೆ ಮೆರುಗು ಬರುತ್ತದೆಂದೋ ಅಲ್ಲ. ಒಡವೆಗಳಿಗಿಂತ ಬಟ್ಟೆಯಿಂದ ನಮ್ಮ ಶರೀರಕ್ಕೆ ಮೆರುಗು ಸಿಗುತ್ತದೆ. ಆದ್ದರಿಂದ ಲಾಖಿ ಇಲ್ಲವೇ ಬೆಳ್ಳಿಯ ಒಡವೆಗಳಿಗೆ ಹಣ ಖರ್ಚು ಮಾಡುವುದಕ್ಕಿಂತ ಒಳ್ಳೆಯ ಬಟ್ಟೆ ಕೊಂಡುಕೊಳ್ಳಲು ಹಣ ಖರ್ಚು ಮಾಡಿ. ಒಡವೆಗಳನ್ನು ಹಾಕಲೇ ಬೇಕೆಂದರೆ ಚಿನ್ನದ ಒಡವೆಗಳನ್ನು ಮಾಡಿಸಿ ಹಾಕಿಕೊಳ್ಳಿ. ಇಲ್ಲವೇ ಹಾಕಲೇ ಬೇಡಿ ಅದರಂತೆಯೇ ಸ್ವಚ್ಛವಾಗಿರಲು ಪ್ರಯತ್ನಿಸಿ. ನೀವು ಮನೆಯ ಲಕ್ಷ್ಮೀಯರು, ಮನೆಯಲ್ಲಿ ಯಾವುದೇ ರೀತಿಯ ಅಮಂಗಲವಾಗದಂತೆ ನೀವು ಎಚ್ಚರಿಕೆ ವಹಿಸಬೇಕು. ಕಳೆದ ಮಾರ್ಚ್ ತಿಂಗಳಿಂದ ನೀವೆಲ್ಲರೂ ಸತ್ತ ಪ್ರಾಣಿಗಳ ಮಾಂಸ ತಿನ್ನುವುದನ್ನು ನಿಲ್ಲಿಸಿದ್ದೀರಿ ಅನ್ನುವುದು ಸಂತೋಷದ ವಿಷಯ. ಆದರೆ ಯಾವುದಾದರೂ ಕುಟುಂಬದಲ್ಲಿ ಇನ್ನೂ ತಿನ್ನುತ್ತಿದ್ದರೆ ಅದನ್ನು ನಿಲ್ಲಿಸುವ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳಬೇಕು. ಸತ್ತ ಪ್ರಾಣಿಯ ಮಾಂಸವನ್ನು ನಿಮ್ಮ ಗಂಡ ಮನೆಗೆ ತಂದರೆ ‘ಇಂತಹ ಅಮಂಗಲ ಪ್ರಕಾರ ಇನ್ನು ಮುಂದೆ ನನ್ನ ಮನೆಯಲ್ಲಿ ನಡೆಯುವುದಿಲ್ಲ’ ಎಂದವನಿಗೆ ಸ್ಪಷ್ಟವಾಗಿ ಹೇಳಿ. ನೀವು ಮನಸ್ಸು ಮಾಡಿದರೆ ಇಂತಹ ಘಟನೆಗಳಾಗುವುದನ್ನು ನೀವು ತಪ್ಪಿಸಬಹುದು ಅನ್ನುವ ಭರವಸೆ ನನಗಿದೆ. ಜೊತೆಗೆ ನೀವು ನಿಮ್ಮ ಮಕ್ಕಳಿಗೆ ವಿದ್ಯೆ ಕಲಿಸಬೇಕು. ಜ್ಞಾನ ಹಾಗೂ ವಿದ್ಯೆ ಇವೆರಡು ಕೇವಲ ಗಂಡಸರ ಸೊತ್ತಲ್ಲ ಹೆಂಗಸರಿಗೂ ಕಡ್ಡಾಯವಾಗಿ ಸಿಗಬೇಕಾದ್ದಂತಹದ್ದು ಅನ್ನುವುದನ್ನು ನಮ್ಮ ಪೂರ್ವಜರು ತಿಳಿದುಕೊಡಿದ್ದರು. ಇಲ್ಲದಿದ್ದರೆ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಪೂರ್ವಜರು ತಮ್ಮ ಹುಡುಗಿಯರಿಗೆ ವಿದ್ಯೆ ಕಲಿಸುತ್ತಿರಲಿಲ್ಲ. ಫಲವತ್ತಾದ ಭೂಮಿಯಲ್ಲಿ ಬೆಳೆಯೂ ಫಲವತ್ತಾಗಿಯೇ ಬರುತ್ತದೆ ಅನ್ನುವುದನ್ನು ನೆನಪಿಟ್ಟು ನಿಮ್ಮ ಮುಂದಿನ ಪೀಳಿಗೆಯನ್ನು ಸುಧಾರಿಸಬೇಕೆಂದಿದ್ದರೆ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸಲೇಬೇಕು. ನಾನಿಂದು ನಿಮಗೆ ಕೊಟ್ಟಿರುವ ಉಪದೇಶಗಳನ್ನು ನೀವು ಗಾಳಿಗೆ ತೂರಲಾರಿರಿ ಅನ್ನುವ ಅಪೇಕ್ಷೆಯಿದೆ. ಆದಷ್ಟು ಬೇಗ ಅದನ್ನು ಜಾರಿಗೆ ತನ್ನಿ. ಹಾಗಾಗಿ ನೀವು ಬೆಳಗ್ಗೆ ಮನೆಗೆ ಹೋಗುವ ಮೊದಲು ಸೀರೆ ಉಡುವ ರೀತಿಯನ್ನು ಬದಲಿಸಿ ತೋರಿಸಿ ಹೋದರೆ ಮಾತ್ರ ನಾನು ಹೇಳಿದ್ದು ಸಾರ್ಥಕವಾಯಿತೆಂದು ಕೊಳ್ಳುತ್ತೇನೆ’’ ಅಂದರು.

 ನೆರೆದ ಹೆಂಗಸರ ಮೇಲೆ ಡಾ. ಅಂಬೇಡ್ಕರ್ ಭಾಷಣದ ತಾತ್ಕಾಲಿಕ ಪರಿಣಾಮಗಳಾಗಿರುವುದು ಕಂಡಿತು. ಬೆಳಗ್ಗೆ ತಮ್ಮ ತಮ್ಮ ಊರಿಗೆ ಹೋಗುವ ಮೊದಲು ಆ ಹೆಂಗಸರು ತಮ್ಮ ಉಡುಗೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಿಕೊಂಡಿದ್ದರು. ಅವರ ಈ ನಿರ್ಧಾರಕ್ಕಾಗಿ ಒಬ್ಬೊಬ್ಬಳಿಗೂ ಬಳೆ ಮತ್ತು ಕುಪ್ಪಸ ಖರೀದಿಸಲು ಎಂಟಾಣೆ ಕೊಡಲಾಯಿತು. ಹೆಂಗಸರಂತೆ ಗಂಡಸರಲ್ಲೂ ಬದಲಾವಣೆ ಕಾಣುತ್ತಿತ್ತು. ಅವರು ಕೂಡ ಮೂಗಲ್ಲಿ ಕೈಯಲ್ಲಿ ಹಾಕುತ್ತಿದ್ದ ವಿಚಿತ್ರ ರೀತಿಯ ಒಡವೆಗಳನ್ನು ತೆಗೆದೊಗೆದಿದ್ದರು. ಅಷ್ಟೇ ಅಲ್ಲ ಮಹಾಡ್ ಮುನಿಸಿಪಾಲ್ಟಿಯಲ್ಲಿ ಕಸ ಎತ್ತಲು, ಕಸ ಗುಡಿಸಲು ಕೆಲಸ ಮಾಡುತ್ತಿದ್ದ ಮಾಂಗ್ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟರು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News