ಮಾನವಹಕ್ಕುಗಳ ಧರ್ಮ

Update: 2019-09-19 18:30 GMT

12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ, ಆರ್ಥಿಕ ಮತ್ತು ದಾರ್ಶನಿಕ ಚರ್ಚೆಗಾಗಿ ‘ಅನುಭವ ಮಂಟಪ’ ಎಂಬ ಜಗತ್ತಿನ ಮೊದಲ ಸಂಸತ್ ಸ್ಥಾಪಿಸಿದರು. ನಟುವರ ಜನಾಂಗದಿಂದ ಬಂದ ಮಹಾಜ್ಞಾನಿ ಅಲ್ಲಮಪ್ರಭುದೇವರನ್ನು ಅನುಭವ ಮಂಟಪದ ಶೂನ್ಯಸಿಂಹಾಸನಾಧೀಶ್ವರರನ್ನಾಗಿ ಮಾಡಿದರು. ವಿವಿಧ ಕಾಯಕಗಳನ್ನು ಮಾಡುವ ಸಮಾಜಗಳ 770 ಪುರುಷ ಮತ್ತು ಮಹಿಳಾ ಪ್ರತಿನಿಧಿಗಳನ್ನು ಅನುಭವ ಮಂಟಪದ ಸದಸ್ಯರನ್ನಾಗಿ ಮಾಡಿದರು. ಅವರನ್ನು ಅಮರಗಣಗಳೆಂದು ಕರೆದರು. ಈ ಅಮರಗಣಗಳಲ್ಲಿ ಅಲ್ಲಮಪ್ರಭುದೇವರು, ಬಸವಣ್ಣನವರು, ಅಕ್ಕನಾಗಮ್ಮ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಿದ್ಧರಾಮ ಮತ್ತು ಮಡಿವಾಳ ಮಾಚಿದೇವರು ಗಣಾಧೀಶರಾಗಿದ್ದರು.
ಅನುಭವ ಮಂಟಪವು ಅಭಿವ್ಯಕ್ತಿ ಸ್ವಾತಂತ್ರ್ಯದ ತಾಣವಾಗಿತ್ತು. ಶರಣರ ವಚನಗಳ ಚರ್ಚೆಯ ನಂತರವೇ ಅವು ಜನರ ಕೈ ಸೇರುತ್ತಿದ್ದವು. ವಚನಗಳು ಸಂವಿಧಾನದ ಅಂಶಗಳನ್ನು ಒಳಗೊಂಡಿದ್ದು ಮಾನವಹಕ್ಕುಗಳನ್ನು ಪ್ರತಿಪಾದಿಸುತ್ತವೆ.
ನೈತಿಕ ಮತ್ತು ಅನೈತಿಕ ಸಂಬಂಧಗಳಿಂದ ಜನಿಸಿದ ಮಕ್ಕಳ ಹಕ್ಕುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬುದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಘೋಷಣೆಯಲ್ಲಿ ಇದೆ. ದಾಸೀಪುತ್ರನಾಗಲಿ ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಬೇಕು ಎಂದು ಬಸವಣ್ಣನವರು ಹೇಳುತ್ತಾರೆ. ಸ್ತ್ರೀ-ಪುರುಷರಲ್ಲಿ ಭೇದಭಾವವಿಲ್ಲ ಮುಂತಾದ ಮಾನವ ಹಕ್ಕುಗಳ 30 ಅಂಶಗಳನ್ನು ವಿಶ್ವಸಂಸ್ಥೆ 1948ನೇ ಡಿಸೆಂಬರ್ 10ರಂದು ಘೋಷಿಸಿತು. ಈ ಎಲ್ಲ ಅಂಶಗಳು ಬಸವಣ್ಣನವರ ವಚನಗಳಲ್ಲಿ ಇವೆ!
ಎರಡನೇ ಮಹಾಯುದ್ಧದಲ್ಲಿ 5 ಕೋಟಿ ಜನ ಸಾವಿಗೀಡಾದ ನಂತರ ವಿಶ್ವಸಂಸ್ಥೆ ಮಾನವಹಕ್ಕುಗಳನ್ನು ಘೋಷಿಸಿತು. ಆದರೆ 12ನೇ ಶತಮಾನದಲ್ಲಿ ಶರಣರು ಮಾನವಹಕ್ಕುಗಳ ಕುರಿತು ಮಾತನಾಡಿದ್ದಕ್ಕಾಗಿ ಹುತಾತ್ಮರಾಗಬೇಕಾಯಿತು! 20ನೇ ಶತಮಾನದಲ್ಲಿ ಎರಡು ಮಹಾಯುದ್ಧಗಳ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದರೆ, 12ನೇ ಶತಮಾನದಲ್ಲಿ ಬಸವ ತತ್ತ್ವವು ಮಾನವ ಹಕ್ಕುಗಳನ್ನು ಎತ್ತಿಹಿಡಿದ ನಂತರ ಕಲ್ಯಾಣದಲ್ಲಿ ಶರಣರ ಹತ್ಯಾಕಾಂಡವಾಯಿತು!
ಹೀಗೆ ಬಸವಾದಿ ಪ್ರಮಥರು 12ನೇ ಶತಮಾನದಲ್ಲೇ ಮಾನವ ಹಕ್ಕುಗಳ ಪ್ರತಿಪಾದಕರಾಗಿ ಕಂಗೊಳಿಸುತ್ತಿದ್ದಾರೆ. ಅವರ ಅಭೂತಪೂರ್ವ ಸಾಧನೆ ಇದಾಗಿದೆ. ಈ ವಿಚಾರಗಳು ಪಾಶ್ಚಿಮಾತ್ಯ ಜಗತ್ತಿಗೆ ಹೊಳೆಯಲು 20ನೇ ಶತಮಾನದವರೆಗೆ ಕಾಯಬೇಕಾಯಿತು. ಅಲ್ಲದೆ ಎರಡು ಮಹಾಯುದ್ಧಗಳನ್ನು ಎದುರಿಸಬೇಕಾಯಿತು.
ಭಾರತದ ಸಂವಿಧಾನ ಕೂಡ ಈ ಮಾನವ ಹಕ್ಕುಗಳ ಅಂಶಗಳನ್ನು ಒಳಗೊಂಡಿರುವುದರಿಂದ ಬಸವಣ್ಣನವರ ವಚನಗಳು ಭಾರತದ ಸಂವಿಧಾನದ ಜೀವಾಳವಾಗಿವೆ. ಬಸವಣ್ಣನವರ ವಚನಗಳಂತೆ ನಡೆದರೆ ಅಂತರ್‌ರಾಷ್ಟ್ರೀಯ ಮಟ್ಟದ ಮಾನವ ಹಕ್ಕುಗಳನ್ನು ಮತ್ತು ನಮ್ಮ ದೇಶದ ಸಂವಿಧಾನವನ್ನು ಏಕಕಾಲಕ್ಕೆ ಗೌರವಿಸಿದಂತಾಗುತ್ತದೆ. ಬಸವಣ್ಣನವರ ವಚನಗಳಿಗೆ ವಿರುದ್ಧವಾಗಿ ನಡೆದರೆ ಸಂವಿಧಾನಬಾಹಿರ ಕೃತ್ಯವಾಗುತ್ತದೆ. ಅಲ್ಲದೆ ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳಿಗೆ ಅವಮಾನ ಮಾಡಿದಂತಾಗುತ್ತದೆ.
ಅನುಭವ ಮಂಟಪದ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಬೀಜಗಳು ಈ ನೆಲದಲ್ಲಿ ಮೊಳಕೆ ಒಡೆದವು ಮತ್ತು ಮಾನವ ಹಕ್ಕುಗಳ ಹೂಗಳು ಅರಳಿದವು. ಹೀಗೆ ಬಸವಣ್ಣನವರು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮೂಲ ಪುರುಷರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75