ಬಿಳಿಯರ ನೋಟದ ‘ಲಿಂಕನ್’

Update: 2019-09-21 18:33 GMT

ಕರಿಯರ ವಿಧೇಯತೆಯನ್ನು ವೈಭವೀಕರಿಸುವ ಅನೇಕ ಚಿತ್ರಗಳಿವೆ. ಆದರೆ ‘ಲಿಂಕನ್’ ಚಿತ್ರವು ಆ ರೀತಿಯ ಚಿತ್ರವಲ್ಲ. ಆದರೂ ಅದು ಅಪ್ರಜ್ಞಾಪೂರ್ವಕವಾಗಿ ಬಿಳಿಯರ ಬಗೆಗಿನ ಸಜ್ಜನಿಕೆಯ ನಂಬಿಕೆಯನ್ನು ಗಟ್ಟಿಗೊಳಿಸುವ ರೀತಿ ನಿರೂಪಗೊಂಡಿದೆ. ಚರಿತ್ರೆಯ ಪರಿವರ್ತನೆಗೆ ಬಿಳಿಯರು ಕಾರಣರು; ಸಾಮಾಜಿಕ ಪ್ರಗತಿ ಮತ್ತು ಅಭಿವೃದ್ಧಿಗೆ ಅವರೇ ಮೂಲ ಕಾರಣಕರ್ತರು ಎಂಬ ಸ್ವೀಕೃತ ನೀತಿಯನ್ನು ಎತ್ತಿ ಹಿಡಿಯುವಂತೆ ಚಿತ್ರ ರೂಪುಗೊಂಡಿದೆ.

ಜಗತ್ತಿನ ಚರಿತ್ರೆಗೆ ತಿರುವು ನೀಡಿದ ಮಹಾನಾಯಕರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರೂ ಒಬ್ಬರು. ಬಡ ಹಿನ್ನೆಲೆಯಿಂದ ಬಂದ ಲಿಂಕನ್ ಅಮೆರಿಕ ಅಧ್ಯಕ್ಷ ಸ್ಥಾನದಂಥ ಉನ್ನತ ಅಧಿಕಾರದ ಗದ್ದುಗೆ ಏರಿದ್ದೇ ಒಂದು ದೊಡ್ಡ ಪವಾಡ. ಲಿಂಕನ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಅಮೆರಿಕ ರಾಷ್ಟ್ರವನ್ನು ದಕ್ಷತೆಯಿಂದ ಮುನ್ನಡೆಸಿದರು. ಅಮೆರಿಕ ಸಂಸ್ಥಾನ ಕಂಡ ಅತ್ಯಂತ ರಕ್ತ ಸಿಕ್ತ ಯಾದವೀ ಕಲಹವೆನಿಸಿದ ಅಂತರ್ಯುದ್ಧವನ್ನು ಮಣಿಸಿದರು. ಅಮೆರಿಕ ಎದುರಿಸಿದ ನೈತಿಕ, ಸಾಂವಿಧಾನಿಕ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ಪರಿಹರಿಸಿದರು. ಮುಖ್ಯವಾಗಿ ಅಮೆರಿಕದ ಕಪ್ಪುಚುಕ್ಕೆಯೆನಿಸಿದ ಗುಲಾಮಿ ಪದ್ಧತಿಯನ್ನು ನಿಷೇಧಿಸಿದರು. ಸಂವಿಧಾನದ ಹದಿಮೂರನೇ ತಿದ್ದುಪಡಿಯನ್ನು ಜಾರಿಗೊಳಿಸಿದರು. ಅಮೆರಿಕದ ಆರ್ಥಿಕತೆಗೆ ಆಧುನಿಕತೆಯ ಸ್ಪರ್ಶ ನೀಡಿದರು. ಒಕ್ಕೂಟ ಸರಕಾರವನ್ನು ಬಲಗೊಳಿಸಿ ಜಗತ್ತಿನ ನಾಯಕರಿಗೆ ಮಾದರಿ ಎನಿಸಿದರು.

ಇಂಥ ಮಹಾಪುರುಷನ ಕೊನೆಯ ನಾಲ್ಕು ತಿಂಗಳ ಅವಧಿಯನ್ನು ಕೇಂದ್ರೀಕರಿಸಿ ನಿರ್ದೇಶಕ ಸ್ಪೀಲ್‌ಬರ್ಗ್ ಅವರು ‘ಲಿಂಕನ್’ ಚಿತ್ರವನ್ನು ರೂಪಿಸಿದ್ದಾರೆ. ಆದುದರಿಂದ ಇದು ಲಿಂಕನ್ ಮಹಾಶಯನ ಜೀವನ ಚಿತ್ರವಾಗದೆ ಅಮೆರಿಕ ಇತಿಹಾಸದ ಒಂದು ಬಹುಮುಖ್ಯ ಅಧ್ಯಾಯವನ್ನು ವಿವರಿಸುವ ಚಿತ್ರವಾಗಿದೆ.

ಲಿಂಕನ್ (2012) ಚಿತ್ರವು ಬಿಡುಗಡೆಯಾದಾಗ ಅದರ ಉನ್ನತ ತಾಂತ್ರಿಕ ಮೌಲ್ಯಗಳಿಂದ ಹಿಡಿದು, ನಿರೂಪಣೆ, ಕಲಾವಿದರ ಅಭಿನಯದವರೆಗೆ ಹೊಗಳಿಕೆಗಳ ಸುರಿಮಳೆಯಾಯಿತು. ಮುಖ್ಯವಾಗಿ ನಾಯಕನ ಪಾತ್ರದಲ್ಲಿ ಡೇನಿಯಲ್ ಡೇ ಲೀವೀಸ್ ನೀಡಿದ ಅಭಿನಯ ಚಲನಚಿತ್ರದ ಸಾಧನೆಗಳಲ್ಲೊಂದೆಂದು ಪರಿಗಣಿತವಾಯಿತು. ಹನ್ನೆರಡು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನವಾದ ಚಿತ್ರವು ಅಂತಿಮವಾಗಿ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿ ಗಳಿಸಿತು. ಬಾಕ್ಸ್ ಆಫೀಸ್‌ನಲ್ಲೂ ಯಶಸ್ಸು ಕಂಡಿತು.

ಚಿತ್ರವು 1865ರ ಜನವರಿಯಿಂದ ಆರಂಭವಾಗುತ್ತದೆ. ಲಿಂಕನ್ ಬದುಕಿನ ಅತ್ಯಂತ ಬಿಕ್ಕಟ್ಟಿನ ಸಮಯವದು. ನಡೆಯುತ್ತಿರುವ ಅಂತರ್ಯುದ್ಧ ಲಿಂಕನ್ ಪಾಲಿಗೆ ವಿಜಯವಾಗಿ ಬರುವ ಸೂಚನೆಗಳಿವೆ. 1863ರಲ್ಲಿ ಅಧಿಕಾರ ಹಿಡಿದ ಆರಂಭದಲ್ಲಿಯೇ ಘೋಷಿಸಿದ ‘ವಿಮೋಚನಾ ಘೋಷಣೆ’(ಗುಲಾಮ ಪದ್ಧತಿ ನಿಷೇಧ)ಯು ಕಾನೂನಾಗಿ ಜಾರಿಯಾಗಬೇಕಾದರೆ ಸಂವಿಧಾನಕ್ಕೆ ಸೂಚಿಸಿರುವ ಹದಿಮೂರನೇ ತಿದ್ದುಪಡಿಗೆ ಸೋಲುಂಟಾಗದಿರಲು ಲಿಂಕನ್ ರಾಜಕೀಯ ತಂತ್ರಗಳನ್ನು ಹೆಣೆಯುತ್ತಿದ್ದಾನೆ. ಅದಕ್ಕಾಗಿ ಆತ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಮತಗಳನ್ನು ಸೆಳೆಯಬೇಕು. ಅದೇ ವೇಳೆ ಲಾ ಸ್ಕೂಲ್‌ನಿಂದ ಹಿಂದಿರುಗಿ ಬಂದ ಮಗ ರಾಬರ್ಟ್ ಲಿಂಕನ್ ಅಂತರ್ಯುದ್ಧದಲ್ಲಿ ಉತ್ತರ ಪ್ರಾಂತದ ಪರ ಹೋರಾಡಲು ಸೇನೆಗೆ ಸೇರುವ ಇಂಗಿತ ವ್ಯಕ್ತಪಡಿಸುತ್ತಾನೆ. ಹೌಹಾರಿದ ಲಿಂಕನ್ ಪತ್ನಿ ಹದಿಮೂರನೇ ತಿದ್ದುಪಡಿಯನ್ನು ತಂದು ಹೇಗಾದರೂ ಯುದ್ಧ ನಿಲ್ಲಿಸುವಂತೆ ಗಂಡನ ಮೇಲೆ ಒತ್ತಡ ಹೇರುತ್ತಾಳೆ. ಸಾಮಾಜಿಕ, ಸಾಂವಿಧಾನಿಕ ಮತ್ತು ಕೌಟುಂಬಿಕ ಒತ್ತಡಗಳಿಗೆ ಸಿಲುಕಿದ ಲಿಂಕನ್ ನಲುಗಿ ಹೋಗುತ್ತಾನೆ. ಕೇವಲ ಎರಡು ಮತಗಳ ಅಂತರದಿಂದ ತಿದ್ದುಪಡಿ ಅಂಗೀಕಾರವಾಗುತ್ತದೆ. ಅಂತರ್ಯುದ್ಧ ನಡೆಯುವ ಸ್ಥಳಗಳಿಗೆ ಹೋಗಿ ಸೇನಾಧಿಕಾರಿಗಳನ್ನು ಹುರಿದುಂಬಿಸುತ್ತಾನೆ. ಕೆಲವೇ ದಿನಗಳಲ್ಲಿ ಯುದ್ಧ ನಿಲ್ಲುತ್ತದೆ. ಕರಿ ಜನರಿಗೆ ಮತದಾನದ ಅಧಿಕಾರ ನೀಡುವ ಬಗ್ಗೆ ಚರ್ಚೆ ನಡೆಸಿ 1865ರ ಆಗಸ್ಟ್ ಹದಿನಾಲ್ಕರಂದು ಹಿಂದಕ್ಕೆ ಬರುತ್ತಾನೆ.

ಅದೇ ರಾತ್ರಿ ಲಿಂಕನ್‌ನ ಮಗ ಟ್ಯಾಡ್ ವಾಶಿಂಗ್ಟನ್‌ನ ಗ್ರೋವರ್ಸ್ ಥಿಯೇಟರ್‌ನಲ್ಲಿ ‘ಅಲ್ಲಾವುದ್ದೀನ್ ಮತ್ತು ಅದ್ಭುತ ದೀಪ’ ನಾಟಕವನ್ನು ನೋಡುತ್ತಿದ್ದಾಗಲೇ ಪ್ರದರ್ಶನ ಅರ್ಧಕ್ಕೆ ನಿಲ್ಲುತ್ತದೆ. ಹಂತಕರು ಲಿಂಕನ್‌ಗೆ ಗುಂಡುಹಾರಿಸಿರುವ ಸುದ್ದಿಯನ್ನು ಮ್ಯಾನೇಜರ್ ಘೋಷಿಸುತ್ತಾನೆ. ಮಾರನೆಯ ದಿನ ಲಿಂಕನ್ ಅಸುನೀಗುತ್ತಾನೆ. ಯುದ್ಧ ಇಲಾಖೆಯ ಕಾರ್ಯದರ್ಶಿ ‘‘ಈಗ ಆತ ಯುಗವೊಂದಕ್ಕೆ ಸೇರಿಹೋದ’’ ಎನ್ನುವ ಮಾತಿನೊಂದಿಗೆ ಚಿತ್ರ ಮುಗಿಯುತ್ತದೆ. ಹಿನ್ನೆಲೆಯಲ್ಲಿ ಲಿಂಕನ್‌ನ ಪ್ರಖ್ಯಾತ ಭಾಷಣ (ಸೆಕೆಂಡ್ ಇನಾಗುರಲ್ ಭಾಷಣ) ಕೇಳಿಸುತ್ತದೆ.

ಆಫ್ರೋ ಅಮೆರಿಕನ್ನರ ಇತಿಹಾಸವನ್ನು ಸ್ವಲ್ಪಮಟ್ಟಿಗೆ ಅಭ್ಯಾಸ ಮಾಡಿರುವ ನಾನು, ಗುಲಾಮ ಪದ್ಧತಿಯ ಅಪಮಾನುಷ ಬದುಕನ್ನು ಕೊನೆಗಾಣಿಸಿದ ವ್ಯಕ್ತಿಯ ಚಿತ್ರವನ್ನು ಕುತೂಲಹದಿಂದ ವೀಕ್ಷಿಸಿದ್ದೇನೆ. ಮತ್ತೆ ಮತ್ತೆ ನೋಡಿದ್ದೇನೆ. ಈ ಚಿತ್ರವು ಗುಲಾಮ ಪದ್ಧತಿ ನಿಷೇಧದ ಹಿನ್ನೆಲೆಯಲ್ಲಿ ಬಿಳಿಯ ರಾಜಕಾರಣಿಗಳು, ಪ್ರಭಾವಿಗಳು ನಡೆಸುವ ಚರ್ಚೆಗಳೇ ಹೆಚ್ಚಿನ ಭಾಗವನ್ನು ತುಂಬಿಕೊಂಡಿರುವುದರಿಂದ ಅವರ ವಾದಗಳನ್ನು ಅರ್ಥಮಾಡಿಕೊಳ್ಳಲು ಮತ್ತೆ ಮತ್ತೆ ನೋಡುವಂತಾಯಿತು. ಲಿಂಕನ್‌ನ ಕೊನೆಯ ನಾಲ್ಕು ತಿಂಗಳ ಅವಧಿಯ ಕಥನವನ್ನು ನಿರ್ದೇಶಕ ಸಕಲ ವಿವರಗಳಿಗೂ ಗಮನ ನೀಡಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಅಂತರ್ಯುದ್ಧ, ಹದಿಮೂರನೇ ತಿದ್ದುಪಡಿಯು ಪಾಸಾಗಲು ಲಿಂಕನ್ ಹೆಣೆಯುವ ತಂತ್ರಗಾರಿಕೆ, ದಕ್ಷಿಣ ಪ್ರಾಂತಗಳು ಸೋಲೊಪ್ಪಿಕೊಳ್ಳುವ, ಲಿಂಕನ್ ಎದುರಿಸುವ ಬಿಕ್ಕಟ್ಟುಗಳೆಲ್ಲವೂ ಮನಮುಟ್ಟುತ್ತವೆ. ಹಂತಕರ ಗುಂಡಿಗೆ ಬಲಿಯಾಗುವ ಸನ್ನಿವೇಶವನ್ನು ತೋರಿಸದೆಯೇ ದೇಶದ ಗಾಢ ದುರಂತವನ್ನು ಕಟ್ಟಿಕೊಡುವ ಸ್ಟೀವನ್ ಸ್ಪೀಲ್‌ಬರ್ಗ್ ಜಾಣ್ಮೆಯನ್ನು ಮೆಚ್ಚಲೇಬೇಕು.

ಆದರೆ ಪಂಡಿತರಿಂದ ಅಮೋಘವೆಂದು ವರ್ಣಿಸಿಕೊಂಡ ಈ ಚಿತ್ರದ ಬಗ್ಗೆ ಅಪಸ್ವರಗಳೂ ಕೇಳಿಬಂದಿವೆ. ಇಡೀ ಲಿಂಕನ್‌ನ ಬದುಕಿನ ನಿರ್ಣಾಯಕ ಘಟ್ಟಕ್ಕೆ ಕಾರಣವಾದ ಕರಿಯರೇ ಇಲ್ಲಿ ಅಂಚಿಗೆ ಸರಿದಿರುವುದು ಚಿತ್ರದಲ್ಲಿನ ದೋಷ ಎಂಬುದು ಅವರ ತರ್ಕ. ಅಮೆರಿಕದ ಕಪ್ಪು ಗುಲಾಮರ ಇತಿಹಾಸವನ್ನು ಸ್ವಲ್ಪಮಟ್ಟಿಗೆ ಅಭ್ಯಾಸ ಮಾಡಿರುವ ನನಗೆ ಈ ಆಕ್ಷೇಪಣೆಯಲ್ಲಿ ಹುರುಳಿದೆಯೆನಿಸುತ್ತದೆ.

ಬಹುತೇಕ ಆಸ್ಕರ್ ಪ್ರಶಸ್ತಿಯ ಮೇಲೆ ಕಣ್ಣು ಇಟ್ಟು ರಚಿಸಿದಂತೆ ಕಾಣುವ ಚಿತ್ರಕತೆಯನ್ನು ಸ್ಪೀಲ್‌ಬರ್ಗ್ ಅಷ್ಟೇ ಉದ್ದೇಶದಿಂದ ಅಮೆರಿಕ ಇತಿಹಾಸದ ನಿರ್ಣಾಯಕ ಪುರುಷನ ಕತೆಯನ್ನು ಹೇಳಿದ್ದಾರೆ. ಅದರ ಆರಂಭದ ದೃಶ್ಯಗಳು ನೋಡುಗನ ಆಸಕ್ತಿಯನ್ನು ಕೆರಳಿಸುತ್ತವೆ. ಈಗಾಗಲೇ ಅಧ್ಯಕ್ಷರಾಗಿರುವ ಅಬ್ರಹಾಂ ಲಿಂಕನ್ ಅನ್ನು ಉದ್ದೇಶಿಸಿ ಇಬ್ಬರು ಕರಿಯ ಯೋಧರು ಯುದ್ಧದಲ್ಲಿ ತಮಗಾದ ಅನುಭವಗಳನ್ನು ನಿವೇದಿಸುತ್ತಾರೆ. ಅವರಲ್ಲೊಬ್ಬ ತಳಹಂತದ ಅಧಿಕಾರಿ (ಕಾರ್ಪೊರಲ್) ಆದ ಯೋಧ ಸಂಯುಕ್ತ ಸಂಸ್ಥಾನದ ಸೇನೆಯಲ್ಲಿ ಅಸಮಾನ ವೇತನ ಮತ್ತು ಮುಂಭಡ್ತಿಯ ಸಮಸ್ಯೆಯನ್ನು ಎತ್ತುತ್ತಾನೆ. ಇಬ್ಬರು ಬಿಳಿಯ ಸೈನಿಕರೂ ಅವರನ್ನು ಕೂಡಿಕೊಳ್ಳುತ್ತಾರೆ. ಆ ದೃಶ್ಯ ಕಾರ್ಪೊರಲ್ ಗಟ್ಟಿಯಾಗಿ ಪ್ರಖ್ಯಾತ ಗೆಟಿಸ್‌ಬರ್ಗ್ ಭಾಷಣದ ಕೊನೆಯ ಸಾಲುಗಳನ್ನು ಉದ್ಗರಿಸುತ್ತಾ ಅಲ್ಲಿಂದ ನಿರ್ಗಮಿಸುತ್ತಾನೆ.

ಈ ಐತಿಹಾಸಿಕ ವ್ಯಂಗ್ಯವನ್ನು ತೆರೆಯ ಮೇಲೆ ಮೂಡಿಸಿದ ನಂತರ ಕರಿಯರ ಪಾತ್ರಗಳಿಗೆ ಸಂಬಂಧಿಸಿದಂತೆ ಚಿತ್ರ ಇಳಿಜಾರಿನ ಹಾದಿ ಹಿಡಿಯುತ್ತದೆ. ಕರಿಯರ ಹೋರಾಟದ ಇತಿಹಾಸವನ್ನು ಸ್ವಲ್ಪಮಟ್ಟಿಗೆ ಅಭ್ಯಾಸ ಮಾಡಿರುವ ನನಗೆ ನಿರ್ದೇಶಕ ಸ್ಪೀಲ್‌ಬರ್ಗ್ ಅವರು ಐತಿಹಾಸಿಕ ಘಟನೆಗಳನ್ನು ನಿರೂಪಿಸುವಾಗ ವಾಸ್ತವ ಸಂಗತಿಗಳನ್ನು ದೂರವಿಟ್ಟು ಸಾಕಷ್ಟು ಸ್ವಾತಂತ್ರ್ಯ ವಹಿಸಿದ್ದಾರೆಂದು ಗೋಚರಿಸುತ್ತದೆ. ಶಿಂಡ್ಲರ್ಸ್‌ ಲಿಸ್ಟ್ ಮತ್ತು ಸೇವಿಂಗ್ ಪ್ರೈವೇಟ್ ರಯಾನ್ ಚಿತ್ರದ ನಿರೂಪಣೆಯಂತೆಯೇ ಲಿಂಕನ್ ನಿರೂಪಣೆಯನ್ನು ಚರಿತ್ರೆಯ ವಸ್ತುಸ್ಥಿತಿಯನ್ನು ಬಿಂಬಿಸುವ ಬದಲು ಪ್ರೇಕ್ಷಕರನ್ನು ರಂಜಿಸಲು ಚರಿತ್ರೆಯನ್ನು ನೆಪ ಮಾಡಿಕೊಂಡಂತೆ ಕಾಣುತ್ತದೆ.

ಅಮೆರಿಕದಲ್ಲಿ ಆಫ್ರೋಅಮೆರಿಕನ್ನರ ಗುಲಾಮ ಪದ್ಧತಿಯನ್ನು ನಿಷೇಧಿಸಲು ಅತ್ಯಂತ ಗಟ್ಟಿ ನಿಲುವೊಂದನ್ನು ತೆಗೆದುಕೊಂಡ ಅಧ್ಯಕ್ಷನ ಜೀವನ ಕುರಿತ ಕಥನದಲ್ಲಿ ಆ ಮುಖ್ಯ ಘಟನೆಯ ಹಿನ್ನೆಲೆ ಮುನ್ನೆಲೆಗೆ ಅವಕಾಶವೇ ಇಲ್ಲ. ಬದಲು ಕರಿಯ ಪಾತ್ರಗಳೆಲ್ಲ ಬಿಳಿಯರು ತಮ್ಮನ್ನು ವಿಮೋಚನೆಗೊಳಿಸಲು ಕಾದು ಕುಳಿತ ನಿಷ್ಕ್ರಿಯ ಪಾತ್ರಗಳಾಗಿರುವುದು ನಿರಾಶೆಯನ್ನು ಮೂಡಿಸುತ್ತದೆ. ಲಿಂಕನ್ ತನ್ನ ಚರಿತ್ರಾರ್ಹ ನಿರ್ಣಯ(ವಿಮೋಚನಾ ಘೋಷಣೆ)ವನ್ನು ಘೋಷಿಸುವ ಮೂರ್ನಾಲ್ಕು ದಶಕಗಳ ಮೊದಲೇ ಕರಿಯರು ತಮ್ಮ ಸ್ವಾತಂತ್ರ್ಯಕ್ಕಾಗಿ ತೀವ್ರ ಹೋರಾಟ ನಡೆಸಿದ್ದರು. ಅವರ ಪ್ರಸಿದ್ಧ ಗ್ರೇಪ್ ವೈನ್ ಟೆಲಿಗ್ರಾಂ ವಿಧಾನ ಕರಿಯರ ಸಂಘಟನೆಗೆ ಕಾರಣವಾಗಿತ್ತು. ಅನೇಕ ಇತಿಹಾಸಕಾರರ ಪ್ರಕಾರ ಕರಿಯರು ತಮ್ಮ ವಿಮೋಚನೆಗೆ ತಾವೇ ಹೋರಾಟ ಆರಂಭಿಸಿ ಬಿಳಿಯರಲ್ಲಿ ಆ ಬಗ್ಗೆ ಚಿಂತನೆ ಹುಟ್ಟುಹಾಕಲು ಕಾರಣರಾಗಿದ್ದರು.

ಆದರೆ ಸ್ಪೀಲ್‌ಬರ್ಗ್ ಅವರ ಈ ಚಿತ್ರವು ವಿಧೇಯತೆಯ ಗುಲಾಮರು ತಮ್ಮ ವಿಮೋಚನೆಯನ್ನು ಸಡಗರದಿಂದ ಆಚರಿಸಲು ಕಾದುಕುಳಿತ ಸಮೂಹದಂತೆ ತೋರಿಸಿದ್ದಾರೆ.

ಇದನ್ನು ಟೀಕೆಗಾಗಿ ಟೀಕೆ ಎಂದು ಹೇಳುತ್ತಿಲ್ಲ. ಇಡೀ ಚಿತ್ರ ಕರಿಯರು ತಮ್ಮ ವಿಮೋಚನೆಗೆ ಏನೂ ಮಾಡದೆ ಕೂತಿದ್ದಂತೆ ಚಿತ್ರವೇ ಕಾಣುತ್ತದೆ. ‘ಗಾನ್ ವಿತ್ ದ ವಿಂಡ್’ ಚಿತ್ರದಲ್ಲಿ ಬಿಳಿಯರ ವಿಧೇಯ ಸೇವಕರಿಗಾಗಿ ಅವರ ಅಭಿಮಾನವನ್ನು ಗಳಿಸುವ ಕರುಣೆಯ ಕರಿಯ ಪಾತ್ರಗಳಿವೆ. ಅಂಥದೊಂದು ಕರಿಯರ ವಿಧೇಯತೆಯನ್ನು ವೈಭವೀಕರಿಸುವ ಅನೇಕ ಚಿತ್ರಗಳಿವೆ. ಆದರೆ ‘ಲಿಂಕನ್’ ಚಿತ್ರವು ಆ ರೀತಿಯ ಚಿತ್ರವಲ್ಲ. ಆದರೂ ಅದು ಅಪ್ರಜ್ಞಾಪೂರ್ವಕವಾಗಿ ಬಿಳಿಯರ ಬಗೆಗಿನ ಸಜ್ಜನಿಕೆಯ ನಂಬಿಕೆಯನ್ನು ಗಟ್ಟಿಗೊಳಿಸುವ ರೀತಿ ನಿರೂಪಗೊಂಡಿದೆ. ಚರಿತ್ರೆಯ ಪರಿವರ್ತನೆಗೆ ಬಿಳಿಯರು ಕಾರಣರು; ಸಾಮಾಜಿಕ ಪ್ರಗತಿ ಮತ್ತು ಅಭಿವೃದ್ಧಿಗೆ ಅವರೇ ಮೂಲ ಕಾರಣಕರ್ತರು ಎಂಬ ಸ್ವೀಕೃತ ನೀತಿಯನ್ನು ಎತ್ತಿ ಹಿಡಿಯುವಂತೆ ಚಿತ್ರ ರೂಪುಗೊಂಡಿದೆ. ಯಾಕೆಂದರೆ ಕರಿಯರು ಅಂತರ್ಯುದ್ಧ ಕಾಲದಲ್ಲಿ ದಕ್ಷಿಣದ ದಬ್ಬಾಳಿಕೆಯನ್ನು ತಪ್ಪಿಸಿಕೊಂಡು ಉತ್ತರಕ್ಕೆ ಓಡಿ ಬಂದು ವಾಶಿಂಗ್ಟನ್ ಡಿ.ಸಿ. ನಗರವನ್ನು ಕಟ್ಟಿದರು. ಈ ರೀತಿ ಓಡಿಬಂದವರು ರಾಜಧಾನಿಯ ಬೀದಿಗಳಿಗೆ ಹೊಸ ಮೆರಗು ನೀಡಿದರು. ಬಡಾವಣೆ, ಮಾರುಕಟ್ಟೆಗಳನ್ನು ನಿರ್ಮಿಸಿದರು. 1865ರ ಜನವರಿಯಿಂದ ಎಪ್ರಿಲ್‌ವರೆಗಿನ ಕಥನಕ್ಕೆ ಬಹುಭಾಗ ಮೀಸಲಾಗಿರುವ ಈ ಚಿತ್ರದಲ್ಲಿ ತಮ್ಮ ವಿಮೋಚನೆಗೆ ಕರಿಯರು ಮಾಡಿದ ಪ್ರಯತ್ನಗಳತ್ತ ದೃಷ್ಟಿ ಹರಿಸಿದ್ದರೆ ಲಿಂಕನ್ ದಾರಿಹೋಕ ಕರಿಯನನ್ನು ಮಾತನಾಡಿಸುವ ಒಂದು ದೃಶ್ಯವನ್ನಾದರೂ ಅಳವಡಿಸಬಹುದಿತ್ತು.

ಯಾಕೆಂದರೆ ಕರಿಯರ ಮೌಖಿಕ ಪರಂಪರೆಯಲ್ಲಿ ಓಡಿಬಂದು ಶಿಬಿರದಲ್ಲಿ ಸೇರಿದ ಕರಿಯರ ಕಷ್ಟಕಾರ್ಪಣ್ಯವನ್ನು ಲಿಂಕನ್ ಬಂದು ವಿಚಾರಿಸಿಕೊಳ್ಳುವ ವಿವರಗಳು ದೊರೆಯುತ್ತವೆ. ಆತ ಅವರ ಹಾಡು ಮತ್ತು ಪ್ರಾರ್ಥನೆಗೆ ಕರಗಿದ ದೃಷ್ಟಾಂತಗಳಿವೆ. ಶ್ವೇತಭವನಕ್ಕೆ ಹೋಗುವ ದಾರಿಯಲ್ಲಿ ಎದುರಾದ ಕರಿಯ ಹೆಂಗಸನ್ನು ಭೇಟಿ ಮಾಡಿ ಅವಳ ಕೈಕುಲುಕುವ ದೃಷ್ಟಾಂತಗಳು ಚರಿತ್ರೆಯಲ್ಲಿ ದಾಖಲಾಗಿದೆ.

ಹಾಗೆ ನೋಡಿದರೆ ಅಮೆರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ ವಾಶಿಂಗ್ಟನ್ ಡಿ.ಸಿ.ಯು ತೀವ್ರ ರಾಜಕೀಯ ಪ್ರಜ್ಞೆಯ ಮತ್ತು ಗಟ್ಟಿಯಾದ ಸಂಘಟನೆಗಳನ್ನು ಸ್ಥಾಪಿಸಿದ ಕರಿಯ ಹೋರಾಟಗಾರರ ಕೇಂದ್ರವಾಗಿತ್ತು. ಶ್ವೇತಭವನದಲ್ಲಿ ಸೇವಕರಾಗಿದ್ದ ಎಲಿಜಬೆತ್ ಕೆಕ್ಲಿ ಮತ್ತು ವಿಲಿಯಂ ಸ್ಲೇಡ್ ಅವರು ವಾಶಿಂಗ್ಟನ್‌ಗೆ ಓಡಿಬಂದು ಆಶ್ರಯ ಪಡೆದಿದ್ದ ಕರಿಯರಿಗೆ ಆಹಾರ ಮತ್ತು ಉಡುಪು ಕೊಳ್ಳಲು ಅಗತ್ಯ ದೇಣಿಗೆ ಸಂಗ್ರಹಿಸಲು ಕರಿಯ ಮಹಿಳೆಯರನ್ನು ಸಂಘಟಿಸಿದ್ದರು. ಕರಿಯರ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯ ಬಗೆಗಿನ ಅಂಕಿ ಅಂಶಗಳನ್ನು ಕಲೆ ಹಾಕುತ್ತಿದ್ದ ಕರಿಯರ ಸಂಘಟನೆಗೆ ಸ್ಲೇಡ್ ಅವರು ನಾಯಕರಾಗಿದ್ದರು.

ಆದರೆ ಚಿತ್ರವು ಇಂಥ ಯಾವುದೇ ಅಂಶಗಳ ಬಗ್ಗೆ ಬೆಳಕು ಚೆಲ್ಲುವುದಿಲ್ಲ. ಕರಿಯರನ್ನು ಸಾಮಾನ್ಯರಂತೆ, ಪರಿಸ್ಥಿತಿಗೆ ಏನೂ ಸ್ಪಂದಿಸದವರಂತೆ ಚಿತ್ರಿಸಲಾಗಿದೆ. ಕೆಕ್ಲಿ ಪಾತ್ರವಂತೂ ಅಧ್ಯಕ್ಷರ ಪತ್ನಿ ಮೇರಿ ಟಾರ್ ಲಿಂಕನ್‌ಳ ಜೊತೆಯಲ್ಲಿ ಬಾಲ್ಕನಿಯಲ್ಲಿ ಲೋಕಾಭಿರಾಮವಾಗಿರುವಂತೆ ನಿರೂಪಿಸಲಾಗಿದೆ.

ಚಿತ್ರವು ಬಿಳಿಯರು ಕರಿಯರನ್ನು ನಿಂದಿಸುವ, ಅಪಹಾಸ್ಯ ಮಾಡುವ ದೃಶ್ಯಗಳಲ್ಲಿ ಅಂದಿನ ಕಾಲದ ಭಾಷೆಗೆ ಹೆಚ್ಚು ಗಮನ ನೀಡಿದೆ. ಕರಿಯರನ್ನು ನೋಯಿಸುವ ನಿಂದನೆಗಳಿಗೆ ಪ್ರತಿಯಾಗಿ ಕರಿಯರು ಮಾತಿನ ಕೂರಂಬುಗಳನ್ನು ಎಸೆಯುವಲ್ಲಿ ನಿಷ್ಣಾತರು. ಕರಿಯರ ಮೌಖಿಕ ಪರಂಪರೆ ಅಂಥ ವ್ಯಂಗ್ಯ, ಕುಚೋದ್ಯ ಮಾತುಗಳನ್ನು ಅರಗಿಸಿಕೊಂಡು ಪ್ರತಿಯಾಗಿ ಮಾತಿನ ದಾಳಿ ನಡೆಸಿದೆ. ಇವೆಲ್ಲ ಚಿತ್ರದಲ್ಲಿ ಸುಳಿವೇ ಇಲ್ಲದಂತೆ ನೋಡಿಕೊಳ್ಳಲಾಗಿದೆ.

ಆದರೆ ಇವೆಲ್ಲವೂ ಅಗತ್ಯವಾಗಿ ಇರಬೇಕಾಗಿತ್ತೆಂಬ ಅಭಿಪ್ರಾಯವಲ್ಲ. ಲಿಂಕನ್‌ನ ಪರಿಧಿಯಲ್ಲಿ ನಡೆಯುವ ವಿಮೋಚನೆಯ ಚರ್ಚೆಗಳಿಗೆ ಮೂಲ ಕಾರಣವೆನಿಸಿದ ಹೊರಗೆ ನಡೆಯುತ್ತಿರುವ ಕರಿಯರ ಸಂಘರ್ಷವೂ ಸೂಚ್ಯವಾಗಿ ಇರಬೇಕಿತ್ತು. ಯಾಕೆಂದರೆ ಇದು ಗುಲಾಮ ಪದ್ಧತಿಯ ನಿಷೇಧದ ಅಮೆರಿಕನ್ ಇತಿಹಾಸದ ಕಥನ. ಕರಿಯರೇ ಇಲ್ಲದ ಕಥನ. ಬಿಳಿಯರೇ ಎಲ್ಲ ವಿಮೋಚನೆಗಳಿಗೆ ಕಾರಣಕರ್ತರು, ಪರಿವರ್ತನೆಯ ಹರಿಕಾರರು ಎಂಬ ಪೂರ್ವಗ್ರಹವನ್ನು ಗಟ್ಟಿಮಾಡುವ ಕಥನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News