ಸಿದ್ದರಾಮಯ್ಯ ಬೆಂಬಲದಿಂದ ನಾನು ಸಿಎಂ ಆಗಿಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2019-09-24 13:38 GMT

ಬೆಂಗಳೂರು, ಸೆ.24: ನಾನು ಮುಖ್ಯಮಂತ್ರಿ ಆಗಿದ್ದು ಎಲ್ಲರಿಗೂ ಗೊತ್ತಿರೋದೆ, ಒಂದು ಬಾರಿ ಬಿಜೆಪಿ ಹೈಕಮಾಂಡ್ ಹಾಗೂ ಮತ್ತೊಂದು ಬಾರಿ ಕಾಂಗ್ರೆಸ್ ಹೈಕಮಾಂಡ್‌ನಿಂದ ಮುಖ್ಯಮಂತ್ರಿ ಆಗಿದ್ದೆ. ನಾನು ನನ್ನ ಸ್ವಂತ ಬಲದಿಂದ ಮುಖ್ಯಮಂತ್ರಿ ಆಗಿದ್ದೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಗಳವಾರ ನಗರದಲ್ಲಿರುವ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೆಂಬಲದಿಂದ ನಾನು ಮುಖ್ಯಮಂತ್ರಿ ಆಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ನನ್ನನ್ನು ಮುಖ್ಯಮಂತ್ರಿ ಮಾಡಿತ್ತು ಎಂದರು.

‘ಬೇರೆ ಪಕ್ಷಗಳ ಹೆಗಲ ಮೇಲೆ ಕೂತು ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರೆ, ನೀವು ಸ್ವಂತ ಬಲದಿಂದ ಮುಖ್ಯಮಂತ್ರಿಯಾಗಲೂ ಎಂದಾದರೂ ಸಾಧ್ಯವೇ?’ ಎಂದು ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿ ಮುಖ್ಯಮಂತ್ರಿ ಆಗಿ ಅವರು ಐದು ವರ್ಷ ಮಜಾ ಮಾಡಿದ್ದು ನನಗೆ ಗೊತ್ತಿಲ್ವಾ? ಕಾಂಗ್ರೆಸ್ ಪಕ್ಷ ಬಿಟ್ಟು ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಲಿ ನೋಡೋಣ. ಕಾಂಗ್ರೆಸ್ ಶಕ್ತಿ ಧಾರೆ ಎರೆಸಿಕೊಂಡು ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು ಎಂದು ಅವರು ಟೀಕಿಸಿದರು. ರೈತರಿಗೆ ಕೊಟ್ಟಿದ್ದ ಸಾಲಮನ್ನಾ ಮಾತು ಉಳಿಸಿಕೊಳ್ಳಲು ನಾನು ಸರಕಾರ ಮಾಡಿದೆ. ರೈತರಿಗೋಸ್ಕರ ನಾನು ಮುಖ್ಯಮಂತ್ರಿ ಆಗಿ ಇದ್ದೆ ಅಷ್ಟೇ. ನನಗೋಸ್ಕರ ನಾನು ಮುಖ್ಯಮಂತ್ರಿ ಆಗಿ ಇರಲಿಲ್ಲ. ಸಿದ್ದರಾಮಯ್ಯ ಅವರಿಂದ ನನಗೇನು ಲಾಭ ಆಗಿಲ್ಲ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾಗ ನನ್ನ ಮನೆ ದುಡ್ಡು ಹಾಕಿದ್ದೇನೆ. ಅವರ ಪರವಾಗಿ ಬ್ಯಾನರ್ ಹಾಕಿಸಿದ್ದೇನೆ. ನಾನು ತಂದ ಹಣ ದೇವೇಗೌಡರ ದುಡ್ಡಲ್ಲ. ಕಾಂಗ್ರೆಸ್ ಅವರು ನನ್ನನ್ನ ಬಳಸಿಕೊಂಡು ಬಿಸಾಕಿದರು. ನಾನು ಯಾರನ್ನು ಬಳಸಿಕೊಂಡು ಬಿಸಾಕಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಅಭ್ಯರ್ಥಿಗಳ ಘೋಷಣೆ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ಅಂದು ನಡೆಯಲಿರುವ ಪಕ್ಷದ ಸಂಸದೀಯ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದರು.

ಈಗಾಗಲೇ ಯಶವಂತಪುರ, ಮಹಾಲಕ್ಷ್ಮಿ, ಚಿಕ್ಕಬಳ್ಳಾಪುರ ಮುಖಂಡರ ಸಭೆ ಮಾಡಿದ್ದೇವೆ. ನಾಳೆ ಅಥಣಿ, ಕಾಗವಾಡ ಸೇರಿದಂತೆ ಹಲವು ಕ್ಷೇತ್ರಗಳ ಸಭೆ ಮಾಡುತ್ತೇವೆ. ನಾಡಿದ್ದು ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ನನ್ನನ್ನು ಬಳಸಿಕೊಂಡು ಬಿಸಾಕಿದರು

ಸಿದ್ದರಾಮಯ್ಯ ನೆರಳಲ್ಲಿ ನಾನು ರಾಜಕೀಯ ಮಾಡಿಲ್ಲ. ನನ್ನ ಮನೆ ದುಡ್ಡು ಹಾಕಿ ರಾಜಕೀಯ ಮಾಡಿದ್ದೇನೆ. ನನ್ನ ಸಿನಿಮಾ ಹಣ ತಂದು ರಾಜಕಾರಣಕ್ಕೆ ಹಾಕಿದ್ದೇನೆ. ಕಾಂಗ್ರೆಸ್ ಅವರು ನನ್ನನ್ನು ಬಳಸಿಕೊಂಡು ಬಿಸಾಕಿದರು. ಮುಖ್ಯಮಂತ್ರಿಯಾಗುವಂತೆ ನನ್ನ ಮನೆ ಬಾಗಿಲಿಗೆ ಬಂದಿದ್ದು ಅವರು, ನಾನೇನು ಅವರ ಮನೆ ಬಾಗಿಲಿಗೆ ಹೋಗಿರಲಿಲ್ಲ.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News