ಆನೆ ಶಿಬಿರಗಳ ಪರಿಸ್ಥಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಿ: ಹೈಕೋರ್ಟ್ ಆದೇಶ
ಬೆಂಗಳೂರು, ಸೆ.15: ಆನೆ ಶಿಬಿರಗಳ ಪರಿಸ್ಥಿತಿ ಅಧ್ಯಯನಕ್ಕೆ ರಚನೆಗೊಂಡಿರುವ ಮೂರು ಜನರ ಸಮಿತಿಯು ಆನೆಗಳ ಶಿಬಿರಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅಧ್ಯಯನ ನಡೆಸಿ ಅ.30ರೊಳಗೆ ವರದಿ ಸಲ್ಲಿಸಲು ಹೈಕೋರ್ಟ್ ಆದೇಶಿಸಿದೆ. ಈ ಕುರಿತು ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಆನೆ ಶಿಬಿರಗಳ ಪರಿಸ್ಥಿತಿ ಅಧ್ಯಯನ ನಡೆಸಲು ತಮಿಳುನಾಡಿನ ವೈದ್ಯ ಕಳೈವಣ್ಣನ್, ನೋಯಿಡಾದ ವೈದ್ಯ ಅಶ್ರಫ್ ಹಾಗೂ ಕರ್ನಾಟಕದ ಚಿನ್ನಪ್ಪ ಅವರನ್ನು ಒಳಗೊಂಡ ಸಮಿತಿ ರಚನೆಗೆ ಅನುಮತಿ ನೀಡಬೇಕೆಂದು ಸರಕಾರಿ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ನ್ಯಾಯಪೀಠವು ಈ ಮೂರು ಜನರ ಸಮಿತಿ ರಚನೆ ಮಾಡಬೇಕು. ಹಾಗೂ ಈ ಸಮಿತಿಯು ಶಿಬಿರಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ವರದಿ ಸಲ್ಲಿಸಬೇಕೆಂದು ಆದೇಶಿಸಿ, ವಿಚಾರಣೆಯನ್ನು ನ.5ಕ್ಕೆ ಮುಂದೂಡಿತು.
ಏನಿದು ಅರ್ಜಿ: ಮೈಸೂರು, ಮಡಿಕೇರಿ, ಶಿವಮೊಗ್ಗ ಸೇರಿ ರಾಜ್ಯದ ಆನೆ ಶಿಬಿರಗಳಲ್ಲಿ ಆಹಾರ, ನೀರು ಮತ್ತು ಔಷಧ ವ್ಯವಸ್ಥೆ ಇಲ್ಲದೆ ಆನೆಗಳು ಸಾವನ್ನಪ್ಪುತ್ತಿವೆ. ಈ ಬಗ್ಗೆ ವಾಸ್ತವಾಂಶಗಳನ್ನು ತಿಳಿದುಕೊಳ್ಳಲು ಉನ್ನತ ಮಟ್ಟದ ಸಮಿತಿ ರಚಿಸಲು ಸರಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.