ರಮೇಶ್ ಕುಮಾರ್ ವಿಚಾರದಲ್ಲಿ ಸಿದ್ದರಾಮಯ್ಯ-ಕೆ.ಎಚ್.ಮುನಿಯಪ್ಪ ನಡುವೆ ವಾಗ್ವಾದ ?

Update: 2019-09-26 13:50 GMT

ಬೆಂಗಳೂರು, ಸೆ.26: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಇಂದು ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ನಡುವೆ ವಾಗ್ವಾದ ನಡೆದಿರುವ ಕುರಿತು ತಿಳಿದು ಬಂದಿದೆ.

ಲೋಕಸಭಾ ಚುನಾವಣೆಯ ಸೋಲಿನ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಮುನಿಯಪ್ಪ, ರೋಷನ್ ಬೇಗ್ ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ಹೇಳಿಕೆ ನೀಡುತ್ತಿದ್ದಂತೆ ಪಕ್ಷದಿಂದ ಉಚ್ಛಾಟನೆ ಮಾಡಲಾಯಿತು. ಆದರೆ, ಬಿಜೆಪಿ ಜೊತೆ ಕೈ ಜೋಡಿಸಿ ನನ್ನ ಸೋಲಿಗೆ ಕಾರಣರಾದವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ರನ್ನು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ವಿಚಾರವನ್ನು ಪ್ರಸ್ತಾಪಿಸಲು ಇದು ಸೂಕ್ತ ಸಂದರ್ಭವಲ್ಲ ಎಂದರು. ಇದರಿಂದ ಕೆರಳಿದ ಮುನಿಯಪ್ಪ, ಪಕ್ಷದ ವಿಚಾರವನ್ನು ನಾಲ್ಕು ಗೋಡೆಗಳ ಮಧ್ಯೆ ಮಾತನಾಡದೆ ಇನ್ನು ಎಲ್ಲಿ ಮಾತನಾಡಬೇಕು ಎಂದು ಮುನಿಯಪ್ಪ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರ ಬಳಿ ಹಣ ತೆಗೆದುಕೊಂಡು ರಮೇಶ್ ಕುಮಾರ್ ನನ್ನ ಸೋಲಿಗೆ ಕೆಲಸ ಮಾಡಿದ್ದಾನೆ. ಆತನ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಾ? ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಳ್ಳುವಾಗ ಇದ್ದ ಆತುರ, ರಮೇಶ್ ಕುಮಾರ್ ಬಗ್ಗೆ ಯಾಕಿಲ್ಲ ಎಂದು ಮುನಿಯಪ್ಪ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷಕ್ಕೆ ದ್ರೋಹ ಎಸಗಿರುವವರನ್ನು ಜೊತೆಯಲ್ಲಿ ಕರೆದುಕೊಂಡು ತಿರುಗಾಡುತ್ತಿದ್ದೀರಾ? ಸಭೆ, ಸಮಾರಂಭಗಳಲ್ಲಿ ತಮ್ಮ ಪಕ್ಕದಲ್ಲೆ ಕೂರಿಸಿಕೊಳ್ಳುತ್ತೀರ. ಇದೆಲ್ಲ ಸರಿಯಾ? ಮೊದಲು ಪಕ್ಷ ದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿದ್ದರಾಮಯ್ಯ ವಿರುದ್ಧ ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಇದರಿಂದ ಆಕ್ರೋಶಗೊಂಡ ಸಿದ್ದರಾಮಯ್ಯ ಸಭೆಯಿಂದ ಹೊರಡಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಹಾಗೂ ಮುನಿಯಪ್ಪರನ್ನು ಸಮಾಧಾನಪಡಿಸಿದರು ಎಂದು ತಿಳಿದು ಬಂದಿದೆ.

ಇದೇ ವೇಳೆ ದಿನೇಶ್ ಗುಂಡೂರಾವ್‌ರನ್ನು ತರಾಟೆಗೆ ತೆಗೆದುಕೊಂಡ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ನೀವು ಕೆಪಿಸಿಸಿಗೆ ಅಧ್ಯಕ್ಷರೆ ಅಥವಾ ಕಾಂಗ್ರೆಸ್‌ನಲ್ಲಿರುವ ಒಂದು ಗುಂಪಿನ ಅಧ್ಯಕ್ಷರೇ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವ ಬದಲು, ಈ ರೀತಿ ಗುಂಪುಗಾರಿಕೆಗೆ ಅವಕಾಶ ಕೊಟ್ಟಿರುವುದು ಏಕೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News